ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

KPSC Scam Latest News: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ. ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಸರ್ಕಾರ ವಾದಿಸಿದರೆ, ವಾಲ್ಮೀಕಿ ಹಗರಣದಲ್ಲಿ ಸಿಐಡಿ ವೈಫಲ್ಯ ಮತ್ತು ಜ್ಞಾನೇಂದ್ರಕುಮಾರ್ ಪ್ರಕರಣಗಳನ್ನು ಉಲ್ಲೇಖಿಸಿ ಅರ್ಜಿದಾರರು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.

ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಹೈಕೋರ್ಟ್
Image Credit source: Getty images
Edited By:

Updated on: Aug 29, 2026 | 9:22 PM

ಬೆಂಗಳೂರು, ಆಗಸ್ಟ್​​ 29: ಕರ್ನಾಟಕ ಲೋಕಸೇವಾ ಆಯೋಗ (KPSC Scam) ನಡೆಸಿದ ಪಶು ವೈದ್ಯಾದಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಲೆ IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಸುತ್ತಿಕೊಂಡಿದೆ. ಪರಾರಿಯಾಗಿದ್ದ ಜ್ಞಾನೇಂದ್ರ ಕುಮಾರ್ ನಿನ್ನೆ ದಿಢೀರ್ ಪ್ರತ್ಯಕ್ಷವಾಗಿ CID ವಿಚಾರಣೆಗೆ ಹಾಜರಾಗಿದ್ದರು. ಸದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ತೀರ್ಪು ಕಾಯ್ದಿರಿಸಿದೆ.

ಸಿಐಡಿ ತನಿಖೆಯೇ ಸಾಕು ಎಂದ ಸರ್ಕಾರದ ಪರ ವಕೀಲರು

ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್. ಜಗದೀಶ್, ‘ಈ ಪ್ರಕರಣದಲ್ಲಿ ಸಿಬಿಐ ತನಿಖೆಯ ಅಗತ್ಯವಿಲ್ಲ’ ಎಂದು ಬಲವಾಗಿ ಸಮರ್ಥಿಸಿಕೊಂಡರು. ‘ಈ ಹಿಂದೆ ಸಿಐಡಿ ಹಲವು ಪ್ರಮುಖ ಹಾಗೂ ಸೂಕ್ಷ್ಮ ಪ್ರಕರಣಗಳಲ್ಲಿ ಅತ್ಯಂತ ಸಮರ್ಥವಾಗಿ ತನಿಖೆ ನಡೆಸಿರುವುದನ್ನು ಉಲ್ಲೇಖಿಸಿದ ಅವರು, ಈ ಹಗರಣವನ್ನೂ ಸಿಐಡಿಯೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದೆ’ ಎಂದು ವಾದಿಸಿದರು.

ಸಿಬಿಐ ತನಿಖೆಗೆ ಪಟ್ಟು ಹಿಡಿದ ಅರ್ಜಿದಾರರ ವಕೀಲರು

ಇನ್ನು ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿದ್ದು, ‘ಸಿಐಡಿ ತನಿಖೆಯ ಮಿತಿಗಳನ್ನು ಕೋರ್ಟ್ ಗಮನಕ್ಕೆ ತಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಸಿಐಡಿ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ, ಆದರೆ ಸಿಬಿಐ ಮತ್ತು ಇ.ಡಿ ನಡೆಸಿದ ತನಿಖೆಯಲ್ಲಿ ಅವರ ಪಾತ್ರ ಬಯಲಾಯಿತು’ ಎಂದು ಪೀಠದ ಗಮನಕ್ಕೆ ತಂದರು.

ಪ್ರಕರಣವನ್ನು ಸಿಬಿಐಗೆ ವಹಿಸುವುದೇ ಸೂಕ್ತ

‘ಅಷ್ಟೇ ಅಲ್ಲದೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್​​ ಇ.ಡಿ ತನಿಖೆಗೆ ಸಿಗದೆ ತಪ್ಪಿಸಿಕೊಂಡಿದ್ದರು, ಗೃಹ ಸಚಿವರು ಅವರು ರಜೆಯಲ್ಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಅದೇ ಅಧಿಕಾರಿ ಸಿಐಡಿ ತನಿಖೆಗೆ ಮಾತ್ರ ಹಾಜರಾಗಿದ್ದರು ಎಂಬುದನ್ನು ಉಲ್ಲೇಖಿಸಿದ ಅವರು, ಸತ್ಯಾಸತ್ಯತೆ ಹೊರಬರಲು ಈ ಪ್ರಕರಣವನ್ನು ಸಿಬಿಐಗೆ ವಹಿಸುವುದೇ ಸೂಕ್ತ’ ಎಂದು ಕೋರಿದರು.

ಇದನ್ನೂ ಓದಿ: KPSC Scam: ಪರಾರಿಯಾಗಿದ್ದ IAS ಅಧಿಕಾರಿ ಜ್ಞಾನೇಂದ್ರ ಕುಮಾರ್ ದಿಢೀರ್ ಪ್ರತ್ಯಕ್ಷ! CID ವಿಚಾರಣೆಗೆ ಹಾಜರು

ಇನ್ನು ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠವು ಅರ್ಜಿಯ ಮೇಲಿನ ತನ್ನ ಆದೇಶವನ್ನು ಕಾಯ್ದಿರಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us