ಬಾಲಮಂದಿರಗಳಿಂದ ಮಕ್ಕಳ ನಾಪತ್ತೆ ಪ್ರಕರಣ: ಹೈಕೋರ್ಟ್‌ಗೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ, ಹೇಳಿದ್ದೇನು?
ಬಾಲಮಂದಿರಗಳಿಂದ ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ 484 ಮಕ್ಕಳ ಪೈಕಿ 352 ಮಕ್ಕಳು ಪತ್ತೆಯಾಗಿದ್ದಾರೆ.
ಬೆಂಗಳೂರು: ಬಾಲಮಂದಿರಗಳಿಂದ ಮಕ್ಕಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾದ 484 ಮಕ್ಕಳ ಪೈಕಿ 352 ಮಕ್ಕಳು ಪತ್ತೆಯಾಗಿದ್ದಾರೆ. ಸದ್ಯ ಈ ಪ್ರಕರಣ ಸಂಬಂಧ ಹೈಕೋರ್ಟ್‌ಗೆ ರಾಜ್ಯ ಸರ್ಕಾರ(Karnataka Government) ವರದಿ ಸಲ್ಲಿಸಿದೆ. 2016-2021ರವರೆಗೆ ನಾಪತ್ತೆಯಾದ 132 ಮಕ್ಕಳು ಪತ್ತೆಯಾಗಿಲ್ಲ. ನಾಪತ್ತೆಯಾದವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೈಕೋರ್ಟ್‌ಗೆ(High Court) ರಾಜ್ಯ ಸರ್ಕಾರದ ವಕೀಲರು ಮಾಹಿತಿ ನೀಡಿದ್ದಾರೆ. ಉಳಿದವರ ಪತ್ತೆಗೆ ಕ್ರಮ ವಹಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದು ನಾಲ್ಕು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಕರ್ನಾಟಕ ರಾಜ್ಯ ಸರ್ಕಾರ ನಡೆಸುತ್ತಿರುವ ಬಾಲಮಂದಿರಗಳಿಂದ ಮಕ್ಕಳು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕಾಣೆಯಾಗಿರುವ ಮಕ್ಕಳ ಅಂಕಿ – ಅಂಶದ ಜೊತೆಗೆ ಮಕ್ಕಳು ನಾಪತ್ತೆಯಾಗದಂತೆ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲು ರಾಜ್ಯ ಸರ್ಕಾರ ಕಾಲಾವಕಾಶ ಕೋರಿತ್ತು.
ಕರ್ನಾಟಕದ ಸರ್ಕಾರಿ ಬಾಲ ಮಂದಿರಗಳಲ್ಲಿ 510 ಮಕ್ಕಳು ನಾಪತ್ತೆ; ಆಘಾತಕಾರಿ ಮಾಹಿತಿ ಬಯಲು
ಬಳಿಕ ರಾಜ್ಯ ಸರ್ಕಾರ ನಡೆಸುತ್ತಿರುವ ಬಾಲಮಂದಿರಗಳಿಂದ 141 ಮಕ್ಕಳು ನಾಪತ್ತೆಯಾಗಿರುವ ಕುರಿತು ಕೋಲಾರದ ಕೆ.ಸಿ. ರಾಜಣ್ಣ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲಾಗಿದ್ದು ವಿಚಾರಣೆ ವೇಳೆ ಮಾಹಿತಿ ನೀಡಿದ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ ಬಾಲಮಂದಿರಗಳಿಂದ ಮಕ್ಕಳು ನಾಪತ್ತೆಯಾಗಿರುವ ವಿಚಾರವಾಗಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಮಾಹಿತಿ ಕೇಳಲಾಗಿದೆ. ಈ ಮಾಹಿತಿಯನ್ನು ಸಂಗ್ರಹಿಸಿ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದ್ದರು. ಹಾಗೂ, ಮಕ್ಕಳು ಕಾಣೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವಿವರವಾದ ವರದಿ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.
Published On - 10:56 pm, Tue, 2 August 22