PSI ನೇಮಕಾತಿ ಅಕ್ರಮ ಬೆನ್ನಲ್ಲೇ, ಜಿಲ್ಲಾ ಸಶಸ್ತ್ರ ಮೀಸಲುಪಡೆ ಲಿಖಿತ ಪರೀಕ್ಷೆಯಲ್ಲೂ ಗೋಲ್ಮಾಲ್
ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆನ್ನಲ್ಲೇ ಪೊಲೀಸ್ ಇಲಾಖೆಯ ಮತ್ತೊಂದು ಸ್ಕ್ಯಾಮ್ ಬೆಳಕಿಗೆ ಬಂದಿದೆ. ಜಿಲ್ಲಾ ಸಶಸ್ತ್ರ ಮೀಸಲುಪಡೆ 400 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಯತ್ನಿಸಿದ್ದ ಆರೋಪಿಗಳ ಬಂಧನ.
ಬೆಂಗಳೂರು ಸೆ.10: ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮ (PSI Recruitment Scam) ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ಪ್ರಕರಣ ಬಯಲಾಗಿದೆ. ರವಿವಾರ ಜಿಲ್ಲಾ ಸಶಸ್ತ್ರ ಮೀಸಲುಪಡೆ (KSRP) ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಮುಂದಾಗಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹೌದು ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆನ್ನಲ್ಲೇ ಪೊಲೀಸ್ ಇಲಾಖೆಯ ಮತ್ತೊಂದು ಸ್ಕ್ಯಾಮ್ ಬೆಳಕಿಗೆ ಬಂದಿದೆ.
ಇಲಾಖೆಯಲ್ಲಿ ಖಾಲಿ ಇರುವ ಜಿಲ್ಲಾ ಸಶಸ್ತ್ರ ಮೀಸಲುಪಡೆ 400 ಹುದ್ದೆಗಳಿಗೆ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಷ್ಟೇ ಕರೆದಿದ್ದ ನೋಟಿಫಿಕೇಷನ್ ಕರೆಯಲಾಗಿತ್ತು. ಇಂದು ರಾಜ್ಯದ ಎಲ್ಲ ಕಡೆ ಸಶಸ್ತ್ರ ಮೀಸಲುಪಡೆಯ ಹುದ್ದೆಗೆ ಪರೀಕ್ಷೆ ನಡೆಯುತ್ತಿದೆ. ನಿನ್ನೆಯೇ (ಸೆ.09) ಏಜೆಂಟರುಗಳು ಅಭ್ಯರ್ಥಿಗಳನ್ನ ಒಂದೆಡೆ ಸೇರಲು ಹೇಳಿದ್ದರು. ನಂತರ ಬೆಂಗಳೂರಿನಿಂದ ಬಸ್ಸಿನ ಮೂಲಕ ಹಣ ಕೊಟ್ಟ ಅಭ್ಯರ್ಥಿಗಳನ್ನ ಕರೆದೊಯ್ಯಲು ಪ್ಲಾನ್ ಮಾಡಿದ್ದರು.
ಇದನ್ನೂ ಓದಿ: PSI recruitment: ಶೀಘ್ರದಲ್ಲೇ 545 ಹುದ್ದೆಗಳ ಜೊತೆಗೆ 400 ಪಿಎಸ್ಐ ನೇಮಕಾತಿ – ಜಿ ಪರಮೇಶ್ವರ್
ಬಳಿಕ ಒಂದೆಡೆ ಅಭ್ಯರ್ಥಿಗಳನ್ನ ಕೂರಿಸಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಲು ಏಜೆಂಟರು ತಯಾರಿಗಿದ್ದರು. ಇದೀಗ ಸಿಸಿಬಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಮುಂದಾಗಿದ್ದ ನಾಲ್ವರು ಏಜೆಂಟ್ಗಳನ್ನ ಬಂಧಿಸಿದ್ದಾರೆ. ಕುಷ್ಠಗಿಯ ಬಸವರಾಜ್, ಚಿಕ್ಕನಾಯಕನಹಳ್ಳಿಯ ಹರಿಪ್ರಸಾದ್, ದಿಲೀಪ್ ಹಾಗೂ ತಿಮ್ಮೇಗೌಡ ಬಂಧಿತರು.
ಈ ಆರೋಪಿಗಳು 2018 ರ ಪೊಲೀಸ್ ಕಾನ್ಸ್ಟೇಬಲ್ ಪ್ರಶ್ನೆಪತ್ರಿಕೆ ಸೋರಿಕೆಯಲ್ಲೂ ಭಾಗಿಯಾಗಿದ್ದರು. ಇದೀಗ ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆ ಯತ್ನಿಸುತ್ತಿರುವುವಾಗಲೇ ಪೊಲೀಸರು ಲಾಕ್ ಮಾಡಿಕೊಂಡಿದ್ದಾರೆ ಎಂದು ಟಿವಿ9ಗೆ ಸಿಸಿಬಿ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Sun, 10 September 23