
ಬೆಂಗಳೂರು, ಜೂ.25: ನೈಋತ್ಯ ಮುಂಗಾರು ಮಾರುತಗಳು ರಾಜ್ಯಾದ್ಯಂತ ತೀವ್ರಗೊಂಡಿದ್ದು, ಕರ್ನಾಟಕದಾದ್ಯಂತ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ವಿಶೇಷವಾಗಿ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನ ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಲಿದ್ದು, ಆ ಜಿಲ್ಲೆಗಳ ಜನರು ಎಚ್ಚರ ಇರುವಂತೆ ಹಾಗೂ ಅಧಿಕಾರಿಗಳು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.
ಹವಾಮಾನ ಇಲಾಖೆಯ ಇತ್ತೀಚಿನ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಇಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಇನ್ನು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಮಲೆನಾಡು ಭಾಗದಲ್ಲೂ ಗಾಳಿಯ ವೇಗ ಹೆಚ್ಚಾಗಲಿದ್ದು, ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ರಸ್ತೆಗಳಲ್ಲಿ ಸಾಗುವ ವಾಹನ ಸವಾರರು ಹಾಗೂ ನದಿ ತೀರದ ನಿವಾಸಿಗಳು ಜಾಗರೂಕರಾಗಿರಲು ಜಿಲ್ಲಾಡಳಿತಗಳು ಪ್ರಕಟಣೆ ಹೊರಡಿಸಿವೆ.
ಇದನ್ನೂ ಓದಿ: ಫುಟ್ ಪಾತ್ ತೆರವಿಗೆ ಕೃಷ್ಣಭೈರೇಗೌಡ ಪಣ:ಒತ್ತುವರಿದಾರರಿಗೆ ಡೆಡ್ಲೈನ್, ರಸ್ತೆ ಬದಿ ನಿಲ್ಲಿಸುವ ಗಾಡಿ ಗುಜರಿಗೆ
ರಾಜಧಾನಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ವಾತಾವರಣ ಸದ್ಯ ತಂಪಾಗಿದ್ದು, ಮೋಡಕವಿದ ವಾತಾವರಣ ಮುಂದುವರಿಯಲಿದೆ. ಬೆಳಗ್ಗೆ ಮತ್ತು ಸಂಜೆ ವೇಳೆ ಜಿಟಿಜಿಟಿ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು. ಬಯಲು ಸೀಮೆಯ ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ದಾವಣಗೆರೆ ಜಿಲ್ಲೆಗಳಲ್ಲೂ ಹಗುರವಾದ ಮಳೆಯ ಸಿಂಚನವಾಗಲಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಮುಂಗಾರು ಮಳೆ ಚುರುಕಾಗಲಿದ್ದು, ಕೃಷಿ ಚಟುವಟಿಕೆಗಳಿಗೆ ಪೂರಕವಾದ ವಾತಾವರಣ ಸೃಷ್ಟಿಯಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ