ಮಗಳ ಕೂದಲು ಉಳಿಸುವಂತೆ ಹೈಕೋರ್ಟ್ ಮೊರೆ ಹೋದ ಸಿಖ್ ವ್ಯಕ್ತಿ
ಮಗುವಿನ ಧಾರ್ಮಿಕ ಗುರುತು ಬದಲಿಸದಂತೆ ಸೂಚಿಸಬೇಕೆಂದು ಮಗುವಿನ ತಂದೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಗೆ ಮಗುವಿನ ತಾಯಿ ಗೈರುಹಾಜರಾಗಿದ್ದರು
ಬೆಂಗಳೂರು: ತನ್ನ ಮಗಳ ಕೂದಲಿಗೆ ಕತ್ತರಿ ಹಾಕದಂತೆ ಸಿಖ್ ಸಮುದಾಯದ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಮುಂದಿನ ಆದೇಶದವರೆಗೆ ಮಗಳ ಕೂದಲು ಕತ್ತರಿಸದಂತೆ ಹಾಗೂ ಮಗುವಿನ ಧಾರ್ಮಿಕ ಗುರುತು ಬದಲಿಸದಂತೆ ಹೈಕೋರ್ಟ್ ಮಗುವಿನ ತಾಯಿಗೆ ಸೂಚನೆ ನೀಡಿದೆ. ಮಗಳ ಸುಪರ್ದಿಗೂ ಅರ್ಜಿ ಸಲ್ಲಿಸಿರುವ ವ್ಯಕ್ತಿಯು ಸಿಖ್ ಸಂಪ್ರದಾಯಗಳನ್ನು ಉಲ್ಲೇಖಿಸಿದ್ದಾರೆ. ಹೆಣ್ಣು ಮಗುವೂ ಪಂಚಕ್ ಸಂಪ್ರದಾಯ ಪಾಲಿಸಬೇಕು. ಸಂಪ್ರದಾಯದಂತೆ ಕೂದಲಿಗೆ ಕತ್ತರಿ ಹಾಕುವಂತಿಲ್ಲ. ಮಗುವಿನ ಧಾರ್ಮಿಕ ಗುರುತು ಬದಲಿಸದಂತೆ ಸೂಚಿಸಬೇಕೆಂದು ಮಗುವಿನ ತಂದೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಗೆ ಮಗುವಿನ ತಾಯಿ ಗೈರುಹಾಜರಾಗಿದ್ದರು. ಹೀಗಾಗಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ಮುಂದಿನ ಆದೇಶದವರೆಗೆ ಕೂದಲು ಕತ್ತರಿಸಬಾರದೆಂದು ಸೂಚನೆ ನೀಡಿತು.
ಸಚಿವ ಅಶ್ವತ್ಥ ನಾರಾಯಣ, ಇತರ ಶಾಸಕರ ಸಮನ್ಸ್ ಆದೇಶ ರದ್ದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ನಡೆಯುತ್ತಿದ್ದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ನಡೆಸಿತ್ತು ಎನ್ನಲಾದ ಪ್ರಯತ್ನಗಳ ಬಗ್ಗೆ ಹಲವು ಊಹಾಪೋಹಗಳು ಚಾಲ್ತಿಗೆ ಬಂದಿದ್ದವು. ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷವೊಡ್ಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಚಿವರು ಮತ್ತು ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿತ್ತು.
ದೂರಿಗೆ ಸಂಬಂಧಿಸಿದಂತೆ ವಿಶೇಷ ಕೋರ್ಟ್ ನೀಡಿದ್ದ ಸಮನ್ಸ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಸಚಿವ ಸಿ.ಎನ್.ಅಶ್ವತ್ಥ ನಾರಾಯಣ, ಶಾಸಕರಾದ ಶ್ರೀನಿವಾಸಗೌಡ, ಎಸ್.ಆರ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್ ಅವರಿಗೆ ಈ ಬೆಳವಣಿಗೆಯು ತುಸು ನೆಮ್ಮದಿ ನೀಡಿದೆ. ಪ್ರಕರಣವನ್ನು ಹೈಕೋರ್ಟ್ ಮತ್ತು ವಿಶೇಷ ಕೋರ್ಟ್ಗೆ ಮರಳಿಸಿದೆ. ಖಾಸಗಿ ದೂರು ಪರಿಗಣಿಸುವಾಗ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪೂರ್ವಾನುಮತಿಗೆ ಸಂಬಂಧಿಸಿದ ನಿಯಮಗಳನ್ನು ಪಾಲಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಜೆಪಿ ಪಕ್ಷಾಂತರ ಮಾಡಲು ಶಾಸಕರಿಗೆ ಆಮಿಷವೊಡ್ಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಟಿ.ಜೆ.ಅಬ್ರಹಾಂ ವಿಶೇಷ ಕೋರ್ಟ್ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರು ದಾಖಲಾದ ನಂತರ ವಿಶೇಷ ಕೋರ್ಟ್ ಸಮನ್ಸ್ ಜಾರಿಗೆ ಆದೇಶಿಸಿತ್ತು.
ಇದನ್ನೂ ಓದಿ: ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದವರ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ ಇದನ್ನೂ ಓದಿ: ತಂದೆಯ ಸುಪರ್ದಿಗೆ ಮಗುವನ್ನು ಕೊಡಲು ಸಲ್ಲಿಸಿದ್ದ ಅರ್ಜಿ ವಜಾ; ಅರ್ಜಿದಾರನಿಗೆ 50,000 ರೂ. ದಂಡ ವಿಧಿಸಿದ ಕರ್ನಾಟಕ ಹೈಕೋರ್ಟ್