
ಬೆಂಗಳೂರು, (ಆಗಸ್ಟ್ 01): ಸುಮಾರು 38 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಆಗಸ್ಟ್ 5 ರಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು (KSRTC, BMTC Employees) ಅನಿರ್ದಿಷ್ಟಾವಧಿ ಮುಷ್ಕರ (Indefinite Strike) ಮಾಡಲು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಇದಕ್ಕೆ ಟಕ್ಕರ್ ಕೊಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಸಾರಿಗೆ ಇಲಾಖೆ ನಾಳೆ (ಆಗಸ್ಟ್ 02) ಖಾಸಗಿ ಬಸ್ ಮಾಲೀಕರ ಅಸೋಸಿಯೇಷನ್ ಸಭೆ ಕರೆದಿದೆ. ಈ ಮೂಲಕ ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, ಇದಕ್ಕೆ ಪೂರಕವೆಂಬಂತೆ ಸಾರಿಗೆ ಇಲಾಖೆ, ನಾಳೆ ಖಾಸಗಿ ಬಸ್ ಮಾಲೀಕರ ಅಸೋಸಿಯೇಷನ್ ಜತೆ ಸಭೆ ನಡೆಸಲಿದೆ. ಸಾರಿಗೆ ಆಯುಕ್ತ ಯೋಗೀಶ್ ನೇತೃತ್ವದಲ್ಲಿ ನಾಳೆ ಮಧ್ಯಾಹ್ನ 12ಕ್ಕೆ ಶಾಂತಿನಗರದ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಯಲಿದೆ. ಸಾರಿಗೆ ನೌಕರರು ಮುಷ್ಕರ ಕೈಗೊಂಡರೆ ಖಾಸಗಿ ಬಸ್ ಚಾಲಕರನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದೆ.
ಸುಮಾರು 38 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021 ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿಗೆ ಆಗ್ರಹಿಸಿದೆ. ಈ ಪೈಕಿ ಪ್ರಮುಖ ಎರಡು ಬೇಡಿಕೆಗಳೆಂದರೆ, ಬಾಕಿ ವೇತನ ಬಿಡುಗಡೆ ಮತ್ತು ಹೊಸ ವೇತನದಲ್ಲಿ ಪರಿಷ್ಕರಣೆ ಮಾಡಬೇಕು ಎಂಬುದಾಗಿದೆ. ಇದನ್ನು ಶೀಘ್ರ ಮಾಡುವಂತೆ ನೌಕರರು ಆಗ್ರಹಿಸಿದ್ದಾರೆ. ಮಾಡದಿದ್ದರೆ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಬಹುತೇಕ ಪಕ್ಕಾ ಆಗಿದೆ.
ಇನ್ನು ನಾವು ಎಸ್ಮಾ, ವಜಾಗೊಳಿಸುವ ತಂತ್ರಗಳಿಗೆ ಹೆದರುವ ಮಾತೇ ಇಲ್ಲ ಎಂದು ಫ್ರೀಡಂ ಪಾರ್ಕ್ನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರಕ್ಕೆ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.