ಬೆಂಗಳೂರು, ಡಿಸೆಂಬರ್ 29: ಡಿ.31ರಿಂದ ಸಾರಿಗೆ ಇಲಾಖೆ ಸಿಬ್ಬಂದಿ ಮುಷ್ಕರಕ್ಕೆ (strike) ಕರೆ ಹಿನ್ನೆಲೆ ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಸಾರಿಗೆ ಇಲಾಖೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದರು. ಈ ವೇಳೆ ಸಾರಿಗೆ ಸಿಬ್ಬಂದಿ ಬೇಡಿಕೆ ಬಗ್ಗೆ ಸಿಎಂಗೆ ಮನವರಿಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಸಿಎಂ ಗುಡ್ ನ್ಯೂಸ್ ಕೊಡುತ್ತಾರಾ ಎಂದು 1 ಲಕ್ಷದ 17 ಸಾವಿರ ಸಾರಿಗೆ ನೌಕರರು ಕಾದು ಕುಳಿತ್ತಿದ್ದಾರೆ.
ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಿಬ್ಬಂದಿ ಮುಷ್ಕರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಸರ್ಕಾರ 5900 ಕೋಟಿ ರೂ. ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಫೆಬ್ರವರಿ ಬಜೆಟ್‌ನಲ್ಲಿ ಇಲಾಖೆಗೆ ಅನುದಾನ ನೀಡಿ ಅಂತಾ ಬೇಡಿಕೆ ಇಟ್ಟಿದ್ದೇನೆ.
ಸಂಕ್ರಾಂತಿ ಹಬ್ಬದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸರ್ಕಾರ ನಮ್ಮ ಬೇಡಿಕೆಗೆ ಸಮ್ಮತಿಸಿಲ್ಲ: ಡಿ 31ರಂದು ಕೆಎಸ್‌ಆರ್‌ಟಿಸಿ ಬಂದ್ ಎಂದ ಕ್ರಿಯಾ ಸಮಿತಿ ಅಧ್ಯಕ್ಷ
ಬಸ್ ನಿಲ್ಲಿಸುತ್ತೇವೆಂದು ಹೇಳಿದ್ದಾರೆ, ಅದನ್ನು ಮುಂದೂಡಿ ಅಂತಾ ಹೇಳಿದ್ದೇವೆ. ಸಾರಿಗೆ ಸಿಬ್ಬಂದಿಯ ಬೇಡಿಕೆ ವಿಚಾರದಲ್ಲಿ ನಾವು ಪಾಸಿಟಿವ್ ಆಗಿದ್ದೇವೆ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ನೌಕರರಿಗೆ ಗೊತ್ತಿದೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ಸಮಾನ ವೇತನದ ಬಗ್ಗೆ ಹೇಳಿದ್ದೇವೆ. ಈಗಾಗಲೇ ಇಲಾಖೆಗೆ ಸರ್ಕಾರ 220 ಕೋಟಿ ರೂ. ಬಿಡುಗಡೆ ಮಾಡಿದೆ ಎಂದಿದ್ದಾರೆ.
ಪಿಎಫ್ ಹಣ ಸಂಬಂಧ 2 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ ಸಲ್ಲಿಸಿದ್ದೇನೆ. ಇದನ್ನು ಕ್ಯಾಬಿನೆಟ್‌ನಲ್ಲಿಟ್ಟಿದ್ದೇವೆ, ವೇತನ ಪರಿಷ್ಕರಣೆ ಬಗ್ಗೆಯೂ ಹೇಳಿದ್ದೇವೆ. ಪಾಸಿಟಿವ್ ಮೈಂಡ್‌ನಲ್ಲಿದ್ದೇವೆ, ನೌಕರರು ಒಪ್ಪುತ್ತಾರೆಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.
ಬಿಜೆಪಿಯವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಸಾವಿರಾರು ನೌಕರರನ್ನು ಸಸ್ಪೆಂಡ್ ಮಾಡಿದ್ದರು. ನಾವು ಅವರನ್ನೆಲ್ಲಾ ಮತ್ತೆ ಕೆಲಸಕ್ಕೆ ಸೇರಿಸಿಕೊಂಡಿದ್ದೇವೆ. ಬಸ್ ಟಿಕೆಟ್ ದರ ಹೆಚ್ಚಳ ಸಂಬಂಧ ಬೋರ್ಡ್‌ಗಳು ಪ್ರಸ್ತಾವನೆ ಕಳಿಸಿವೆ. ದರ ಹೆಚ್ಚಳದ ಪ್ರಸ್ತಾವನೆ ಬಗ್ಗೆ ಪರಿಶೀಲಿಸಿ ಸರ್ಕಾರ ತೀರ್ಮಾನಿಸಲಿದೆ ಎಂದು ತಿಳಿದ್ದಾರೆ.
ಬಂದ್‌ಗೆ ಸಾರಿಗೆ ಸಿಬ್ಬಂದಿ ಕರೆ ಸಂಬಂಧ ಕಾರ್ಮಿಕ ಇಲಾಖೆ ಆಯುಕ್ತ ಡಾ.ಗೋಪಾಲಕೃಷ್ಣ ನಾಳೆ ಮಹತ್ವದ ಸಭೆ ಕರೆದಿದ್ದಾರೆ. ನಾಳೆಯ ಸಭೆಯಲ್ಲಿ ಸಾರಿಗೆ ನೌಕರರ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ. ಬೆಳಗ್ಗೆ 11 ಗಂಟೆಗೆ ಕಾರ್ಮಿಕ ಇಲಾಖೆ ಮುಖ್ಯ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ನಿಗಮಗಳ ಎಂಡಿಗಳು, ಮುಷ್ಕರಕ್ಕೆ ಕರೆ ನೀಡಿರುವ ಆರು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರುಗಳು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ಡಿ 31ರಂದು ಸಾರಿಗೆ ನೌಕರರ ಮುಷ್ಕರ: ಸಂಘಟನೆಗಳಲ್ಲೇ ಗೊಂದಲ!
ಮುಷ್ಕರ ಸಂಬಂಧ ಬೆಳಗಾವಿ ಅಧಿವೇಶನದಲ್ಲಿ ಸರ್ಕಾರಕ್ಕೆ ನೋಟಿಸ್ ನೀಡಿದ 21 ದಿನ ನಂತರವಷ್ಟೇ ಮುಷ್ಕರಕ್ಕೆ ಹೋಗಬೇಕು. ಕಾರ್ಮಿಕ ಇಲಾಖೆ ನಿಯಮದಂತೆ 21 ದಿನ ಬಳಿಕ ಮುಷ್ಕರ ನಡೆಸಬೇಕು. ಹೀಗಾಗಿ ನಾಳೆ ಸಭೆ ಕರೆಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.