ಬಿಟ್ಟೋದ ಗಂಡನನ್ನು ಮತ್ತೆ ಸೇರುವಂತೆ ಮಾಡ್ತೀನೆಂದು ಮಹಿಳೆಗೆ ಲಕ್ಷ ಲಕ್ಷ ಪಂಗಮಾನ; ಆರೋಪಿ ಅರೆಸ್ಟ್
ಬಿಟ್ಟುಹೋದ ಪತಿಯನ್ನು ಜೊತೆಗಿರುವಂತೆ ಮಾಡಿ ಎಂದು ಮಹಿಳೆಯೊಬ್ಬರು ಕೇಳಿಕೊಂಡಿದ್ದು, ಗಂಡ ನಿನ್ನ ಜೊತೆಗೆ ಇರುವಂತೆ ಮಾಡುತ್ತೇನೆ ಎಂದು ಲಕ್ಷ ಲಕ್ಷ ಹಣ ಪಡೆದಿದ್ದ ಆರೋಪಿ ಹಜರತ್ ಮೊಹಮ್ಮದ್, ಬಳಿಕ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಮಹಿಳೆಯು ವಿಧಾನಸೌಧ ಠಾಣೆಗೆ ದೂರು ದಾಖಲಿಸಿದ್ದು, ಇದೀಗ ಆರೋಪಿ ಅಂದರ್ ಆಗಿದ್ದಾನೆ.
ಬೆಂಗಳೂರು, ಡಿ.20: ಬಿಟ್ಟೋದ ಗಂಡನನ್ನು ಜೊತೆಯಾಗಿರುವಂತೆ ಮಾಡುತ್ತೀನಿ ಎಂದು ವಂಚಿಸಿದ್ದ ಹಜರತ್ ಮೊಹಮ್ಮದ್ ಎಂಬ ಆರೋಪಿಯನ್ನ ಪೊಲೀಸ(Police)ರು ಬಂಧಿಸಿದ್ದಾರೆ. ನನಗೆ ಹಣದ ಅವಶ್ಯಕತೆಯಿದೆ ಎಂದು ಮಹಿಳೆಯ ಹೆಸರಲ್ಲಿ ಲಕ್ಷ ಲಕ್ಷ ಲೋನ್ ಮಾಡಿಸಿ ಹಣ ಪಡೆದು ಸಿನಿಮೀಯ ಶೈಲಿಯಲ್ಲಿ ವಂಚನೆ ಮಾಡಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದರಂತೆ ಇದೀಗ ಹಜರತ್ನನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಏನಿದು ಘಟನೆ?
ನೀರಾವರಿ ಇಲಾಖೆಯಲ್ಲಿ ಎಫ್ಡಿಎ ಅಧಿಕಾರಿಯಾಗಿರುವ ಮಹಿಳೆಯ ಪತಿ ಬಿಟ್ಟೋಗಿದ್ದ. ಇದೇ ವೇಳೆ ಮೂರು ವರ್ಷದ ಮಗುವಿನ ಕೈಗೆ ಗಾಯದ ಸಮಸ್ಯೆಯಿದ್ದ ಹಿನ್ನಲೆ ಪಕ್ಕದ ಮನೆಯರ ಮಾತು ಕೇಳಿ ನಾಗಮಂಗಲದಲ್ಲಿರುವ ಆರೋಪಿ ಹಜರತ್ ನೂರ್ ಸಂಪರ್ಕ ಮಾಡಿ, ಔಷಧಿ ಕೊಡಿಸಿದ್ದರು. ಕಾಕತಾಳಿಯ ಎಂಬಂತೆ ಮಗುವಿಗೆ ಕೈ ಒಂದು ವಾರದಲ್ಲಿಯೇ ಸರಿ ಹೋಗಿತ್ತು. ಇದರಿಂದ ಹಜರತ್ನನ್ನು ಆ ಮಹಿಳೆಯು ಸಂಪೂರ್ಣ ನಂಬಿದ್ದರು.
ಪತಿಯನ್ನ ತನ್ನ ಜೊತೆಗಿರುವಂತೆ ಮಾಡಿ ಎಂದು ಕೇಳಿಕೊಂಡಿದ್ದ ಮಹಿಳೆ
ಇನ್ನು ಕೆಲವೇ ದಿನಗಳಲ್ಲಿ ಮಹಿಳಾ ಅಧಿಕಾರಿಯು ಹಜರತ್ನನ್ನು ನಂಬಿದ್ದಳು. ಈ ಹಿನ್ನಲೆ ಬಿಟ್ಟುಹೋದ ನನ್ನ ಪತಿಯನ್ನು ಜೊತೆಗಿರುವಂತೆ ಮಾಡಿ ಎಂದು ಕೇಳಿಕೊಂಡಿದ್ದಳು. ಗಂಡ ನಿನ್ನ ಜೊತೆಗೆ ಇರುವಂತೆ ಮಾಡುತ್ತೇನೆ ಎಂದ ಆರೋಪಿ ಹಜರತ್, ಒಂದು ಲಕ್ಷ ಹಣ ಪಡೆದಿದ್ದ. ಆ ಬಳಿಕ ವೈಯಕ್ತಿಕ ಸಮಸ್ಯೆಯಿದೆ ಎಂದು ಲೋನ್ ಮಾಡಿಸಿ ಬರೊಬ್ಬರಿ ಏಳು ಲಕ್ಷ ಪಡೆದು, ಪ್ರತಿ ತಿಂಗಳು ಇಎಮ್ಐ ಹಣ ಕಟ್ಟುತ್ತೇನೆ ಎಂದು ಹೇಳಿ, ಹಣ ಕೈಗೆ ಬಂದ ತಕ್ಷಣ ಎಸ್ಕೇಪ್ ಆಗಿದ್ದ. ಈ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ಆರೋಪಿಯ ಬಂಧನವಾಗಿದ್ದು, ವಿಚಾರಣೆ ವೇಳೆ ಸಾಕಷ್ಟು ಮಂದಿಗೆ ಇದೇ ರೀತಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:20 pm, Wed, 20 December 23