Republic Day 2022: ಕೊರೊನಾ ಹಿನ್ನೆಲೆ ಶಾಲೆಗಳಲ್ಲಿ ಸರಳ ಗಣರಾಜ್ಯೋತ್ಸವ ಆಚರಣೆಗೆ ಸರ್ಕಾರ ಸೂಚನೆ
ಸದ್ಯ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡುವಂತೆ ರಾಜ್ಯ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ.
ಬೆಂಗಳೂರು: ಭಾರತವು 73ನೇ ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗುತ್ತಿದೆ. ಪ್ರತಿ ವರ್ಷದಂತೆ ಜನವರಿ 26ರಂದು ಇಡೀ ಭಾರತದಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಲ್ಲಿ ಆಚರಿಸಲಾಗುತ್ತೆ. ಸದ್ಯ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಸರಳವಾಗಿ ಗಣರಾಜ್ಯೋತ್ಸವ ಆಚರಣೆ ಮಾಡುವಂತೆ ರಾಜ್ಯ ಶಿಕ್ಷಣ ಇಲಾಖೆ ಶಾಲೆಗಳಿಗೆ ಸೂಚನೆ ನೀಡಿದೆ.
ಇನ್ನು ಮತ್ತೊಂದೆಡೆ ಗಣರಾಜ್ಯೋತ್ಸವ ಹಿನ್ನೆಲೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ನೆರವೇರಿಸಲು ರಾಜ್ಯ ಸರ್ಕಾರ ಸಚಿವರು, ಡಿಸಿಗಳ ನೇಮಕ ಮಾಡಿದೆ. ಆಯಾ ಜಿಲ್ಲೆಯ ಉಸ್ತುವಾರಿಗಳಿಂದ ಧ್ವಜಾರೋಹಣ ಮಾಡಲು ಸೂಚಿಸಿದ್ದು ಗದಗ, ಬೀದರ್, ಹಾಸನದಲ್ಲಿ ಡಿಸಿಗಳಿಂದ ಧ್ವಜಾರೋಹಣಕ್ಕೆ ಸೂಚಿಸಲಾಗಿದೆ. ಒಟ್ಟು ಒಟ್ಟು 30 ಜಿಲ್ಲೆಗಳ ಪೈಕಿ 27 ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿಗಳಿಂದ ಧ್ವಜಾರೋಹಣಕ್ಕೆ ಆದೇಶಿಸಿದ್ದು ಹಾಸನ, ಗದಗ, ಬೀದರ್ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣಕ್ಕೆ ಸೂಚಿಸಲಾಗಿದೆ.
ಜನವರಿ 26ರ ಗಣರಾಜ್ಯೋತ್ಸವಕ್ಕೆ (Republic Day) ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ (Manekshaw Parade Ground) ಸಕಲ ಸಿದ್ಧತೆ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಸಿದ್ಧತೆಯನ್ನು ಪರಿಶೀಲನೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧಿಕಾರಿಗಳು, 26ರಂದು ಬೆಳಗ್ಗೆ 8.58ಕ್ಕೆ ರಾಜ್ಯಪಾಲರು ಆಗಮಿಸುತ್ತಾರೆ. ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರಿಂದ ರಾಷ್ಟ್ರ ಧ್ವಜಾರೋಹಣ ನೆರವೇರುತ್ತದೆ ಅಂತ ತಿಳಿಸಿದರು.
ಧ್ವಜಾರೋಹಣ ಬಳಿಕ ರಾಜ್ಯಪಾಲರು ಗೌರವರಕ್ಷೆ ಸ್ವೀಕರಿಸುತ್ತಾರೆ. ನಾಡಿನ ಜನತೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವ ಸಂದೇಶ ಸಾರಲಿದ್ದಾರೆ. ಬಳಿಕ ನಾಡಗೀತೆ, ರೈತ ಗೀತೆಯನ್ನು ಹಾಡಲಾಗುತ್ತದೆ ಅಂತ ಬೆಂಗಳೂರಿನಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿ ಮಂಜುನಾಥ್ ಹೇಳಿದರು.
26ಕ್ಕೆ ಬಿಗಿ ಭದ್ರತೆ ಈ ಹಿಂದೆ ದೇಶದಲ್ಲಿ ಕೆಲ ಘಟನೆಗಳು ನಡೆದಿದ್ದು, ಅದರ ಆಧಾರದ ಮೇಲೆ ಈ ಬಾರಿ ಪೊಲೀಸ್ ಭದ್ರತೆ ನೀಡಲಾಗುತ್ತದೆ. ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಒಟ್ಟು 16 ತುಕಡಿಗಳು, 5 ವಾದ್ಯ ವೃಂದ, 2 ಡ್ಯಾಗ್ ಸ್ವಾಟ್, 4 ಕ್ಯೂ ಆರ್ಡಿ, 2 ಆರ್ಐವಿ, 6 ಅಶ್ವ ತಂಡಗಳು ಪರೇಡ್ನಲ್ಲಿ ಭಾಗಿಯಾಗಲಿವೆ ಅಂತ ಕಮಲ್ ಪಂತ್ ತಿಳಿಸಿದರು. ಒಟ್ಟು 29 ಅಧಿಕಾರಿಗಳು, 464 ಸಿಬ್ಬಂದಿಗಳು ಕವಾಯಿತಿನಲ್ಲಿ ಭಾಗಿಯಾಗುತ್ತಾರೆ. ಪರೇಡ್ ಸುತ್ತಲೂ ಭದ್ರತೆಗೆ 11 ಡಿಸಿಪಿ, 20 ಎಸಿಪಿ, 60 ಪೊಲೀಸ್ ಇನ್ಸ್ಪೆಕ್ಟರ್, 125 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಒಟ್ಟು 1,400 ಜನ ಪೊಲೀಸರನ್ನು ಭದ್ರತೆ ನಿಯೋಜನೆ ಮಾಡಲಾಗಿದೆ ಎಂದರು.
ಇನ್ನು ಮೈದಾನದ ಸುತ್ತಲೂ ಸಿಸಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗುವುದು. ಪಾಸ್ ಇಲ್ಲದವರಿಗೆ ಪ್ರವೇಶ ಇರುವುದಿಲ್ಲ ಈ ಬಾರಿ ಆಂಧ್ರಪ್ರದೇಶದ ಪೊಲೀಸರು ಕವಾಯತಿನಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್, ಜನವರಿ26 ರಂದು ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಲಿರುವ ಮಾರ್ಗಗಳನ್ನ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಕೇಸರಿ, ಬಿಳಿ, ಹಸಿರಿನ ಮೇಕಪ್ ಹೀಗಿರಲಿ; ಇಲ್ಲಿದೆ ಸಿಂಪಲ್ ಟಿಪ್ಸ್
Published On - 3:39 pm, Tue, 25 January 22