ಬೆಂಗಳೂರು: ಹಿಜಾಬ್, ಕೇಸರಿ ಶಾಲು ವಿವಾದದ ಬಗ್ಗೆ ತನಿಖೆಗೆ ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಂಘದಿಂದ ದೂರು ನೀಡಲಾಗಿದೆ. ಸಂಘದ ಅಧ್ಯಕ್ಷ ಮೊಹಮ್ಮದ್ ಇಮ್ತಿಯಾಜ್ರಿಂದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ಗೆ ದೂರು ನೀಡಲಾಗಿದೆ. ಹಿಜಾಬ್ ವಿರೋಧದ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಕೆಲವರು ಕಾನೂನು ಸುವ್ಯವಸ್ಥೆ ಹಾಳುಮಾಡಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಇಲ್ಲದ ವಿವಾದ ಸೃಷ್ಟಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗೆ ಓರ್ವ ವ್ಯಕ್ತಿ ನೇರ ಕಾರಣ. ಶಾಸಕ ರಘುಪತಿ ಭಟ್ ಕಾರಣವೆಂದು ಆರೋಪಿಸಿ ಬುಧವಾರ (ಫೆಬ್ರವರಿ 9) ದೂರು ನೀಡಲಾಗಿದೆ.
ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಘುಪತಿ ಭಟ್ ಉಡುಪಿ ಪಿಯು ಕಾಲೇಜು ಎಸ್ಡಿಎಂಸಿ ಅಧ್ಯಕ್ಷರೂ ಆಗಿದ್ದಾರೆ. ರಘುಪತಿ ಭಟ್ ಬಿಜೆಪಿ ಶಾಸಕರು, ಸಂಘಟನೆಯಿಂದ ಬಂದವರು, ಈ ಸಂಘಟನೆ ರಾಜ್ಯದಲ್ಲಿ ಶಾಂತಿಭಂಗ ಸೃಷ್ಟಿಸುತ್ತಿರುವ ಆರೋಪದಲ್ಲಿ, ವಿವಾದದ ಸಂಬಂಧ ತನಿಖೆಗೆ ಕೋರಿ ಡಿಜಿ & ಐಜಿಪಿಗೆ ದೂರು ಕೊಡಲಾಗಿದೆ.
ಮಂಡ್ಯದಲ್ಲಿ ಜಮಾತ್ ಏ ಹಿಂದ್ ಸಂಘಟನೆ ವಿರುದ್ಧ ದೂರು
ಇತ್ತ ಮಂಡ್ಯದಲ್ಲಿ ಜಮಾತ್ ಏ ಹಿಂದ್ ಸಂಘಟನೆ ವಿರುದ್ಧ ದೂರು ನೀಡಲಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ದೂರು ನೀಡಿದ್ದಾರೆ. ಫೆ.8 ರಂದು ಜೈ ಶ್ರೀರಾಮ್ ಘೋಷಣೆ ನಡುವೆ ವಿದ್ಯಾರ್ಥಿನಿ ಒಬ್ಬರು ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರು. ಮಂಡ್ಯ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್ ಘೋಷಣೆ ಕೂಗಿದ್ದರು. ಈ ಹಿನ್ನೆಲೆ ಮುಸ್ಕಾನ್‌ಗೆ ಐದು ಲಕ್ಷ ಬಹುಮಾನ ಘೋಷಣೆ ಮಾಡಿರುವುದಾಗಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಜಮಾತ್ ಏ ಹಿಂದ್ ಸಂಘಟನೆಯಿಂದ ಘೋಷಣೆಯಾಗಿರುವುದಾಗಿ ವೈರಲ್ ಆಗಿತ್ತು. ಇದು ಕೋಮು ಗಲಭೆ ನಡೆಸುವ ಹುನ್ನಾರ. ಹೀಗಾಗಿ ಜಮಾತ್ ಏ ಹಿಂದ್ ಬಹುಮಾನ ಘೋಷಣೆ ಮಾಡಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕೆಂದು ಉಲ್ಲೇಖಿಸಿ ದೂರು ನೀಡಲಾಗಿದೆ.
ವಿದ್ಯಾರ್ಥಿನಿ ಮಸ್ಕಾನ್ ಭೇಟಿಯಾದ ಬಿಬಿಎಂಪಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ
ಕಾಲೇಜು ಆವರಣದಲ್ಲಿ ನಿನ್ನೆ ಘಟನೆ ನೋಡಿ ಬೇಸರವಾಯಿತು. ಅದಕ್ಕಾಗಿ ಇಂದು ಮುಸ್ಕಾನ್ ಮನೆಗೆ ಭೇಟಿ ನೀಡಿ ಮಾತಾಡಿದೆ. ಕಾನೂನಾತ್ಮಕವಾಗಿ ಯಾವುದೇ ಕ್ರಮಕೈಗೊಂಡರೂ ಜತೆಗಿರುತ್ತೇನೆ. ವಿದ್ಯಾರ್ಥಿನಿ ಮುಸ್ಕಾನ್, ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದೆ. ಹಲ್ಲೆ, ತೊಂದರೆ ಕೊಡಲು ಬಂದರೆ ದೂರು ಕೊಡಲು ಹೇಳಿದ್ದೇನೆ. ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದೇನೆ. ಸರ್ಕಾರದ ಜತೆ ಚರ್ಚಿಸಿ ನ್ಯಾಯಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಮಂಡ್ಯದಲ್ಲಿ ಬಿಬಿಎಂಪಿ ಮಾಜಿ ಸದಸ್ಯ, ಜೆಡಿಎಸ್ ಮುಖಂಡ ಇಮ್ರಾನ್ ಪಾಷಾ ಹೇಳಿಕೆ ನೀಡಿದ್ದಾರೆ.
ಜೈಶ್ರೀರಾಮ್ ಎಂದು ಘೋಷಣೆ ಕೂಗುವುದರಲ್ಲಿ ತಪ್ಪೇನು ಇಲ್ಲ. ಆದರೆ ವಿದ್ಯಾರ್ಥಿಗಳಿಗೆ ಯಾರೋ ಪ್ರಚೋದನೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಸ್ಕಾನ್ ಯೂತ್ ಐಕಾನ್ ಬಿರುದು, ಕ್ಯಾಶ್ ಪ್ರೈಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಒಳ್ಳೆ ಭಾವನೆಯಿಂದ ಬಿರುದು, ಧನಸಹಾಯ ಮಾಡಿದರೆ ತಪ್ಪಿಲ್ಲ. ವಿದ್ಯಾರ್ಥಿನಿ ಮುಸ್ಕಾನ್ ಕುಟುಂಬಕ್ಕೆ ಯಾರೂ ಹಣ ನೀಡಿಲ್ಲ. ಧನಸಹಾಯ ಮಾಡಿದರೆ ಋಣಾತ್ಮಕವಾಗಿ ನೋಡಬಾರದು. ನಮಗೆ ಹಣ ನೀಡಿದರೆ ಬಡವರಿಗೆ ಕೊಡುವುದಾಗಿ ಹೇಳಿದ್ದಾರೆ. ಬಡವರಿಗೆ ಕೊಡ್ತೇವೆಂದು ಮುಸ್ಕಾನ್ ಕುಟುಂಬಸ್ಥರು ಹೇಳಿದ್ದಾರೆ ಎಂದು ಈ ಬಗ್ಗೆ ಮುಸ್ಕಾನ್ ನಿವಾಸಕ್ಕೆ ಭೇಟಿ ನಂತರ ಇಮ್ರಾನ್ ಪಾಷಾ ಹೇಳಿದ್ದಾರೆ.
ವಿದ್ಯಾರ್ಥಿನಿ ಮುಸ್ಕಾನ್ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರು. ಮಂಡ್ಯದ PES ಕಾಲೇಜಿನಲ್ಲಿ ಘೋಷಣೆ ಕೂಗಿದ್ದರು. ಜೈಶ್ರೀರಾಮ್ ಘೋಷಣೆ ಕೂಗಿದ್ದ ಹಿಂದೂ ವಿದ್ಯಾರ್ಥಿಗಳಿಗೆ ಪ್ರತಿಯಾಗಿ ಅಲ್ಲಾಹು ಅಕ್ಬರ್ ಎಂದು ಮುಸ್ಕಾನ್ ಘೋಷಣೆ ಕೂಗಿದ್ದರು. ಇಂದು ಮುಸ್ಕಾನ್ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದ ಇಮ್ರಾನ್, ಮುಸ್ಕಾನ್ ಕುಟುಂಬಕ್ಕೆ ಧೈರ್ಯ ಹೇಳಿ ಆರ್ಥಿಕ ನೆರವು ನೀಡಿದ್ದಾರೆ.
ಇದನ್ನೂ ಓದಿ: Karnataka Hijab Row: ಹಿಜಾಬ್ ವಿವಾದದ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠ ರಚನೆ
ಇದನ್ನೂ ಓದಿ: Karnataka Hijab Row: ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ; ಧರಣಿ, ಪ್ರತಿಭಟನೆ ನಡೆಸುವಂತಿಲ್ಲ
Published On - 8:56 pm, Wed, 9 February 22