
ಬೆಂಗಳೂರು, (ಜುಲೈ 17): ಕೆಜಿಎಫ್ ಬಾಬು (KGF Babu) ಮನೆ ಮುಂದೆ ಇಂದು (ಜುಲೈ 16) ಬೆಳಗ್ಗೆಯಿಂದಲೇ ದೊಡ್ಡ ಹೈಡ್ರಾಮಾವೇ ನಡೆದಿದೆ. ಒಂದು ಕಡೆ ಬೆಂಗಳೂರಿನ ವಸಂತನಗರದಲ್ಲಿರುವ ಮನೆಯೊಳಗೆ ಉದ್ಯಮಿ ಕೆಜಿಎಫ್ ಬಾಬು ಹಾಗೂ ಮಗನ ನಡುವೆ ಫೈಟ್ ಆಗಿದ್ದರೆ, ಮತ್ತೊಂದೆಡೆ ಮನೆಯ ಹೊರಗಡೆ ಚಿಕ್ಕಪೇಟೆ ಜನ ಬಾಬು ವಿರುದ್ಧ ಸಿಡಿದೆದ್ದಿದ್ದರು. ಹೌದು…ಚುನಾವಣೆ ವೇಳೆ ಚಿಕ್ಕಪೇಟೆ ಜನರಿಗೆ ನೀಡಿದ್ದ ಮನೆ ಆಶ್ವಾಸನೆ ಈಡೇರಿಸಿಲ್ಲ. ಇದರಿಂದ ಸಿಡಿದೆದ್ದ ಅಲ್ಲಿನ ಜನ ಕೆಜಿಎಫ್ ಬಾಬು ಮನೆ ಮುಂದೆ ಬಂದು ಆಕ್ರೋಶ ಹೊರಹಾಕಿದ್ದಾರೆ. ಕೊನೆಗೆ ಎಚ್ಚೆತ್ತ ಬಾಬು, ಚಿಕ್ಕಪೇಟೆ ಜನರಿಗೆ ನಾನು ಮೋಸ ಮಾಡಲ್ಲ. 22 ಸಾವಿರ ಮತ ನೀಡಿದ ಚಿಕ್ಕಪೇಟೆ ಮತದಾರರಿಗೆ ನನ್ನ ಅರ್ಧ ಆಸ್ತಿ ನೀಡುತ್ತೇನೆ ಎಂದು ಟಿವಿ9ಗೆ ಎಕ್ಸ್‌ಕ್ಲೂಸಿವ್ ಆಗಿ ಹೇಳಿದ್ದಾರೆ.
ಬೆಂಗಳೂರಿನ ವಸಂತನಗರದಲ್ಲಿರೋ ಉದ್ಯಮಿ ಕೆಜಿಎಫ್ ಬಾಬು ಮನೆಯ ಬಳಿ ಚಿಕ್ಕಪೇಟೆ ಜನ ಲಗ್ಗೆ ಇಟ್ಟಿದ್ದು, ಬಾಬು ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಆಕ್ರೋಶಕ್ಕೆ ಕಾರಣ ಏನಂದ್ರೆ, ಕೆಜಿಎಫ್ ಬಾಬು ನೀಡಿದ್ದ ಭರವಸೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜಿಎಫ್ ಬಾಬು ಚಿಕ್ಕಪೇಟೆಯಿಂದ ಸ್ಪರ್ಧೆ ಮಾಡಿದ್ದರು. ಆ ವೇಳೆ ಸಿಲಿಂಡರ್ ಚಿಹ್ನೆ ಹಿಡಿದು ಬೀದಿ ಬೀದಿಯಲ್ಲಿ ಪ್ರಚಾರ ಮಾಡಿದ್ದ ಬಾಬಯ, ಅಂದು ಚಿಕ್ಕಪೇಟೆ ನಿವಾಸಿಗಳಿಗೆ ಸಾಕಷ್ಟು ಭರವಸೆ ನೀಡಿದ್ದರು. ನಿವಾಸಿಗಳಿಗೆ ಮನೆ ಕಟ್ಟಿಸಿಕೊಡ್ತೀನಿ ಎಂದು ಕೆಜಿಎಫ್ ಬಾಬು ಭರವಸೆ ನೀಡಿದ್ದರು. ಇದಕ್ಕೆ ಚೆಕ್ ಕೂಡಾ ನೀಡಿದ್ದರಂತೆ. ಇದನ್ನ ನಂಬಿದ ನಿವಾಸಿಗಳು ತಮ್ಮ ಹಳೇ ಮನೆಗಳನ್ನ ಡೆಮಾಲಿಷ್ ಮಾಡಿದ್ದಾರೆ. ಆದ್ರೆ, ಯಾವ ಭರವಸೆ ಈಡೇರಿಸಿಲ್ಲ. ಇದರಿಂದ ಈಗ ಬೀದಿಗೆ ಬಿದ್ದಿದ್ದೇವೆ ಎಂದು ಚಿಕ್ಕಪೇಟೆ ನಿವಾಸಿಗಳು ಪ್ರತಿಭಟನೆ ಮಾಡಿದ್ದರು.
ಇನ್ನು ನಾನು ಚಿಕ್ಕಪೇಟೆ ನಿವಾಸಿಗಳಿಗೆ ಮೋಸ ಮಾಡಿಲ್ಲ. ಅವರಿಗೆ ನನ್ನ ಅರ್ಧ ಆಸ್ತಿ ಕೊಡುತ್ತೇನೆ ಎನ್ನುತ್ತಿರುವ ಬಾಬು, ಮಗ ಮತ್ತು ಅವರ ಬೀಗರ ಮೇಲೆ ಆರೋಪ ಮಾಡಿದ್ದಾರೆ. ನಾನು ಸಂಕಷ್ಟದಲ್ಲಿದ್ದೇನೆ. ನನ್ನ ಮಗ ಮತ್ತು ಅವರ ಮಾವ ನನಗೆ ಮೋಸ ಮಾಡಿದ್ದಾರೆ.ಇದರಿಂದ ನನಗೆ ಮನೆ ಕಟ್ಟಿಸಿಕೊಡಲು ಆಗಿಲ್ಲ. ನನ್ನ ಮಗನ ಮೂಲಕ ಅವರ ಮಾವ ನನ್ನ ಆಸ್ತಿ ಕಬಳಿಕೆಗೆ ಯತ್ನಿಸುತ್ತಿದ್ದಾನೆ ಎಂದು ಬಾಬು ಗಂಭೀರ ಆರೋಪ ಮಾಡಿದ್ದಾರೆ.
ಪ್ರೆಸ್ ಮೀಟ್ ಮಾಡುತ್ತಿದ್ದಾಗಲೇ ಸ್ಥಳಕ್ಕೆ ಬಂದ ಬಾಬು ಮಗ, ನನ್ನ ಅಪ್ಪ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಮೋಸ ಮಾಡಿದ್ರೆ ಪ್ರೂವ್ ಮಾಡಲಿ ಎಂದು ಸವಾಲ್ ಹಾಕಿದ್ದಾರೆ. ಅಷ್ಟೇ ಅಲ್ಲ ವಾಗ್ವಾದ ನಡೆಯುತ್ತಿದ್ದಂತೆಯೇ ಬಾಬು ಪುತ್ರ ಸ್ಥಳದಿಂದ ಎದ್ದು ನಡೆದಿದ್ದಾರೆ. ಇದೇ ವೇಳೆ ನನ್ನ ಮಗನ ಮಾವ ಗುಲಾಮ್ ಮುಸ್ತಾಫ್ ಮೋಸ ಮಾಡಿದ್ದಾನೆ. ಹೀಗಾಗಿ ಇಷ್ಟೆಲ್ಲಾ ಆಯ್ತು. ಆದ್ರೆ,ಚಿಕ್ಕಪೇಟೆ ಜನರಿಗೆ ನಾನು ಮೋಸ ಮಾಡಲ್ಲ. 22 ಸಾವಿರ ಮತ ನೀಡಿದ ಚಿಕ್ಕಪೇಟೆ ಮತದಾರರಿಗೆ ನನ್ನ ಅರ್ಧ ಆಸ್ತಿ ನೀಡುತ್ತೇನೆ ಎಂದು ಟಿವಿ9ಗೆ ಎಕ್ಸ್‌ಕ್ಲೂಸಿವ್ ಆಗಿ ಹೇಳಿದ್ದಾರೆ.
ಈ ಪ್ರತಿಭಟನೆ ಕೂಡ ನನ್ನ ಮಗ ಮತ್ತು ಆತನ ಮಾವನ ಷಡ್ಯಂತ್ರ ಎಂದು ಬಾಬು ಆರೋಪವಾಗಿದ್ದು. ಇವರ ಕೌಟುಂಬಿಕ ಹಣಕಾಸಿನ ಕಿತ್ತಾಟದಲ್ಲಿ ಚಿಕ್ಕಪೇಟೆ ನಿವಾಸಿಗಳು ಕಂಗಾಲಾಗಿದ್ದಾರೆ.