
ಬೆಂಗಳೂರು, ಮೇ 19: ಹೈಕೋರ್ಟ್ ಆದೇಶದ ಬೆನ್ನಲ್ಲೇ ನಾಳೆ (ಮೇ 20) ಕರೆ ನೀಡಿದ್ದ ಮುಷ್ಕರವನ್ನು ಸಾರಿಗೆ ನೌಕರರು ಹಿಂಪಡೆದಿದ್ದಾರೆ. ಹೈಕೋರ್ಟ್ ಆದೇಶಕ್ಕೆ ಗೌರವ ಕೊಟ್ಟು ಮುಷ್ಕರ ಹಿಂದಕ್ಕೆ ಪಡೆಯುತ್ತಿರೋದಾಗಿ KSRTC ಜಂಟಿ ಕ್ರಿಯಾ ಸಮಿತಿ ಸಂಚಾಲಕ ಜಯದೇವರಾಜೆ ಅರಸ್ ತಿಳಿಸಿದ್ದಾರೆ. ನಾವು ಮುಷ್ಕರದ ಸಂಬಂಧ ಸರ್ಕಾರಕ್ಕೆ ಮೊದಲೇ ಮಾಹಿತಿ ಕೊಟ್ಟಿದ್ದೆವು. ಈ ನಡುವೆ ಹೈಕೋರ್ಟ್ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಗೆ ಬಂದಿತ್ತು. ವಾದ-ಪ್ರತಿವಾದ ಆಲಿಸಿದ ನಂತರ ಮುಷ್ಕರ ಹಿಂದಕ್ಕೆ ಪಡೆಯಬೇಕು ಎಂದು ಕೋರ್ಟ್ ನಿರ್ದೇಶನ ಕೊಟ್ಟಿದೆ. ಸಿಎಂ ಅಥವಾ ಸಾರಿಗೆ ಸಚಿವರು ಶೀಘ್ರ ಸಮಯ ನಿಗದಿ ಮಾಡಿ ಸಭೆ ಮಾಡಬೇಕು ಅಂತಲೂ ಹೇಳಿದೆ. ಹೈಕೋರ್ಟ್ ಆದೇಶದ ಪ್ರಕಾರ ಮುಷ್ಕರ ಹಿಂಪಡೆದಿದ್ದೇವೆ ಎಂದವರು ತಿಳಿಸಿದ್ದಾರೆ.
ಎಲ್ಲಾ ಕಾರ್ಮಿಕರಿಗೂ ಪ್ರತಿಭಟನೆ ಮಾಡುವ ಹಕ್ಕು ಇದ್ದು, ಏಕಪಕ್ಷೀಯವಾಗಿ ನೀವು ತೀರ್ಮಾನ ಮಾಡಿದ್ದೀರಿ. ಯಾರೋ ಹಾಕಿದ PILನಿಂದಾಗಿ ಸರ್ಕಾರ ನಮ್ಮ ಜೊತೆ ಸಭೆ ಮಾಡಬೇಕಿದೆ. ಅದನ್ನ ಸರ್ಕಾರವೇ ನಿರ್ಧಾರ ಮಾಡಿ ಸಭೆ ಮಾಡಬಹುದಿತ್ತು. ಹೈಕೋರ್ಟ್ ಸೂಚಿಸಿರುವ ಪ್ರಕಾರ ಸರ್ಕಾರದ ಜೊತೆಗಿನ ಸಭೆಯನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ . ನಮ್ಮ ಒಂದಷ್ಟು ಮನವಿಯನ್ನು ಕೂಡ ಹೈಕೋರ್ಟ್ ಗಮನಿಸಿದೆ ಎಂದು ಜಂಟಿ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಸಾರಿಗೆ ನೌಕರರಿಗೆ ಬಿಗ್ ಶಾಕ್; ಮುಷ್ಕರ ನಡೆಸದಂತೆ ಸಾರಿಗೆ ಸಂಘಟನೆಗಳಿಗೆ ಹೈಕೋರ್ಟ್ ಆದೇಶ
ಸರ್ಕಾರ ಇದನ್ನ ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಳ್ಳಬಾರದು. ಮುಷ್ಕರದ ನೋಟಿಸ್ನ ಅಧಿಕೃತವಾಗಿ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ. ಸಿಎಂ ಜೊತೆಗಿನ ಸಭೆ ಯಾವಾಗ ಎಂದು ಇನ್ನೂ ನಿಗದಿ ಮಾಡಿಲ್ಲ. KSRTC ಎಂಡಿ ಮೂಲಕ ಸಿಎಂ ಜೊತೆಗಿನ ಸಭೆಗೆ ಸಿದ್ದ ಇದ್ದೇವೆ. ಇನ್ಕ್ರಿಮೆಂಟ್ ಹಾಗೂ DA ಹೆಚ್ಚಳ ಆಗಬೇಕಿದೆ. ಎಸ್ಮಾ ತಂದರೂ ಕೂಡ ಹಲವು ಬಾರಿ ಮುಷ್ಕರ ಮಾಡಿದ್ದೇವೆ. ಜಂಟಿ ಕ್ರಿಯಾ ಸಮಿತಿ ಒಂದು ಸಂಘಟ ಅಲ್ಲ, ಹಲವು ಗುಂಪು ಸೇರಿ ಆಗಿರುವಂತಹದ್ದು. ಮುಷ್ಕರ ಆಗಿದ್ದರೆ, ಬೆಂಬಲ ವಾಪಸ್ ತೆಗೆದುಕೊಂಡವರ ಶಕ್ತಿ ಗೊತ್ತಾಗ್ತಾ ಇತ್ತು. ಬೆಂಬಲ ವಾಪಸ್ ತೆಗೆದುಕೊಂಡವರಿಗೆ ಒತ್ತಡ ಇರಬಹುದು. ಸರ್ಕಾರವೇ ಹಿಂದೆ ನಿಂತು PIL ಅರ್ಜಿ ಹಾಕಿಸುತ್ತಿದೆ. ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ ಅಂದರೆ, ಎಸ್ಮಾ ಯಾಕೆ ಹಾಕಿದ್ರಿ? ಸಾರಿಗೆ ಸಚಿವರು ಸ್ಮಾರ್ಟ್ ಇದ್ದಾರೆ, ಅದನ್ನ ಜನಕ್ಕೆ ಉಪಯೋಗ ಆಗುವ ರೀತಿ ಮಾಡಬೇಕು ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Tue, 19 May 26