Bengaluru: ಬೆಂಗಳೂರಿನಲ್ಲಿ ಸದ್ಯಕ್ಕೆ ತಪ್ಪಲ್ಲ ಬೀದಿ ನಾಯಿ ಹಾವಳಿ; ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರಿಂದ ಅಸಮಾಧಾನ
Bangalore News: ಬೆಂಗಳೂರಿನ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಕರ್ನಾಟಕ ಪಶುಸಂಗೋಪನಾ ಇಲಾಖೆ ನಿರಾಕರಿಸಿದೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಬೆಂಗಳೂರು: ಬೆಂಗಳೂರಿನಲ್ಲಿ ಬೀದಿ ನಾಯಿಗಳ (Street Dogs) ಹಾವಳಿ ಹೆಚ್ಚಾಗಿದ್ದು, ಒಂದು ತಿಂಗಳಲ್ಲಿ ಸುಮಾರು 2 ಸಾವಿರ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಕೆಲವರಿಗೆ ರೇಬಿಸ್ ಲಕ್ಷಣಗಳು ಕೂಡ ಕಂಡುಬಂದಿವೆ. ಹೀಗಾಗಿ, ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ (Bangalore) ಜನರು ಒತ್ತಾಯಿಸಿದ್ದರು. ಆದರೆ, ಬೀದಿ ನಾಯಿಗಳನ್ನು ಹಿಡಿದು ಬೆಂಗಳೂರಿನ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಕರ್ನಾಟಕ ಪಶುಸಂಗೋಪನಾ ಇಲಾಖೆ ನಿರಾಕರಿಸಿದೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಪಶುಸಂಗೋಪನಾ ಇಲಾಖೆ ತನ್ನ ಹಿಂದಿನ ಆದೇಶವನ್ನು ಪುನರುಚ್ಛರಿಸಿದ್ದು, ಬೆಂಗಳೂರಿನ ಬೀದಿ ನಾಯಿಗಳು ಬೀದಿಯಲ್ಲಿಯೇ ಉಳಿಯುತ್ತವೆ ಎಂದು ಹೇಳಿದೆ. ಬೆಂಗಳೂರಿನಿಂದ ನಾಯಿಗಳನ್ನು ಸ್ಥಳಾಂತರಿಸದಿರಲು ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಬೀದಿ ನಾಯಿಗಳನ್ನು ಬೇರೆಡೆ ಶಿಫ್ಟ್ ಮಾಡಲು ಬೆಂಗಳೂರಿನ ನಿವಾಸಿಗಳು ಸಾಕಷ್ಟು ದೂರು ನೀಡಿದ್ದರು. ಆದರೂ ಅದಕ್ಕೆ ಬಿಬಿಎಂಪಿ ಒಪ್ಪಿಗೆ ನೀಡಿಲ್ಲ.
ಸಂಬಂಧಪಟ್ಟ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮಾಲೋಚನೆ ಬಳಿಕ ಬೀದಿಗಿಳಿದ ನಾಯಿಗಳನ್ನು ಓಡಿಸದಿರಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಭು ಬಿ ಚೌಹಾಣ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾಯಿಗಳು ಎಲ್ಲೇ ಇದ್ದರೂ ಅವುಗಳಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದೆ ಎಂದಿದ್ದಾರೆ. ಪಶುಸಂಗೋಪನಾ ಸಚಿವ ಪ್ರಭು ಬಿ. ಚೌಹಾಣ್ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಬೀದಿ ನಾಯಿಗಳಿಗೆ “ಬಂಜೆತನ ಮತ್ತು ರೇಬಿಸ್” ಲಸಿಕೆ ಹಾಕಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Shocking News: ಮನೆ ಹೊರಗೆ ಆಡುತ್ತಿದ್ದ ಅಣ್ಣ-ತಂಗಿ ಮೇಲೆ 20ಕ್ಕೂ ಹೆಚ್ಚು ಬೀದಿ ನಾಯಿಗಳ ದಾಳಿ; ಬಾಲಕ ಸಾವು
ಪಶುಪಾಲನೆ ಇಲಾಖೆ ಮತ್ತು ಬಿಬಿಎಂಪಿ ಪ್ರತಿದಿನ 400ಕ್ಕೂ ಹೆಚ್ಚು ನಾಯಿಗಳಿಗೆ ಲಸಿಕೆ ಹಾಕಲು ನಿರ್ಧರಿಸಿದೆ. ಲಸಿಕೆ, ಚಿಕಿತ್ಸೆ, ಆ್ಯಂಟಿಬಯೋಟಿಕ್ ಲಸಿಕೆಗಳನ್ನು ನೀಡುವಂತೆ ಬಿಬಿಎಂಪಿ ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. 2020ರಿಂದ ಇಲ್ಲಿಯವರೆಗೆ ಬೆಂಗಳೂರಿನಲ್ಲಿ 52 ಸಾವಿರಕ್ಕೂ ಹೆಚ್ಚು ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಓರ್ವ ಮಹಿಳೆಗೆ ರೇಬಿಸ್ ತಗುಲಿ ಮೃತಪಟ್ಟಿದ್ದರು. ನಗರದಲ್ಲಿ ತಿಂಗಳಿಗೆ ಸರಾಸರಿ 2,177 ಜನರು ಬೀದಿ ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಆದರೂ ಬೀದಿ ನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಲು ಇಲಾಖೆ ಒಪ್ಪಿಗೆ ನೀಡಿಲ್ಲ.