ಸಿಐಡಿ ವಶದಲ್ಲಿರುವ ಆಫ್ರಿಕನ್ ಗ್ರೇ ಗಿಳಿ ಮರಳಿಸುವಂತೆ ಅರ್ಜಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರಿನಲ್ಲಿ ಸಿಐಡಿ ವಶಪಡಿಸಿಕೊಂಡ ಅಪರೂಪದ 'ಆಫ್ರಿಕನ್ ಗ್ರೇ ಗಿಳಿ'ಯನ್ನು ಅದರ ಮಾಲೀಕರಿಗೆ ಮರಳಿಸುವ ಬಗ್ಗೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರ ಹಾಗೂ ಸಿಐಡಿಗೆ ನೋಟಿಸ್ ಜಾರಿ ಮಾಡಿದೆ. ರಾಜಾಜಿನಗರದ ನಿವಾಸಿ ಆರ್. ಮಹೇಶ್‌ ಕುಮಾರ್ ಅವರು ತಮ್ಮ ಅಂಗವಿಕಲ ಸಾಕು ಗಿಳಿಯನ್ನು ವ್ಯಾಪಾರ ಉದ್ದೇಶವಿಲ್ಲದೆ ಆರೈಕೆ ಮಾಡುತ್ತಿರುವುದಾಗಿ ವಾದಿಸಿದ್ದು, ನ್ಯಾಯಾಲಯ ಗಿಳಿ ಮರಳಿಸುವ ಕುರಿತು ವಿಚಾರಣೆ ನಡೆಸಲಿದೆ.

ಸಿಐಡಿ ವಶದಲ್ಲಿರುವ ಆಫ್ರಿಕನ್ ಗ್ರೇ ಗಿಳಿ ಮರಳಿಸುವಂತೆ ಅರ್ಜಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಸಾಂದರ್ಭಿಕ ಚಿತ್ರ

Updated on: Oct 14, 2026 | 11:45 AM

ಬೆಂಗಳೂರು, ಅ.14: ಬೆಂಗಳೂರಿನ ನಿವಾಸಿಯೊಬ್ಬರಿಂದ ಸಿಐಡಿ (CID) ಅರಣ್ಯ ಸಂಚಾರಿ ದಳವು ವಶಪಡಿಸಿಕೊಂಡಿದ್ದ ಅತ್ಯಂತ ಅಪರೂಪದ ‘ಆಫ್ರಿಕನ್ ಗ್ರೇ ಗಿಳಿ’ಯನ್ನುಅವರ ಸುಪರ್ದಿಗೆ ಮರಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡಿದೆ. ಅಪರಾಧ ತನಿಖಾ ದಳದ ಅರಣ್ಯ ಸಂಚಾರಿ ಘಟಕವು ವಶಕ್ಕೆ ಪಡೆದಿರುವ ಸಾಕು ಗಿಳಿಯನ್ನು ತಮಗೆ ಮರಳಿಸಲು ನಿರ್ದೇಶಿಸುವಂತೆ ಕೋರಿ ರಾಜಾಜಿನಗರದ ನಿವಾಸಿ ಆರ್. ಮಹೇಶ್‌ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ. ಎಂ. ಪೂಣಚ್ಚ ಅವರಿದ್ದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರ ಪರ ವಕೀಲರ ಸುದೀರ್ಘ ವಾದ ಆಲಿಸಿದ ನ್ಯಾಯಪೀಠವು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಿಐಡಿ ಅರಣ್ಯ ಸಂಚಾರಿ ದಳ ಈ ಮೂವರಿಗೂ ನೋಟಿಸ್ ಜಾರಿಗೊಳಿಸಿದೆ. ಜೊತೆಗೆ ಅರ್ಜಿ ಕುರಿತು ಪ್ರತಿವಾದಿಗಳಿಂದ ಅಗತ್ಯ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಿ ವಕೀಲರಿಗೆ ನಿರ್ದೇಶನ ನೀಡಿರುವ ಪೀಠ, ಮುಂದಿನ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿದೆ.

ಏನಿದು ಪ್ರಕರಣ? ಅರ್ಜಿದಾರರ ವಾದವೇನು?

ಅರ್ಜಿದಾರ ಮಹೇಶ್ ಕುಮಾರ್ ಅವರು ತಾವು ಸಲ್ಲಿಸಿರುವ ಅರ್ಜಿಯಲ್ಲಿ ಪ್ರಕರಣದ ಹಿನ್ನೆಲೆಯನ್ನು ವಿವರವಾಗಿ ವಿವರಿಸಿದ್ದಾರೆ. “ನಾನು ಮೂಲತಃ ಹಕ್ಕಿ ಪ್ರೇಮಿಯಾಗಿದ್ದು, 2018ರಲ್ಲಿ ನನ್ನ ಸ್ನೇಹಿತರೊಬ್ಬರು ಅಂಗವೈಕಲ್ಯವಿದ್ದ ‘ಆಫ್ರೀಕನ್‌ ಗ್ರೇ ಗಿಳಿ’ಯನ್ನು (ಸಿಟಾಕಸ್‌ ಎರಿಥಕಸ್‌) ನನಗೆ ನೀಡಿದ್ದರು. ಒಂದು ರೆಕ್ಕೆಯಲ್ಲಿ ಚಲನೆ ಇಲ್ಲದ ಕಾರಣಕ್ಕೆ ಆ ಗಿಳಿಗೆ ಹಾರಲು ಸಾಧ್ಯವಾಗುತ್ತಿರಲಿಲ್ಲ. ಮಾನವೀಯತೆಯಿಂದ ನಾನು ವೈದ್ಯಕೀಯ ಚಿಕಿತ್ಸೆ ಕೊಡಿಸಿ ಅದನ್ನು ಅತ್ಯಂತ ಪ್ರೀತಿಯಿಂದ ಆರೈಕೆ ಮಾಡುತ್ತಿದ್ದೆ.” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಬಳಿ ಭಾರೀ ಅವಘಡ: ಭಕ್ತರ ಮೇಲೆಯೇ ಉರುಳಿಬಿದ್ದ ಬೃಹತ್ ಲೈಟ್ ಸೆಟ್

“2026ರ ಜುಲೈ 27ರಂದು ಸಿಐಡಿ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ನನ್ನ ನಿವಾಸದಲ್ಲಿದ್ದ ಗಿಳಿಯನ್ನು ತಮ್ಮ ವಶಕ್ಕೆ ಪಡೆದರು. ಬಳಿಕ ಜುಲೈ 31ರಂದು ನನಗೆ ನೋಟಿಸ್ ಜಾರಿ ಮಾಡಿ, ತನಿಖೆಗೆ ಸಹಕರಿಸಬೇಕು ಮತ್ತು ದಾಖಲೆ ಹಾಜರುಪಡಿಸಬೇಕು ಎಂದು ಸೂಚಿಸಿದರು. ನಿರ್ದೇಶನ ಉಲ್ಲಂಘಿಸಿದರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023ರ (BNSS) ಸೆಕ್ಷನ್‌ 35(3) ಅಡಿಯಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ನಾನು ಆ ಗಿಳಿಯನ್ನು ವ್ಯಾಪಾರದ ಉದ್ದೇಶಕ್ಕಾಗಿ ಖರೀದಿಸಿಲ್ಲ ಅಥವಾ ಮಾರಾಟ ಮಾಡಲು ಯತ್ನಿಸಿಲ್ಲ. ಕೇವಲ ಅಂಗವಿಕಲ ಹಕ್ಕಿಯ ಆರೈಕೆ ಮಾಡುತ್ತಿದ್ದೆ. ಆದ್ದರಿಂದ ಸಿಐಡಿ ನೀಡಿದ ಷೋಕಾಸ್ ನೋಟಿಸ್ ರದ್ದುಪಡಿಸಿ, ನನ್ನ ಗಿಳಿಯನ್ನು ಮರಳಿ ನನ್ನ ಸುಪರ್ದಿಗೆ ನೀಡಲು ಆದೇಶಿಸಬೇಕು” ಎಂದು ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us