ಸಸ್ಪೆಂಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್ ನೇಮಕ

ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಸಸ್ಪೆಂಡ್ ಮಾಡಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರ್​ ದಯಾನಂದ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಹೊಸ ಆಯುಕ್ತರನ್ನು ನೇಮಕ ಮಾಡಲಾಗಿದೆ. ಹಾಗಾದ್ರೆ ಯಾರು ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರು? ಅವರ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಸಸ್ಪೆಂಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್ ನೇಮಕ
Seemant Kumar Singh

Updated on: Jun 05, 2025 | 11:44 PM

ಬೆಂಗಳೂರು, ಜೂನ್ 05): ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ಚಾಂಪಿಯನ್ ಆಗಿದ್ದು, ಈ​ ವಿಜಯೋತ್ಸವದ ವೇಳೆ ಚಿನ್ನಾಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ (RCB victory parade stampede Case) 11 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದಾಗಿ ಕಲವೇ ಗಂಟೆಗಳಲ್ಲಿ ರಾಜ್ಯ ಸರ್ಕಾರ, ಹೊಸ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಅವರನ್ನು ನೇಮಕ ಮಾಡಿದೆ. ಸೀಮಂತ್​ ಕುಮಾರ್ ಸಿಂಗ್ ( seemant kumar singh) ಅವರನ್ನು ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್ ಆಗಿ​ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಅಮಾನತು ಮಾಡಲಾಗಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಹೊಸ ಆಯುಕ್ತರನ್ನು ನೇಮಕ ಮಾಡಲಾಗಿದೆ. 1996 ಬ್ಯಾಚ್ ನ ಐಪಿಎಸ್ ಅಧಿಕಾರಿ, ಬಿಹಾರ ಮೂಲದವರಾಗಿರುವ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬೆಂಗಳೂರಿಗೆ ನೂತನ ಪೊಲೀಸ್​ ಕಮಿಷನರ್​ ನೇಮಕ ಮಾಡಿ ರಾಜ್ಯ ಆದೇಶ ಹೊರಡಿಸಿದೆ.

ಇದನ್ನೂ ಓದಿ: Bengaluru Stampede: ಪೊಲೀಸ್ ಆಯುಕ್ತ ದಯಾನಂದ್ ಮಾಡಿದ ತಪ್ಪೇನು?; ಅಮಾನತಿಗೆ ಕಾರಣ ನೀಡಿದ ಸರ್ಕಾರ

ಯಾರು ಈ ಸೀಮಂತ್‌ ಕುಮಾರ್‌ ಸಿಂಗ್‌?

1996 ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದ ಬಿಹಾರ ಮೂಲದ ಸೀಮಂತ್ ಕುಮಾರ್, ಈ ಹಿಂದೆ ಬೆಂಗಳೂರು ಪೂರ್ವ ವಲಯ ಹೆಚ್ಚುವರಿ ಆಯುಕ್ತರಾಗಿ, ಎಸಿಬಿಯಲ್ಲಿ ಎಡಿಜಿಪಿಯಾಗಿ, ಕೆಎಸ್ಆರ್ ಪಿ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಬಿಎಂಟಿಎಫ್ (ಬೆಂಗಳೂರು ಮಹಾನಗರ ಕಾರ್ಯಪಡೆ) ಎಡಿಜಿಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಇದೀಗ ಬೆಂಗಳೂರಿಗೆ 39ನೇ ನೂತನ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ.

ಸೀಮಂತ್‌ ಕುಮಾರ್‌ ಸಿಂಗ್‌ ಮಂಗಳೂರು ನಗರಕ್ಕೆ ಕಮಿಷನರೇಟ್ ಬಂದ ಬಳಿಕ ಮೊದಲ ಪೊಲೀಸ್ ಕಮಿಷನರ್ ಆಗಿದ್ದರು. 2000ದಿಂದ 2004ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆ ಬಳಿಕ 2014ರಲ್ಲಿ ಪಶ್ಚಿಮ ವಲಯದ ಐಜಿಪಿಯಾಗಿದ್ದರು. ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿದ್ದ ಸೀಮಂತ್‌ ಕುಮಾರ್‌ ಸಿಂಗ್‌ ಡಿಐಜಿ ಮತ್ತು ನಕ್ಸಲ್ ನಿಗ್ರಹ ಪಡೆ (ANF)ನ ಕಮಾಂಡರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು.

Published On - 11:14 pm, Thu, 5 June 25