DK Shivakumar: ಆದಾಯ ಮೀರಿದ ಆಸ್ತಿ; ಸಿಬಿಐ ಪ್ರಕರಣ ರದ್ದುಕೋರಿ ಹೈಕೋರ್ಟ್ಗೆ ಡಿಕೆ ಶಿವಕುಮಾರ್ ಅರ್ಜಿ
ವಿಚಾರಣೆ ವೇಳೆ ‘ತನಿಖೆ ಪೂರ್ಣಗೊಂಡು ಆರೋಪಪಟ್ಟಿ ದಾಖಲಿಸಲಾಗಿದೆಯೇ’ ಎಂದು ಸಿಬಿಐ ಪರ ವಕೀಲರನ್ನು ಹೈಕೋರ್ಟ್ ಪ್ರಶ್ನಿಸಿತು.
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಕೇಂದ್ರ ತನಿಖಾ ದಳ (Central Bureau of Investigation – CBI) ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಕರ್ನಾಟಕ ಹೈಕೋರ್ಟ್ಗೆ (Karnataka High Court) ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಸಿಬಿಐ ಮನವಿ ಮಾಡಿತು. ವಿಚಾರಣೆ ವೇಳೆ ‘ತನಿಖೆ ಪೂರ್ಣಗೊಂಡು ಆರೋಪಪಟ್ಟಿ ದಾಖಲಿಸಲಾಗಿದೆಯೇ’ ಎಂದು ಸಿಬಿಐ ಪರ ವಕೀಲರನ್ನು ಹೈಕೋರ್ಟ್ ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಿಐ ಪರ ವಕೀಲರು, ‘ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಯುತ್ತಿದೆ’ ಎಂದು ನುಡಿದರು. ವಿಚಾರಣೆಯನ್ನು ದಸರಾ ರಜೆಯ ಬಳಿಕ ಮುಂದುವರಿಸಲಾಗುವುದು ಎಂದು ಹೈಕೋರ್ಟ್ ಹೇಳಿತು.
ಪ್ರಕರಣದ ಹಿನ್ನೆಲೆ
ಎರಡು ವರ್ಷಗಳ ಹಿಂದೆ, ಅಂದರೆ ಅಕ್ಟೋಬರ್ 2020ರಲ್ಲಿ ಡಿಕೆಶಿ ವಿರುದ್ಧ ಸಿಬಿಐ ಆದಾಯ ಮೀರಿದ ಆಸ್ತಿಗಳಿಕೆ ಪ್ರಕರಣ ದಾಖಲಿಸಿತ್ತು. ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬದ ಸದಸ್ಯರು ₹ 74.93 ಕೋಟಿ ಮೊತ್ತದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎನ್ನುವುದು ಸಿಬಿಐ ಆರೋಪವಾಗಿತ್ತು. ಮಾರ್ಚ್ 2020ರಿಂದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ಅಕ್ಟೋಬರ್ 5, 2020ರಲ್ಲಿ ದೆಹಲಿ, ಮುಂಬೈ ಸೇರಿದಂತೆ 14 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಕಂಪ್ಯೂಟರ್ ಹಾರ್ಡ್ಡಿಸ್ಕ್, ₹ 57 ಲಕ್ಷ ನಗದು ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು.
ನಂತರದ ದಿನಗಳಲ್ಲಿ ಜಾರಿ ನಿರ್ದೇಶನಾಲಯವು (Enforcement Directorate – ED) ಡಿ.ಕೆ.ಶಿವಕುಮಾರ್ ಆಸ್ತಿ ಗಳಿಕೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಆರಂಭಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ದೆಹಲಿಯ ಇಡಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ವಿಚಾರಣೆ ಎದುರಿಸಿದ್ದರು. ಜೈಲಿಗೂ ಹೋಗಿದ್ದರು. ಪ್ರಸ್ತುತ ದೆಹಲಿಯ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ನಾಳೆ (ಸೆ 27) ಮತ್ತೆ ವಿಚಾರಣೆಗೆ ಸಮಯ ನಿಗದಿಯಾಗಿದೆ.
ಏಪ್ರಿಲ್ 2013ರಿಂದ ಏಪ್ರಿಲ್ 2018ರ ಅವಧಿಯಲ್ಲಿ ಮಂತ್ರಿಯಾಗಿದ್ದಾಗ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬ ಸದಸ್ಯರು ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಸಿಬಿಐ ದಾಖಲಿಸಿರುವ ಎಫ್ಐಆರ್ ಆಧಾರದಲ್ಲಿಯೇ ಇಡಿ ಸಹ ತನಿಖೆ ನಡೆಸುತ್ತಿದೆ. ಏಕಕಾಲಕ್ಕೆ ಎರಡು ತನಿಖಾ ಸಂಸ್ಥೆಗಳು ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇಂಥದ್ದೇ ಬೆಳವಣಿಗೆ ನಡೆಯಬಹುದು ಎಂದು ಹೇಳಲು ಸಾಧ್ಯವಿಲ್ಲ.
Published On - 12:22 pm, Mon, 26 September 22