ಅಪ್ರಾಪ್ತ ಮಗಳಿಗೆ ಮದುವೆ ಮಾಡಿಸಲು ಒಲ್ಲೆ ಎಂದ ಗಂಡ, ಆತ್ಮಹತ್ಯೆ ಮಾಡಿಕೊಂಡ ಪತ್ನಿ
ಅನಾರೋಗ್ಯದಿಂದ ಬಳಲುತ್ತಿರುವ ಮಹಿಳೆಗೆ ತಾನು ಕೊನೆಯುಸಿರೆಳೆಯುವ ಮುನ್ನ ತನ್ನ ಎರಡನೇ ಮಗಳಿಗೂ ಮುದವೆ ಮಾಡಿಸಿ ತಲೆ ಮೇಲೆ ಇರುವ ಜವಾಬ್ದಾರಿ ಇಳಿಸಬೇಕೆಂಬ ಹಠ. ಆದರೆ, ಅಪ್ರಾಪ್ತ ಮಗಳಿಗೆ ಮದುವೆ ಮಾಡಿಸಲು ಸಾಧ್ಯವಿಲ್ಲ ಎಂದು ಗಂಡ ಹೇಳಿದ್ದಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು, ಆಗಸ್ಟ್ 18: ಅಪ್ರಾಪ್ತ ಮಗಳನ್ನು ಮದುವೆ ಮಾಡಿಸಲು ಕಾನೂನು ಅಡ್ಡಿ ಬರುತ್ತದೆ. ಹೀಗಾಗಿ ಈಗಲೇ ಮದುವೆ ಮಾಡಿಸಲು ಸಾಧ್ಯವಿಲ್ಲ ಎಂದು ಪತಿ ಹೇಳಿದ್ದಕ್ಕೆ ಮನನೊಂದ ಪತ್ನಿ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರದ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಫೀಸ ಸುಲ್ತಾನ (42) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
ಹಫೀಸ ಸುಲ್ತಾನಗೆ ಸೈಯದ್ (34) ಎರಡನೇ ಪತಿಯಾಗಿದ್ದಾರೆ. ಮೊದಲ ಪತಿಯಿಂದ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಮೊದಲ ಪತಿ ವಿಚ್ಛೇದನ ನೀಡಿದ ಹಿನ್ನೆಲೆ ಒಂಬತ್ತು ವರ್ಷಗಳ ಹಿಂದೆ ಸೈಯದ್ ಅವರನ್ನು ಮದುವೆಯಾಗಿದ್ದರು. ಈ ನಡುವೆ ಹಫೀಸ ಅನಾರೋಗ್ಯಕ್ಕೆ ಒಳಗಾಗಿದ್ದಳು.
ಹೀಗಾಗಿ, ತಾನು ಬದುಕಿದ್ದಾಗಲೇ ತನ್ನ ಎರಡನೇ ಮಗಳ ಮದುವೆ ನೋಡಬೇಕು. ಆ ಮೂಲಕ ತನ್ನ ತಲೆ ಮೇಲೆ ಇರುವ ಜವಾಬ್ದಾರಿ ಇಳಿಸಬೇಕು ಎಂಬ ಚಿಂತೆಯಲ್ಲಿದ್ದಳು. ಅದರಂತೆ, ಆರು ತಿಂಗಳ ಹಿಂದೆ ಹಿರಿಯ ಮಗಳಿಗೆ ಮದುವೆ ಮಾಡಿಕೊಟ್ಟಿದ್ದ ಪತಿಗೆ ಅಪ್ರಾಪ್ತಳಾಗಿರುವ ಎರಡನೇ ಮಗಳಿಗೂ ಮದುವೆ ಮಾಡಿಕೊಡುವಂತೆ ಒತ್ತಾಯಿಸಲು ಆರಂಭಿಸಿದ್ದಳು.
ಪತ್ನಿಯ ಮಾತಿಗೆ ಒಲ್ಲೆ ಎಂದ ಸೈಯದ್, ಅಪ್ರಾಪ್ತೆಗೆ ಮದುವೆ ಮಾಡಿದರೆ ಜೈಲೂಟ ಗ್ಯಾರಂಟಿ ಎಂದು ಹೇಳಿದ್ದಾರೆ. ಈ ವೇಳೆ, ತಾನು ಸಾಯುವ ಮುನ್ನ ಎರಡನೇ ಮಗಳ ಮದುವೆ ನೋಡಬೇಕು ಎಂದು ಪಟ್ಟು ಹಿಡಿದಿದ್ದಳು. ಆದರೆ ಪತಿ ಕಾನೂನಿನ ಬಗ್ಗೆ ತಿಳಿ ಹೇಳಿ ಮದುವೆ ಮಾಡಿಸಲು ನಿರಾಕರಿಸಿದ್ದಾರೆ.
ಇದರಿಂದ ಮನನೊಂದ ಹಫೀಸ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:25 pm, Fri, 18 August 23