Karnataka Rains: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಡೆಯೂ ಭಾರೀ ಮಳೆ

ರಾಜ್ಯದ ಮಲೆನಾಡು, ಕರಾವಳಿ ಭಾಗಗಳಲ್ಲಿ ತೀವ್ರ ಸ್ವರೂಪದ ಗಾಳಿ, ಮಳೆ ಜನರ ನಿದ್ದೆಗೆಡಿಸಿದೆ. ಹೊಲ, ಗದ್ದೆ, ತೋಟಗಳನ್ನೆಲ್ಲಾ ಆವರಿಸಿದ ನೀರು ಕೆಲವೆಡೆ ಈಗ ಮನೆ ಹೊಸ್ತಿಲಿಗೂ ಬಂದು ನಿಂತಿದ್ದು, ಇಡೀ ಊರಿಗೆ ಊರೇ ಜಲಾವೃತ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

Karnataka Rains: ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಎಲ್ಲೆಡೆಯೂ ಭಾರೀ ಮಳೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಭೀತಿ
Follow us
TV9 Web
| Updated By: Skanda

Updated on:Jul 24, 2021 | 7:35 AM

ಬೆಂಗಳೂರು: ಕರ್ನಾಟಕದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ (Heavy Rain) ಆತಂಕಕಾರಿಯಾಗಿ ಪರಿಣಮಿಸಿದೆ. ಹಲವೆಡೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತಿದ್ದು, ಭೂ ಕುಸಿತ, ಮನೆ ಕುಸಿತ, ರಸ್ತೆ ಸಂಪರ್ಕ ಕಡಿತವಾದಂತಹ ಘಟನೆಗಳೂ ವರದಿಯಾಗುತ್ತಿವೆ. ಜೂನ್​ ತಿಂಗಳ ಆರಂಭದಲ್ಲಿ ಅಬ್ಬರಿಸಿದ್ದ ವರುಣ (Monsoon 2021) ಕೆಲ ದಿನಗಳ ಕಾಲ ವಿರಾಮ ಕೊಟ್ಟು ಪುನರಾಗಮನ ಮಾಡಿದ ನಂತರ ಮತ್ತಷ್ಟು ರೌದ್ರಾವತಾರ ಪ್ರದರ್ಶಿಸುತ್ತಿದ್ದು, ಬಿಡುವು ನೀಡುವ ಸುಳಿವೇ ಕಾಣುತ್ತಿಲ್ಲ.

ರಾಜ್ಯದ ಮಲೆನಾಡು, ಕರಾವಳಿ ಭಾಗಗಳಲ್ಲಿ ತೀವ್ರ ಸ್ವರೂಪದ ಗಾಳಿ, ಮಳೆ ಜನರ ನಿದ್ದೆಗೆಡಿಸಿದೆ. ಹೊಲ, ಗದ್ದೆ, ತೋಟಗಳನ್ನೆಲ್ಲಾ ಆವರಿಸಿದ ನೀರು ಕೆಲವೆಡೆ ಈಗ ಮನೆ ಹೊಸ್ತಿಲಿಗೂ ಬಂದು ನಿಂತಿದ್ದು, ಇಡೀ ಊರಿಗೆ ಊರೇ ಜಲಾವೃತ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜನರು ಭಾರೀ ಮಳೆಯಿಂದಾಗಿ ತತ್ತರಿಸಿ ಹೋಗಿದ್ದು, ಅರೆಬೈಲ್ ಘಾಟಿ ಸೇರಿದಂತೆ ಹಲವೆಡೆ ಧರೆ ಕುಸಿದು ಸಂಪರ್ಕವೇ ಕಡಿತಗೊಳ್ಳುತ್ತಿರುವುದರಿಂದ ನೀರು ನುಗ್ಗಿದರೆ ಎಲ್ಲಿಗೆ ಹೋಗುವುದು ಎಂಬ ಚಿಂತೆಗೆ ಸಿಲುಕಿದ್ದಾರೆ.

ಮಹಾರಾಷ್ಟ್ರ, ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಆರ್ಭಟದಿಂದಾಗಿ ದೂಧ್​ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆರೋಗ್ಯ ಕೇಂದ್ರಕ್ಕೆ ಏಕಾಏಕಿ ನುಗ್ಗಿದ ಪರಿಣಾಮ ವೈದ್ಯಕೀಯ ಪರಿಕರಗಳನ್ನು ಬೇರೆಡೆಗೆ ಸಾಗಿಸುವಂತಾಗಿ ವೈದ್ಯರು, ಸಿಬ್ಬಂದಿ ಪರದಾಡಿದ್ದಾರೆ.

ಇತ್ತ ಶಿವಮೊಗ್ಗ ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು ತೀರ್ಥಹಳ್ಳಿ ಪಟ್ಟಣದ ಕೆಲ ಭಾಗಗಳು ನಿನ್ನೆ ಜಲಾವೃತಗೊಂಡಿವೆ. ಶಿವಮೊಗ್ಗ ನಗರದ ಕುಂಬಾರಗುಂಡಿ, ಬಿ.ಬಿ ರಸ್ತೆ, ಬಟ್ಟೆ ಮಾರುಕಟ್ಟೆ ಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ತುಂಗಾ ನದಿಯ ನೀರು ಅನೇಕ ಮನೆಗಳಿಗೆ ನುಗ್ಗಿದ ಪರಿಣಾಮ ಜನರು ತಡರಾತ್ರಿ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಇಂದು ಕೂಡಾ ಮುಂಜಾನೆಯಿಂದಲೇ ಗಾಳಿ, ಮಳೆ ಜೋರಾಗಿದ್ದು, ಜನ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

HEAVY RAIN

ಭಾರೀ ಮಳೆಯಿಂದ ಶಿವಮೊಗ್ಗದಲ್ಲಿ ವಸತಿ ಪ್ರದೇಶಗಳಿಗೆ ನುಗ್ಗಿದ ನೀರು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯಿಂದಾಗಿ ಅಂಕೋಲಾ ಸುಂಕಸಾಳದ ನವಮಿ ಹೊಟೇಲ್‌ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರು, ಮಕ್ಕಳು, ಗ್ರಾಹಕರು, ಹೊಟೇಲ್​ ಸಿಬ್ಬಂದಿ ಸೇರಿ 15 ಜನರ ಪೈಕಿ ಅಷ್ಟೂ ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಡವಳೇಶ್ವರ ನಂದಗಾಂವ ಗ್ರಾಮಗಳು ಯಾವುದೇ ಕ್ಷಣದಲ್ಲಿ ಸಂಪೂರ್ಣ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿಯಿಂದಾಗಿ ಡವಳೇಶ್ವರ ನಂದಗಾಂವ ಸೇತುವೆಗಳು ಜಲಾವೃತವಾಗಿವೆ. ನದಿ ಅಕ್ಕಪಕ್ಕದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಜಲಾವೃತಗೊಂಡಿದ್ದು, ಯಾವುದೇ ಕ್ಷಣದಲ್ಲಿ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನವನ್ನು ನೀರು ಸುತ್ತುವರೆಯುವ ಸಾಧ್ಯತೆ ಇದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿಯಿಂದಾಗಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ಸೇತುವೆಯ ಮೇಲೆ 6 ಅಡಿ ನೀರು ಹರಿಯುತ್ತಿದೆ. ಮಿರ್ಜಿ, ಒಂಟಗೋಡಿ, ಮಹಾಲಿಂಗಪುರ ರಸ್ತೆ ಸಂಪರ್ಕ ‌ಕಡಿತಗೊಂಡಿದೆ.

HEAVY RAIN

ಮನೆಗಳಿಗೆಲ್ಲಾ ನೀರು ನುಗ್ಗಿ ಜನರ ಪರದಾಟ

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ಹಾನಿ ಹಿನ್ನೆಲೆ ಬಾಗಲಕೋಟೆ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಇಂದು ಮಧ್ಯಾಹ್ನ 12ಕ್ಕೆ ವಿಜಯಪುರ ಜಿಲ್ಲೆ ಆಲಮಟ್ಟಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಾಗಲಕೋಟೆಯ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆಯನ್ನೂ ನಡೆಸಲಿದ್ದು ಪ್ರವಾಹ‌ ನಿರ್ವಹಣೆ ಬಗ್ಗೆ ಚರ್ಚಿಸಲಿದ್ದಾರೆ.

ಕಲಬುರಗಿಯಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿರುವುದರಿಂದ ಜಿಲ್ಲೆಯ ಹಲವು ಗ್ರಾಮಗಳ ಜನರು ಪ್ರವಾಹದಿಂದ ಪರದಾಟ ನಡೆಸಿದ್ದಾರೆ. ಈ ಕಾರಣದಿಂದಾಗಿ ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಇಂದು ಭೇಟಿ ನೀಡಲಿದ್ದಾರೆ. ಬೆಳಗ್ಗೆ 11ಗಂಟೆಗೆ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ಏರ್ಪಡಿಸಿದ್ದು, ಮಧ್ಯಾಹ್ನ ನೆರೆಪೀಡಿತ‌ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಪ್ರವಾಹ ಕಡಿಮೆಯಾದ ಬಳಿಕ ಎಲ್ಲಾ ನೆರೆಪೀಡಿತ ಸ್ಥಳಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆ ಅನಾಹುತ, 21 ರಾಜ್ಯ ಹೆದ್ದಾರಿಗಳ ಸಂಪರ್ಕ ಕಡಿತ: ಡಿಸಿಎಂ ಗೋವಿಂದ ಕಾರಜೋಳ 

Karnataka Rains: ಕರ್ನಾಟಕದ ಹಲವೆಡೆ ಮಹಾಮಳೆ; 6 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಬಿಎಸ್ ಯಡಿಯೂರಪ್ಪ ಸಭೆ

(Karnataka Rain Monsoon 2021 brings Heavy Rain leads to Flood situation any Many Districts)

Published On - 7:32 am, Sat, 24 July 21