BMRCL ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ: ಕೇಂದ್ರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ; ಹೈಕೋರ್ಟ್ ಮಹತ್ವದ ತೀರ್ಪು
ಕರ್ನಾಟಕ ಹೈಕೋರ್ಟ್ ಬಿಎಂಆರ್‌ಸಿಎಲ್ ಅನ್ನು ಅತ್ಯವಶ್ಯಕ ಸೇವೆ ವ್ಯಾಪ್ತಿಗೆ ತರುವ ರಾಜ್ಯ ಸರ್ಕಾರದ ಅಧಿಕಾರವನ್ನು ರದ್ದುಪಡಿಸಿದೆ. ಜುಲೈ 7, 2017ರ ಸರ್ಕಾರದ ಆದೇಶವನ್ನು ಏಕಸದಸ್ಯ ಪೀಠ ರದ್ದುಗೊಳಿಸಿದ್ದು, ಬಿಎಂಆರ್‌ಸಿಎಲ್ ಪ್ರತ್ಯೇಕ ಕಂಪನಿಯಲ್ಲ, ರೈಲ್ವೆ ಕಂಪನಿ ಎಂದು ತೀರ್ಪು ನೀಡಿದೆ. ಹೀಗಾಗಿ, ಆಡಳಿತಾತ್ಮಕ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಸ್ಪಷ್ಟಪಡಿಸಿದೆ.

ಬೆಂಗಳೂರು, ನವೆಂಬರ್ 07: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅತ್ಯವಶ್ಯಕ ಸೇವೆ ವ್ಯಾಪ್ತಿಗೊಳಪಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಕೇಂದ್ರ ಸರ್ಕಾರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ ಎಂದು ಹೈಕೋರ್ಟ್ (High Court) ಏಕಸದಸ್ಯ ಪೀಠ ಸ್ಪಷ್ಟಪಡಿಸಿದೆ. ಆ ಮೂಲಕ 2017ರ ಜುಲೈ 7ರ ರಾಜ್ಯ ಸರ್ಕಾರದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಕೈಗಾರಿಕಾ ವಿವಾದ ಕಾಯ್ದೆಯಡಿ ಎಸ್ಮಾ ಜಾರಿ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಬಿಎಂಆರ್‌ಸಿಎಲ್ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮಾಡಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಬೆಂಗಳೂರು, ದೆಹಲಿ, ಮುಂಬೈ ಮೆಟ್ರೋ ದರ ವ್ಯತ್ಯಾಸವೆಷ್ಟು? ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ವಾದ ಪ್ರತಿವಾದ ಆಲಿಸಿದ ಏಕಸದಸ್ಯ ಪೀಠ, ಕೈಗಾರಿಕಾ ವಿವಾದ ಕಾಯ್ದೆಯ ಸೆಕ್ಷನ್ 2(n)(vi) ಅಡಿಯಲ್ಲಿ ಬಿಎಂಆರ್‌ಸಿಎಲ್ ಸೇವೆಗಳನ್ನು ಸಾರ್ವಜನಿಕ ಉಪಯುಕ್ತತೆ ಸೇವೆ ಎಂದು ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯ ಸೆಕ್ಷನ್ 2(1) ಅಡಿಯಲ್ಲಿ ಅಗತ್ಯ ಸೇವೆ ಎಂದು ಅಧಿಸೂಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ. ಬಿಎಂಆರ್‌ಸಿಎಲ್ ಪ್ರತ್ಯೇಕ ಕಂಪನಿಯಲ್ಲ, ರೈಲ್ವೆ ಕಂಪನಿ. ಹೀಗಾಗಿ ಕೇಂದ್ರ ಸರ್ಕಾರವೇ ಆಡಳಿತಾತ್ಮಕ ಅಧಿಕಾರ ಹೊಂದಿದೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ: ಅತ್ಯಂತ ದುಬಾರಿ ನಮ್ಮ ಮೆಟ್ರೋ: ದೆಹಲಿ ಮೆಟ್ರೋ ದರ ಏರಿಕೆ ಜತೆ ಹೋಲಿಸಿ ಸರ್ಕಾರದ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ
ಬಿಎಂಆರ್‌ಸಿಎಲ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಶೇ 50 ರಷ್ಟು ಪಾಲನ್ನು ಹೊಂದಿವೆ. ಆದಾಗ್ಯೂ, ಪ್ರಮುಖ ಆಡಳಿತಾತ್ಮಕ ಕ್ರಮಗಳಲ್ಲಿ ಅಂತಿಮ ನಿರ್ಧಾರ ಕೇಂದ್ರ ಸರ್ಕಾರದದ್ದಾಗಿದ್ದು, ಕೆಲವು ನಿರ್ಣಾಯಕ ಆಡಳಿತಾತ್ಮಕ ನಿರ್ಧಾರಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದಿಂದ ಅನುಮೋದನೆಗಳು ಅಥವಾ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:58 pm, Fri, 7 November 25



