ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮ ಆರೋಪ; ಚುನಾವಣಾ ಆಯೋಗಕ್ಕೆ ಕೆಎಸ್ ಈಶ್ವರಪ್ಪ ದೂರು
ಪುತ್ರನಿಗೆ ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ತಾವೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ನಿಂತಿದ್ದ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರು, ಇಂದು(ಮೇ,14) ಬೆಂಗಳೂರಿನ ಅರಮನೆ ರಸ್ತೆಯಲ್ಲಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ, ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಬೆಂಗಳೂರು, ಮೇ.14: ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ಗೆ ಕಣ್ಣೀಟ್ಟಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ(K. S. Eshwarappa) ಅವರು, ಹೇಗಾದರೂ ಮಾಡಿ ಅದನ್ನು ಪುತ್ರನಿಗೆ ಕೊಡಿಸುವ ಧಾವಂತದಲ್ಲಿದ್ದರು. ಆದರೆ, ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಈ ಹಿನ್ನಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರ(Shimoga Lok Sabha Constituency)ದಿಂದ ಪಕ್ಷೇತರವಾಗಿ ತಾವೇ ಸ್ಪರ್ಧಿಸಿದ್ದಾರೆ. ಅದರಂತೆ ‘ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ, ಜೊತೆಗೆ ಪೆನ್ಡ್ರೈವ್ ಸಮೇತ ಅಕ್ರಮದ ಕುರಿತು ಇಂದು(ಮೇ.14) ಬೆಂಗಳೂರಿನ ಅರಮನೆ ರಸ್ತೆಯಲ್ಲಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಭೇಟಿ ನೀಡಿ ದೂರು ನೀಡಿದರು.
ಇದೇ ವೇಳೆ ‘ನನ್ನನ್ನು ಬಿಜೆಪಿಯಿಂದ ತಾತ್ಕಾಲಿಕವಾಗಿ ಹೊರ ಹಾಕಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್ ಅವರನ್ನು ಆರು ವರ್ಷ ಹೊರ ಹಾಕಿದ್ದರು. ಯಡಿಯೂರಪ್ಪ ಹೋಗಿ ಕಾಲು ಹಿಡಿದು ಮತ್ತೆ ಕರೆತಂದರು. ನಾನು ಈ ಅಮಾನತನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನಾನು ಚುನಾವಣೆ ಗೆಲ್ಲುತ್ತೇನೆ, ಮೋದಿ ಪರ ಕೈ ಎತ್ತುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಹಿಂದೂ ಸಮಾಜವನ್ನು ಜಾತಿಗಳ ಹೆಸರಲ್ಲಿ ಒಡೆಯುವ ಕೆಲಸ ರಾಜಕೀಯ ಪಕ್ಷಗಳು ಮಾಡಿವೆ: ಕೆಎಸ್ ಈಶ್ವರಪ್ಪ
ಬಳಿಕ ಮಾತನಾಡಿ, ‘ಪ್ರಜ್ವಲ್ ಪ್ರಕರಣದ ಬಗ್ಗೆ ಮಾತಾಡಲು ಅಸಹ್ಯ ಆಗುತ್ತದೆ. ಇವರ ರಾಜಕೀಯ ಕುತಂತ್ರಕ್ಕೆ ಜನ ತಲೆ ತಗ್ಗಿಸುವಂತಾಗಿದೆ. ಹೆಣ್ಣು ಮುಂದಿಟ್ಟುಕೊಂಡು ರಾಜಕೀಯ ಮಾಡುವರು ದ್ರೋಹಿಗಳು, ರಾಜ್ಯದಲ್ಲಿ ಹೆಣ್ಣಿನ ಅಪಮಾನದ ಬಗ್ಗೆ ಇಷ್ಟು ಚರ್ಚೆ ಆಗುತ್ತಿದೆ. ಇದು ನಾಚಿಕೆಗೇಡು. ಕೂಡಲೇ ಈ ಪ್ರಜ್ವಲ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಿಬಿಐಗೆ ಕೊಡಲು ಯಾಕೆ ಸಿಎಂ, ಡಿಸಿಎಂ ಹಿಂಜರೀತಿದ್ದಾರೆ?, ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಸಿಬಿಐಗೆ ವಹಿಸಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ