ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್​ಡಿ ಪಾಟೀಲ್​ ವಿರುದ್ಧ ಕೋಕಾ ಅಸ್ತ್ರ, ಏನಿದು ಕೋಕಾ ಕಾಯ್ದೆ?

Kocca Act: ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್.ಪಿ.ಪಾಟೀಲ್ ಸಿಐಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಎಷ್ಟೇ ಬಾರಿ ಅರೆಸ್ಟ್ ಆದರೂ ಪದೇ ಪದೇ ಪರೀಕ್ಷಾ ಅಕ್ರಮ ಎಸಗುತ್ತಿದ್ದ ಆರ್.ಡಿ.ಪಾಟೀಲ್ ಜೈಲಿನಿಂದ ಹೊರಬರದಂತೆ ಖಾಕಿ ಮಾಸ್ಟರ್ ಸ್ಟ್ರೋಕ್ ಕೊಟ್ಟಿದೆ. ಹಾಗಾದ್ರೆ ಏನಿದು ಕೋಕಾ ಕಾಯ್ದೆ? ಆರೋಪ ಸಾಬೀತಾದರೆ ಏನು ಶಿಕ್ಷೆ? ಇಲ್ಲಿದೆ ವಿವರ.

ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್​ಡಿ ಪಾಟೀಲ್​ ವಿರುದ್ಧ ಕೋಕಾ ಅಸ್ತ್ರ, ಏನಿದು ಕೋಕಾ ಕಾಯ್ದೆ?
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Dec 20, 2023 | 6:40 PM

ಬೆಂಗಳೂರು (ಡಿಸೆಂಬರ್ 20): ಪರೀಕ್ಷಾ ಅಕ್ರಮಗಳ ಕಿಂಗ್ ಪಿನ್ ಆರ್.ಡಿ.ಪಾಟೀಲ್ ಸೇರಿದಂತೆ 12 ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ಕೋಕಾ (ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ-2000) ಅಸ್ತ್ರ ಪ್ರಯೋಗಿಸಿದ್ದಾರೆ. ಎಷ್ಟೇ ಸಲ ಬಂಧನವಾದರೂ ಸಹ ಆರ್.ಡಿ.ಪಾಟೀಲ್ ಜಾಮೀನಿನ ಮೇಲೆ ಹೊರಬಂದು ಮತ್ತೆ ಮತ್ತೆ ಪರೀಕ್ಷಾ ಅಕ್ರಮದಲ್ಲಿ ತೊಡಗಿಸಿಕೊಂಡಿದ್ದ.  ಈ ಹಿನ್ನೆಲೆಯಲ್ಲಿ ಇದೀಗ ಸಿಐಡಿ ಪೊಲೀಸರು ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಕೋಕಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿ ಆರ್ ಡಿ. ಪಾಟೀಲ್, ಸಂತೋಷ್ ಕೊಟ್ಟಳ್ಳಿ, ಶಿವಕುಮಾರ್, ಸಿದ್ರಾಮ ಕೋಳಿ, ರವಿಕುಮಾರ್, ರುದ್ರಗೌಡ, ರಹೀಂ ಚೌದರಿ, ಸಾಗರ್, ಬಸಣ್ಣ ಪೂಜಾರಿ, ಚಂದ್ರಕಾಂತ್ ಬುರಕಲ್, ಶಶಿಧರ್ ಜಮಾದಾರ್, ಬಸವರಾಜ ಎಳವಾದ ವಿರುದ್ಧ ಕೋಕಾ ಆಕ್ಟ್ ಜಾರಿ ಮಾಡಲಾಗಿದೆ. ಈ ಮೂಲಕ ಸಿಐಡಿ ಈಗ ಆರ್.ಡಿ.ಪಾಟೀಲ್ ವಿರುದ್ಧದ ಕೇಸ್ಗಳನ್ನ ಮತ್ತಷ್ಟು ಬಿಗಿಗೊಳಿಸಿದೆ.

ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ನಕಲಿ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ಆರ್.ಡಿ.ಪಾಟೀಲ್ ವಿರುದ್ಧ ಇರುವ ಎಲ್ಲಾ ಕೇಸ್ ಗಳ ಮಾಹಿತಿ ಸಂಗ್ರಹಿಸಿ ಕೋಕಾ ಕಾಯಿದೆ ಜಾರಿ ಮಾಡಲಾಗಿದೆ. ಗುಂಪು ಕಟ್ಟಿಕೊಂಡು ಪದೇ ಪದೇ ಒಂದೇ ರೀತಿಯ ಅಪರಾಧಗಳನ್ನ ಮಾಡುವವರ ವಿರುದ್ಧ ಕೋಕಾ ಕಾಯಿದೆ ಜಾರಿ ಮಾಡಲಾಗುತ್ತದೆ. ಕೋಕಾ (Karnataka Control of Organised Crimes Act 2000-KCOCA) ಜಾರಿಯಿಂದಾಗಿ ಆರೋಪಿಗೆ ಜಾಮೀನು ಸಿಗುವುದು ಮತ್ತಷ್ಟು ಕಷ್ಟವಾಗಿದೆ. ಜೈಲಿನಿಂದ‌ ಹೊರಬಂದು ಪದೇ ಪದೇ ಪರೀಕ್ಷಾ ಅಕ್ರಮಗಳಲ್ಲಿ ಆರ್ಡಿ ಪಾಟೀಲ್ ಭಾಗಿಯಾಗಿದ್ದನು.

ಕರ್ನಾಟಕ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್ಐ) ಪರೀಕ್ಷೆ ಅಕ್ರಮದಲ್ಲಿ ಜೈಲಿಗೆ ಹೋಗಿ ಬಂದಿದ್ದ. ನಂತರವೂ ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆರ್.ಡಿ.ಪಾಟೀಲ್ ಮತ್ತೆ ಜೈಲು ಸೇರಿದ್ದಾನೆ. ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಆಗಬಾರದು ಎಂಬ ಕಾರಣಕ್ಕೆ ಸಿಐಡಿ ಕೋಕಾ ಜಾರಿ ಮಾಡಿದೆ. ಈ ಬಗ್ಗೆ ವರದಿ ಸಿದ್ದಗೊಳಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಏನಿದು ಕೋಕಾ ಕಾಯ್ದೆ?

ಕೋಕಾ ಅಡಿ ಪ್ರಕರಣ ದಾಖಲಿಸಬೇಕಾದರೆ ಆರೋಪಗಳ ವಿರುದ್ಧ ಕನಿಷ್ಠ ಎರಡು ಪ್ರಕರಣಗಳಾದರೂ ದಾಖಲಾಗಿರಬೇಕು. ಆದ್ರೆ, ಪ್ರಮುಖ ಆರೋಪಿ ವಿರುದ್ಧ ಕೆಇಎ ನೇಮಕಾತಿ ಅಕ್ರಮ ಸಂಬಂಧ ಅಫಜಲಪುರ ಪೊಲೀಸ್ ಠಾಣೆ ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಪಿಎಸ್​ಐ ನೇಮಕಾತಿ ಅಕ್ರಮ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ. ಒಮ್ಮೆ ಆರೋಪ ಸಾಬೀತಾದರೆ ಐದು ವರ್ಷಗಳಿಂದ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ