ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಂದಾಯ ಸಚಿವ ಅಶೋಕ್ ಕೊಡಗಿನಲ್ಲಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಯುವ ನಿರೀಕ್ಷೆಯಿದೆ. ಕಾರವಾರ ಮತ್ತು ಮಂಗಳೂರು ಸುತ್ತಮುತ್ತ ಕಡಲ ಕೊರೆತದ ಸಮಸ್ಯೆ ಕಂಡುಬಂದಿದೆ. ಅಗತ್ಯಕ್ರಮ ವಹಿಸಲು ಸೂಚನೆ ನೀಡಿದ್ದೇನೆ. ಪರಿಹಾರ ಕಾಮಗಾರಿಗಳನ್ನು ನಿರ್ವಹಿಸಲು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆ ಕೆರೂರು ಪಟ್ಟಣದಲ್ಲಿ ಗುಂಪು ಘರ್ಷಣೆ ನಡೆದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಗಲಭೆ ನಡೆದ ಕೂಡಲೇ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಯಗೊಂಡಿರುವ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರನ್ನು ಬಂಧಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎರಡೂ ಸಮುದಾಯಗಳಿಗೆ ಶಾಂತವಾಗಿರಲು ಸೂಚಿಸಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಜುಲೈ 9ರವರೆಗೆ ಭಾರೀ ಮಳೆ ಸಾಧ್ಯತೆ
ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಭಾರೀ ಹೆಚ್ಚಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳಿಗೆ ಮಳೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಜೆ ಘೋಷಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಇಂದು ರೆಡ್ ಅಲರ್ಟ್ (Red Alert) ಘೋಷಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆಯ (IMD) ಮುನ್ಸೂಚನೆಯ ಪ್ರಕಾರ, ಜುಲೈ 9ರವರೆಗೆ ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಚದುರಿದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.