ಪೊಲೀಸ್ ಪರೀಕ್ಷೆಗೆ ಟಫ್ ರೂಲ್ಸ್: ಮಾಂಗಲ್ಯಸರ, ಜನಿವಾರಕ್ಕೆ ಓಕೆ; ಕಳ್ಳದಾರಿ ಹಿಡಿದ್ರೆ ಲೈಫ್‌ಟೈಮ್ ಡಿಬಾರ್

ಪರೀಕ್ಷಾ ಅಕ್ರಮ ತಡೆಯಲು ಕರ್ನಾಟಕ ಸರ್ಕಾರ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ KEA ಬಿಗಿ ನಿಯಮಗಳನ್ನು ಅಳವಡಿಸಿದೆ. OMR ಶೀಟ್‌ನಲ್ಲಿ 5ನೇ ಕಾಲಂ ಕಡ್ಡಾಯ, ಬಯೋಮೆಟ್ರಿಕ್ ಹಾಜರಾತಿ, ಸಿಸಿಟಿವಿ ಕಣ್ಗಾವಲು, ENT ವೈದ್ಯರ ತಪಾಸಣೆ ಸೇರಿವೆ. ಅಕ್ರಮ ಎಸಗಿದ 216 ಅಭ್ಯರ್ಥಿಗಳಿಗೆ ಶಾಶ್ವತ ನಿಷೇಧ ಹೇರಲಾಗಿದೆ. ಇದು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ದಾರಿ.

ಪೊಲೀಸ್ ಪರೀಕ್ಷೆಗೆ ಟಫ್ ರೂಲ್ಸ್: ಮಾಂಗಲ್ಯಸರ, ಜನಿವಾರಕ್ಕೆ ಓಕೆ; ಕಳ್ಳದಾರಿ ಹಿಡಿದ್ರೆ ಲೈಫ್‌ಟೈಮ್ ಡಿಬಾರ್
ಸಾಂದರ್ಭಿಕ ಚಿತ್ರ
Edited By:

Updated on: Jul 30, 2026 | 12:01 PM

ಬೆಂಗಳೂರು, ಜು.30: ಪರೀಕ್ಷೆಯಲ್ಲಿ ಆಗುವ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಮಸೂದೆಯೊಂದನ್ನು ಪರಿಚಯಿಸಿದೆ. ಈ ಮೂಲಕ ಪರೀಕ್ಷೆಯಲ್ಲಾಗುವ ಮೋಸಗಳನ್ನು ತಡೆಯಬಹುದು. ಇದೀಗ ಇದರ ಬೆನ್ನಲ್ಲೇ ಕರ್ನಾಟದಲ್ಲೂ ಪೊಲೀಸ್​​​ ಇಲಾಖೆ, ಇತರ ಸ್ಪರ್ಧಾತ್ಮಕ ಪರೀಕ್ಷೆಯೂ ನಡೆಯುವ ಅಕ್ರಮಗಳನ್ನು ತಡೆಯಲು ಸರ್ಕಾರ ಹೊಸ ಕ್ರಮವನ್ನು ತಂದಿದೆ.

KPSC ನೇಮಕಾತಿ ಅಕ್ರಮ ಆರೋಪಗಳ ಹಿನ್ನೆಲೆಯಲ್ಲಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮುಂಬರುವ 3,991 ಪೊಲೀಸ್ ಸಿವಿಲ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಆಗಸ್ಟ್ 2ರ ಭಾನುವಾರದಂದು ರಾಜ್ಯದ 800ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದ್ದು, ಒಟ್ಟು 4.54 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಯಾವುದೇ ಗೋಲ್‌ಮಾಲ್ ನಡೆಯದಂತೆ ತಡೆಯಲು KKEA ಅಭೂತಪೂರ್ವ ಬಿಗಿ ನಿಯಮಗಳನ್ನು ಜಾರಿಗೆ ತಂದಿದೆ.

ಪರೀಕ್ಷಾ ಕೇಂದ್ರಕ್ಕೆ ಪ್ರಶ್ನೆಪತ್ರಿಕೆ ಬಂದ ತಕ್ಷಣ, ಪ್ರಿನ್ಸಿಪಾಲ್ ನೇತೃತ್ವದಲ್ಲಿ ಕೇಂದ್ರದ ಐದು ವಿದ್ಯಾರ್ಥಿಗಳ ಸಮಕ್ಷಮದಲ್ಲೇ ಪ್ರಶ್ನೆಪತ್ರಿಕೆಯ ಸಿಲ್ಡ್ ಬಾಕ್ಸ್ ತೆರೆಯಲಾಗುತ್ತದೆ. ಪ್ರಶ್ನೆಪತ್ರಿಕೆ ಬಾಕ್ಸ್ ಓಪನ್ ಮಾಡುವುದರಿಂದ ಹಿಡಿದು ಪರೀಕ್ಷಾ ಕೊಠಡಿಗೆ ತಲುಪುವವರೆಗೆ ಅಭ್ಯರ್ಥಿಗಳ ಹಾಜರಾತಿಗೆ ಅವಕಾಶ ಕಲ್ಪಿಸಲಾಗಿದೆ.

ಕಟ್ಟುನಿಟ್ಟಿನ ವಸ್ತ್ರಸಂಹಿತೆ

ಪರೀಕ್ಷಾ ಕೊಠಡಿಯೊಳಗೆ ಕಿವಿಯೋಲೆ, ವಾಚ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಿಗೆ ಕಡ್ಡಾಯವಾಗಿ ಅವಕಾಶವಿಲ್ಲ. ಧಾರ್ಮಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳಿಗೆ ಗೌರವ ನೀಡಿ ಮಾಂಗಲ್ಯಸರ, ಮೂಗುತಿ, ಜನಿವಾರ ಮತ್ತು ಶಿವದಾರಕ್ಕೆ ಅವಕಾಶ ನೀಡಲಾಗಿದೆ. ಯಾವುದೇ ಕೇಂದ್ರದಲ್ಲಿ ಇವುಗಳನ್ನು ತೆಗೆಸುವಂತಿಲ್ಲ ಎಂದು ಸೂಚಿಸಲಾಗಿದೆ. ಕಿವಿ ಭಾಗದಲ್ಲಿ ಬ್ಲೂಟೂತ್ ಅಥವಾ ಇಯರ್‌ಫೋನ್ ಸಾಧನ ಬಳಸಿ ಅಕ್ರಮ ಎಸಗುವುದನ್ನು ತಡೆಯಲು ಸೂಕ್ಷ್ಮ ಕೇಂದ್ರಗಳಲ್ಲಿ ENT (ಕಿವಿ, ಮೂಗು, ಗಂಟಲು) ವೈದ್ಯರನ್ನು ತಪಾಸಣೆಗೆ ನೇಮಿಸಲಾಗಿದೆ.

OMR ಶೀಟ್‌ನ ಹೊಸ ನಿಯಮ: 5ನೇ ಕಾಲಂ ಕಡ್ಡಾಯ

ಪರೀಕ್ಷೆ ಮುಗಿದ ಅರ್ಧ ಗಂಟೆಯ ಒಳಗಾಗಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು (OMR ಶೀಟ್) KEA ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ. ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಎಂದು OMR ಶೀಟ್‌ನಲ್ಲಿ ಖಾಲಿ ಬಿಡುವ ಹಾಗಿಲ್ಲ. ಉತ್ತರ ಗೊತ್ತಿಲ್ಲದಿದ್ದರೆ 5ನೇ ಕಾಲಂ ಅನ್ನು ಫಿಲ್ ಮಾಡಬೇಕು. ಹಾಗೂ OMR ಶೀಟ್‌ನಲ್ಲಿ ಯಾವುದೇ ಉತ್ತರ ಅಥವಾ 5ನೇ ಕಾಲಂ ಅನ್ನು ಫಿಲ್ ಮಾಡದೇ ಖಾಲಿ ಬಿಟ್ಟರೆ 1/4 (0.25) ಅಂಕ ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: ಹೆಚ್‌ಎಂಟಿ ಜಮೀನು ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ: ಮರ ಕತ್ತರಿಸದಂತೆ ಹೆಚ್‌ಎಂಟಿಗೂ ಸೂಚನೆ

ಹೈಟೆಕ್ ಸೆಕ್ಯುರಿಟಿ ಹಾಗೂ ಸಿಸಿಟಿವಿ ಕಣ್ಗಾವಲು:

ಪ್ರತಿಯೊಂದು ಪರೀಕ್ಷಾ ಕೊಠಡಿಯಲ್ಲೂ ಲೈವ್ ವೆಬ್‌ಕಾಸ್ಟಿಂಗ್ ಇರಲಿದ್ದು, ನೆಟ್‌ವರ್ಕ್ ಜಾಮರ್‌ಗಳನ್ನು ಅಳವಡಿಸಲಾಗಿದೆ. ಬಯೋಮೆಟ್ರಿಕ್ ಹಾಜರಾತಿಗಾಗಿ ಫಿಂಗರ್‌ಪ್ರಿಂಟ್ ಮತ್ತು ಮುಖ ಗುರುತಿಸುವ ತಂತ್ರಜ್ಞಾನ ಬಳಸಲಾಗುತ್ತಿದೆ. ಪರೀಕ್ಷೆ ಪ್ರಾರಂಭವಾಗುವ 1 ಗಂಟೆ ಮುಂಚಿತವಾಗಿಯೇ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗಿರಬೇಕು. ಪರೀಕ್ಷಾ ಮೇಲ್ವಿಚಾರಣೆಗೆ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರನ್ನು ನಿಯೋಜಿಸಲು KEA ಕ್ರಮಕೈಗೊಂಡಿದೆ.

216 ಕಳಂಕಿತ ಅಭ್ಯರ್ಥಿಗಳಿಗೆ ಶಾಶ್ವತ ನಿಷೇಧ, KEA ಗೆ ಬ್ಲ್ಯಾಕ್‌ಲಿಸ್ಟ್ ಪಟ್ಟಿ ಸಲ್ಲಿಕೆ

ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅವ್ಯವಹಾರ ಮತ್ತು ಅಕ್ರಮ ಎಸಗಿ ಸಿಕ್ಕಿಬಿದ್ದಿರುವ ಅಭ್ಯರ್ಥಿಗಳಿಗೆ ರಾಜ್ಯ ಪೊಲೀಸ್ ಇಲಾಖೆ ಚಾಟಿ ಬೀಸಿದೆ. ಕಳಂಕಿತ ಅಭ್ಯರ್ಥಿಗಳು ಭವಿಷ್ಯದಲ್ಲಿ ಸರ್ಕಾರಿ ಹುದ್ದೆಯ ಯಾವುದೇ ನೇಮಕಾತಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳದಂತೆ ಶಾಶ್ವತ ನಿಷೇಧ ಹೇರಿ ಕಟ್ಟುನಿಟ್ಟಿನ ಕ್ರಮ ಜರುಗಿಸಿದೆ. ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್, ಸಶಸ್ತ್ರ , ಕೆಎಸ್‌ಆರ್‌ಪಿ ಹಾಗೂ ಕೆಎಸ್‌ಐಎಸ್ಎಫ್ (KSISF) ಘಟಕಗಳ ಒಟ್ಟು 7,905 ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ ಆಯೋಜಿಸಲಾಗಿರುವ ಪರೀಕ್ಷೆಗಳಿಗೆ ಕಳಂಕಿತರು ಮತ್ತೆ ಅರ್ಜಿ ಸಲ್ಲಿಸುವುದನ್ನು ತಡೆಯಲು ಪೊಲೀಸ್ ನೇಮಕಾತಿ ವಿಭಾಗವು ಮುಂಜಾಗ್ರತಾ ಕ್ರಮವಾಗಿ 216 ಆರೋಪಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ಹಸ್ತಾಂತರಿಸಿದೆ.

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:35 am, Thu, 30 July 26

Loading...
Unable to load recommendations.
Follow Us