
ಬೆಂಗಳೂರು, ಆಗಸ್ಟ್ 30: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬಳಕೆಯನ್ನು ಉತ್ತೇಜಿಸಲು ಹಾಗೂ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸಲು ಕರ್ನಾಟಕ ಸರ್ಕಾರ ಬೃಹತ್ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ (PM E-DRIVE) ಯೋಜನೆಯಡಿ ರಾಜ್ಯದ ವಿವಿಧ ಸರ್ಕಾರಿ ಆಸ್ತಿ ಹಾಗೂ ಜಾಗಗಳಲ್ಲಿ ಒಟ್ಟು 1,250 ಸಾರ್ವಜನಿಕ ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲು ಚಟುವಟಿಕೆಗಳನ್ನು ಚುರುಕುಗೊಳಿಸಲಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗುರುತಿಸಲಾದ ಜಾಗಗಳನ್ನು ತಕ್ಷಣವೇ ಹಸ್ತಾಂತರಿಸಲು ಸೂಚಿಸಿದ್ದಾರೆ. ಈ ಯೋಜನೆಯಡಿ ಎರಡು ಪ್ರಮುಖ ವಿಭಾಗಗಳಲ್ಲಿ ಚಾರ್ಜಿಂಗ್ ಕೇಂದ್ರಗಳು ಬರಲಿವೆ ಎಂದು ದಿ ಹಿಂದು ವರದಿ ಮಾಡಿದೆ.
ಮೊದಲ ಹಂತದಲ್ಲಿ ಕೇಂದ್ರ ಭಾರಿ ಕೈಗಾರಿಕೆಗಳ ಸಚಿವಾಲಯವು ಸಮೀಕ್ಷೆ ನಡೆಸಿದ 687 ಜಾಗಗಳ ಪೈಕಿ 515 ತಾಣಗಳಿಗೆ ಈಗಾಗಲೇ ಅನುಮೋದನೆ ದೊರೆತಿದೆ. 33ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳ ಜಾಗವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.
ಈ ಸಾರ್ವಜನಿಕ ಇವಿ ಚಾರ್ಜಿಂಗ್ ಕೇಂದ್ರಗಳು ಸಾರ್ವಜನಿಕರಿಗೆ ದಿನದ 24 ಗಂಟೆಯೂ ಲಭ್ಯವಿರಲಿವೆ. ವಾಹನಗಳ ಸುಲಭ ಸಂಚಾರಕ್ಕಾಗಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ ಕಲ್ಪಿಸಲಾಗುವುದು. ಕೇಂದ್ರ ಇಂಧನ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಜಾಗ ನೀಡುವ ಸರ್ಕಾರಿ ಇಲಾಖೆಗಳಿಗೆ ಬಳಕೆಯಾಗುವ ಪ್ರತಿಯೊಂದು ಯೂನಿಟ್ (kWh) ವಿದ್ಯುತ್‌ಗೆ 1 ರೂಪಾಯಿಯಂತೆ ಆದಾಯದ ಪಾಲು (Revenue share) ಸಿಗಲಿದೆ.
ಈ ಯೋಜನೆಗಾಗಿ ಬೆಸ್ಕಾಂ ಮತ್ತು ಸಂಬಂಧಿತ ಇಲಾಖೆಗಳ ನಡುವೆ 10 ವರ್ಷಗಳ ಒಪ್ಪಂದ ಏರ್ಪಡಲಿದ್ದು, ಬೆಸ್ಕಾಂ ಸಂಸ್ಥೆಯು ಈ ಕೇಂದ್ರಗಳ ಸ್ಥಾಪನೆ, ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಹೊರಲಿದೆ. ಸಾರ್ವಜನಿಕರು ಸುಲಭವಾಗಿ ಚಾರ್ಜಿಂಗ್ ಸ್ಪಾಟ್‌ಗಳನ್ನು ಹುಡುಕಲು ಹಾಗೂ ಪಾವತಿ ಮಾಡಲು ಬೆಸ್ಕಾಂನ ‘EV Mitra’ (ಇವಿ ಮಿತ್ರ) ಆ್ಯಪ್‌ನೊಂದಿಗೆ ಇವುಗಳನ್ನು ಸಂಯೋಜಿಸಲಾಗುತ್ತದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ