
ಬೆಂಗಳೂರು, ಜನವರಿ 03: ಕೋಗಿಲು (Kogilu Layout) ಅಕ್ರಮ ಒತ್ತುವರಿ ಜಟಾಪಟಿ ರಾಜಕಾರಣದಲ್ಲಿ ಮಾತಿನ ಸಮರವನ್ನೇ ಸೃಷ್ಟಿಸಿದೆ. ಮನೆ ಕೊಡ್ತೀವಿ ಎಂದಿರುವ ಸರ್ಕಾರದ ನಡೆಯನ್ನ ಪ್ರಶ್ನಿಸಿ ಬಿಜೆಪಿ (bjp) ಸಮರ ಸಾರಿದೆ. ರಾಜ್ಯ ಸರ್ಕಾರದ ನಿರ್ಧಾರವೇ ಅಕ್ರಮ ಅಂತ ಆರೋಪಿಸ್ತಿದೆ. ಕೋಗಿಲು ಲೇಔಟ್ ತೆರವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಇದರ ನಡುವೆ ಕಂದಾಯ ಇಲಾಖೆ ಸಂತ್ರಸ್ತರ ಪಟ್ಟಿ ರೆಡಿ ಮಾಡಿದೆ.
ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡ ಅರ್ಹ ಫಲಾನುಭವಿಗಳ ಸಂಪೂರ್ಣ ಮಾಹಿತಿ ಇವತ್ತು GBA ಕೈ ಸೇರಿದೆ. ಕಂದಾಯ ಇಲಾಖೆ ಹಾಗೂ ಉತ್ತರ ನಗರ ಪಾಲಿಕೆ ಅಧಿಕಾರಿಗಳು ನಡೆಸಿದ ಸರ್ವೆಯ ಅಂತಿಮ ವರದಿ ಈಗ ಅಧಿಕಾರಿಗಳ ಟೇಬಲ್ ಮೇಲಿದೆ.
ಹೊಸ ಫಕೀರ್ ಲೇಔಟ್ ಮತ್ತು ವಾಸೀಂ ಲೇಔಟ್ ನಿರಾಶ್ರಿತರ ಬಗ್ಗೆ ಮಾಹಿತಿಯನ್ನ ಕಲೆಹಾಕಲಾಗಿದೆ. ಕಂದಾಯ ಇಲಾಖೆ ಮತ್ತು ಉತ್ತರ ನಗರ ಪಾಲಿಕೆಯಿಂದ ವರದಿ ಸಿದ್ಧಪಡಿಸಲಾಗಿದೆ. ಒಟ್ಟು 167 ಮನೆಗಳನ್ನು ಗುರುತಿಸಿ ಜಿಬಿಎಗೆ ವರದಿ ಸಲ್ಲಿಕೆ ಮಾಡಲಾಗಿದೆ. ಈ ಮಾಹಿತಿ ಅನುಸಾರ, 167 ಮನೆಗಳ ತೆರವು ಹಿನ್ನೆಲೆ 188 ಕುಟುಂಬಗಳು ನಿರಾಶ್ರಿತವಾಗಿವೆ. 188 ಕುಟುಂಬಗಳ 1,007 ಸದಸ್ಯರು ಅಧಿಕೃತ ನಿರಾಶ್ರಿತರು ಅಂತಾ ಹೇಳಲಾಗಿದೆ. 188 ಕುಟುಂಬಗಳ ಮುಖ್ಯಸ್ಥರು, 425 ಜನ ವಯಸ್ಕರು, 304 ಮಕ್ಕಳು, 156 ಮುಸ್ಲಿಂ ಕುಟುಂಬಗಳು, 31 ಹಿಂದೂ, 1 ಕ್ರಿಶ್ಚಿಯನ್ ಕುಟುಂಬ ನಿರಾಶ್ರಿತವಾಗಿದೆ ಅಂತಾ ವರದಿಯಲ್ಲಿ ಹೇಳಲಾಗಿದೆಯಂತೆ.
ಇನ್ನು ಈ ಬಗ್ಗೆ GBA ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಮಾತನಾಡಿ, ಮತ್ತೊಂದು ಸುತ್ತಿನ ಪರಿಶೀಲನೆ ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.
ಈ ಮಧ್ಯೆ ಇವತ್ತು ವಿಪಕ್ಷ ನಾಯಕ ಆರ್. ಅಶೋಕ್ ರಾಜೀವ್ ಗಾಂಧಿ ವಸತಿ ನಿಗಮದ ಕಚೇರಿಗೆ ಭೇಟಿ ನೀಡಿದರು. ಕೆ.ಜಿ.ರಸ್ತೆಯ ಕಾವೇರಿ ಭವನದ ಕಚೇರಿಗೆ ಬಂದು ಎಂ.ಡಿ ಪರಶುರಾಮ್ ಬಳಿ ಮಾಹಿತಿ ಪಡೆದರು. ಕೋಗಿಲು ಅಕ್ರಮ ವಾಸಿಗಳಿಗೆ ಯಾವ ಮಾನದಂಡ ಅನುಸರಿಸಲಾಗುತ್ತಿದೆ ಅಂತಾ ಪ್ರಶ್ನಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಕಾನೂನು ಗಾಳಿಗೆ ತೂರಿದರೆ ಹುಷಾರ್ ಅಂತಾ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಮಾತಾಡಿದ ರಾಜೀವ್ ಗಾಂಧಿ ವಸತಿ ನಿಗಮದ MD ಪರಶುರಾಮ್, ಸ್ಥಳೀಯ ಶಾಸಕ ಕೃಷ್ಣ ಬೈರೇಗೌಡ ಕಳುಹಿಸಿಕೊಡುವ ಜನರಿಗೆ ಮಾತ್ರ ನಾವು ಮನೆ ಕೊಡೋಕೆ ಸಾಧ್ಯ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಕೋಗಿಲು ಲೇಔಟ್: ಒತ್ತುವರಿ ಮಾಡಿಕೊಂಡಿದ್ದವರಲ್ಲಿ ಮುಸ್ಲಿಂ ಕುಟುಂಗಳೇ ಹೆಚ್ಚು, ಜಿಬಿಎ ಕೈಸೇರಿತು ಅಂತಿಮ ವರದಿ
ಮತ್ತೊಂದು ಕಡೆ ಕೋಗಿಲು ಲೇಔಟ್‌ಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ಕೊಟ್ಟಿತ್ತು. ಈ ವೇಳೆ ಕೆಲವರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದರು, ಆಗ ಮಹಿಳೆಯೊಬ್ಬರು ಡಿ.ಜೆ. ಹಳ್ಳಿ ವಿಳಾಸದ ಆಧಾರ್ ಕಾರ್ಡ್ ತೋರಿಸಿದರು. ಬಿಜೆಪಿ ನಿಯೋಗ ಮರುಪ್ರಶ್ನೆ ಕೇಳಿದರೆ, ನಾವು ಇಲ್ಲಿ 5 ವರ್ಷದಿಂದ ಇದ್ದೀವಿ ಅಂತಾ ಇಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮನೆಗೆ ಮಾರಿ, ಅತಿಕ್ರಮಣಕಾರರಿಗೆ ಉಪಕಾರಿ. ಬೆಂಗಳೂರಿನಲ್ಲಿ ಬಾಂಗ್ಲಾ ಅಕ್ರಮ ನುಸುಳುಕೋರರು ಇದ್ದಾರೆ. ಎಸ್ಐಆರ್ಗೂ ವಿರೋಧ ಮಾಡಲು ಇದೇ ಕಾರಣ. ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ನಾಳೆ ಕುಮಾರಕೃಪಾದಲ್ಲಿ ಟೆಂಟ್ ಹಾಕಿದ್ರೆ ಏನ್ ಮಾಡೋದು. ಹಿಂದೆ ದೆಹಲಿಯಿಂದ ಕಾಂಗ್ರೆಸ್ ಹೈಕಮಾಂಡ್ ನಡೆಯುತ್ತಿತ್ತು. ಈಗ ಕಾಂಗ್ರೆಸ್ ಹೈಕಮಾಂಡ್ ಕೇರಳದಿಂದ ನಡೆಯುತ್ತಿದೆ. ಅಲ್ಲಿ ಹಲವು ವರ್ಷಗಳಿಂದ ಇದ್ದರು ಎಂಬುದಕ್ಕೆ ದಾಖಲೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ. ಮತ್ತೊಂದ್ಕಡೆ ಎಲ್ಲರಿಗೂ ಒಂದೇ ನ್ಯಾಯ ಕೊಡಿ ಎಂದು ಎಸ್.ಆರ್. ವಿಶ್ವನಾಥ್ ಕೂಡ ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಎರಡು ತಿಂಗಳಿಂದ ಬೀದಿಗೆ ಬಿದ್ದಿರುವ ಕುಟುಂಬಗಳು; ಕೋಗಿಲು ಲೇಔಟ್‌ಗೆ ತಕ್ಷಣ ಪರಿಹಾರ, KG ಹಳ್ಳಿಗೆ ಅನ್ಯಾಯವೇ?
ಕೋಗಿಲು ನಿರಾಶ್ರಿತರಿಗೆ ಕೊಡಬೇಕು ಅಂತಿರೋ 1 BHK ಫ್ಲಾಟ್ ಮೌಲ್ಯ 13.2 ಲಕ್ಷ ರೂಪಾಯಿ ನಿಗದಿಯಾಗಿದೆ. ಆದರೆ ಸರ್ಕಾರ 11 ಲಕ್ಷಕ್ಕೆ ಫ್ಲಾಟ್ ಗಳನ್ನ ನೀಡುವ ಸಾಧ್ಯತೆಯಿದೆ ಅಂತಾ ಹೇಳಲಾಗುತ್ತಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:25 pm, Sat, 3 January 26