ಬಿಸಿಲ ಬೇಗೆಗೆ ಬೆಂಗಳೂರು ಮಂದಿ ತತ್ತರ; ಶುರುವಾಯ್ತು ರೋಗ ರುಜಿನಗಳ ಕಾಟ
ರಾಜ್ಯಾದ್ಯಂತ ಬಿಸಿಲ ಬೇಗೆಗೆ ಜನ ಹೈರಾಣಾಗಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇನ್ನು ಈ ರಣ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ಏರ್ ಕೂಲರ್ ಹಾಗೂ ಎಸಿಗಳ ಮೊರೆ ಹೋಗುತ್ತಿದ್ದರೆ, ಇತ್ತ ಸೋರಿಯಾಸಿಸ್, ಮೊಡವೆಗಳು ಸೇರಿ 10ಕ್ಕೂ ಹೆಚ್ಚು ಚರ್ಮದ ರೋಗಗಳು ಜನರನ್ನ ಕಾಡುತ್ತಿವೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.
ಬೆಂಗಳೂರು, ಮೇ.01: ಸೂರ್ಯನ ಉರಿಗಣ್ಣಿನಿಂದ ಬೆಂಗಳೂರು(Bengaluru) ಕಾದ ಹಂಚಿನಂತಾಗಿದೆ. ಬಿಸಿಲಿನ ಝಳದಿಂದಾಗಿ ಕಳೆದೆರಡು ತಿಂಗಳಿಂದ ಜನರನ್ನ ಸೋರಿಯಾಸಿಸ್, ಮೊಡವೆಗಳು ಸೇರಿ 10ಕ್ಕೂ ಹೆಚ್ಚು ಚರ್ಮದ ರೋಗಗಳು ಕಾಡುತ್ತಿವೆ. ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿರುವುದರಿಂದ ಸೋರಿಯಾಸಿಸ್ ಸೇರಿ ಅನೇಕ ಸಮಸ್ಯೆಗಳು ಹೆಚ್ಚಾಗಿವೆ.
ಗಾಳಿ ಸುದ್ದಿ ನಂಬಿ ರಕ್ತದಾನಕ್ಕೆ ಹಿಂದೇಟು
ಬಿಸಿಲಿನ ಹೊಡೆತದಿಂದ ರಕ್ತದಾನಿಗಳ ಸಂಖ್ಯೆಯೂ ಕುಂಠಿತವಾಗಿದೆ. ಬೇಸಿಗೆಯಲ್ಲಿ ರಕ್ತ ನೀಡಿದ್ರೆ ಆಯಾಸ ಎನ್ನುವ ಗಾಳಿ ಸುದ್ದಿ ನಂಬಿ ರಕ್ತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರೆಡ್ ಕ್ರಾಸ್ ಹಾಗೂ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ಗಳಲ್ಲಿ ಪ್ರತಿ ತಿಂಗಳು 2,500 ರಿಂದ 3,000 ಸಾವಿರ ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಆದರೀಗ 1,500 ಯೂನಿಟ್ ಮಾತ್ರ ರಕ್ತ ಸಂಗ್ರಹವಾಗುತ್ತಿದೆ. ಇದರಿಂದ ಆಪರೇಷನ್ಗೆ ಒಳಗಾಗುವ ರೋಗಿಗಳು ಪರದಾಡುವಂತಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬಿಸಿಲ ಬೇಗೆ ಜತೆ ಜನರಿಗೆ ಮತ್ತೊಂದು ಬರೆ: ಜ್ಯೂಸ್, ಎಳನೀರು ಮತ್ತಷ್ಟು ದುಬಾರಿ
ಏರ್ ಕೂಲರ್ ಹಾಗೂ ಎಸಿಗಳ ಮೊರೆ
ಇನ್ನು ಬಿಸಿಲಿನ ನಡುವೆ ತಣ್ಣಗಾಗಲು ಜನ, ಏರ್ ಕೂಲರ್ ಹಾಗೂ ಎಸಿಗಳ ಮೊರೆ ಹೋಗುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಶೇ.60 ರಷ್ಟು ಕೂಲರ್ ಹಾಗೂ ಎಸಿಗಳಿಗೆ ಬೇಡಿಕೆ ಇದ್ದು, ಮಾರ್ಕೆಟ್ನಲ್ಲಿ ಕೂಲರ್, ಎಸಿಗಳು ಅಷ್ಟಾಗಿ ಸಿಗುತ್ತಿಲ್ಲ.
ದೇವಸ್ಥಾನಗಳಿಗೂ ತಟ್ಟಿದ ಬಿಸಿಲ ಎಫೆಕ್ಟ್
ರಣ ಬಿಸಿಲ ಎಫೆಕ್ಟ್ ದೇವಸ್ತಾನಗಳಿಗೂ ತಟ್ಟಿದೆ. ಭಕ್ತರಿಂದ ತುಂಬಿರುತ್ತಿದ್ದ ನಗರದ ಪ್ರಮುಖ ದೇಗುಲಗಳು ಈಗ ಭಣಗುಡುತ್ತಿದೆ. ಇನ್ನು, ಧರ್ಮಸ್ಥಳ, ಕುಕ್ಕೆಗೆ ಹೋಗುವ ಭಕ್ತಾದಿಗಳ ಸಂಖ್ಯೆಯೂ ಕಡಿಮೆ ಆಗಿದೆ. ಬಿಸಿಲ ಬೇಗೆಯಿಂದ ಜನರು ಬಳಲಿ ಬೆಂಡಾಗಿದ್ದಾರೆ. ಮಳೆಗಾಲ ಯಾವಾಗ ಶುರುವಾಗುತ್ತೋ ಎಂದು ದಿನ ಎಣಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ