ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಸಂದೇಶ ಹರಡಿದ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ

ವಿಧಾನಸೌಧ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಲ್ಲವನ್ನೂ ನೋಡಿಕೊಂಡು ಮುಖ್ಯಮಂತ್ರಿಗಳು ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್​ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಸಂದೇಶ ಹರಡಿದ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ
ಹೆಚ್​ಡಿ ಕುಮಾರಸ್ವಾಮಿ
TV9kannada Web Team

| Edited By: preethi shettigar

Mar 29, 2022 | 6:31 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ಸಂಘಟನೆಗಳ ಕೈಗೊಂಬೆ ಆಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಟೀಕಾ ಪ್ರಹಾರ ನಡೆಸಿದರು ಮುಸ್ಲಿಂ ಸಮುದಾಯದ ಅಂಗಡಿಗಳಲ್ಲಿ ವ್ಯಾಪಾರ ಮಾಡಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ(Social media) ಪ್ರಚೋದನಾತ್ಮಕ ಸಂದೇಶಗಳನ್ನು ಹಾಡುತ್ತಿರುವ ಕಿಡಿಗೇಡಿಗಳಿಗೆ ಮುಲಾಜಿಲ್ಲದೆ ಕಡಿವಾಣ ಹಾಕಬೇಕು, ಈ ವಿಷಯದಲ್ಲಿ ಸರಕಾರ ಸುಮ್ಮನಿರಬಾರದು ಎಂದು ಅವರು ರಾಜ್ಯ ಸರಕಾರವನ್ನು (State Government) ಒತ್ತಾಯ ಮಾಡಿದರು.

ವಿಧಾನಸೌಧ ಬಳಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲಾ ಆಗಿದ್ದರೂ ಸರಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಎಲ್ಲವನ್ನೂ ನೋಡಿಕೊಂಡು ಮುಖ್ಯಮಂತ್ರಿಗಳು ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೆಚ್​ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಒಂದು ಸಮುದಾಯಕ್ಕೆ ಮೀಸಲಲ್ಲ. ಆರೂವರೆ ಕೋಟಿ ಕನ್ನಡಿಗರಿಗೆ ಸೇರಿದವರು. ಎಲ್ಲರ ರಕ್ಷಣೆ ಸರಕಾರದ ಹೊಣೆ. ಒಂದು ಸಮುದಾಯವನ್ನು ರಕ್ಷಣೆ ಮಾಡಿಕೊಂಡು ಸರಕಾರ ನಡೆಸಲು ಆಗದು. ಇಂತದ್ದನ್ನು ಕನ್ನಡಿಗರು ಸಹಿಸುವುದಿಲ್ಲ. ಅವರನ್ನು ಕಿತ್ತು ಒಗೆಯುತ್ತಾರೆ ಎಂದು ಹೆಚ್​.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ನಾನು ವಾಟ್ಸಪ್​ನಲ್ಲಿ ಬಂದ ಈ ಸಂದೇಶವನ್ನು ಗಮನಿಸಿದೆ. ಇಂಥ ಕಿಡಿಗೇಡಿ ಸಂದೇಶಗಳನ್ನು ಯಾರು ಹರಡುತ್ತಿದ್ದಾರೆ? ಅವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಮಟ್ಟ ಹಾಕಬೇಕು. ಒಂದು ವೇಳೆ ಶಾಸಕರು, ಸಚಿವರೇ ಇದ್ದರೂ ಅವರನ್ನು ಬಂಧಿಸಬೇಕು ಹಾಗೂ ಅವರಿಗೆ ಜನರೇ ಬಹಿಷ್ಕಾರ ಹಾಕಬೇಕು ಆಗ್ರಹಪಡಿಸಿದರು.

ಮುಸ್ಲಿಂ ಸಮುದಾಯದ ವ್ಯಾಪಾರಗಳಿಗೆ ನಿಷೇಧ ಹೇರಬೇಕು ಎನ್ನುವ ಸಂದೇಶದಲ್ಲಿ ಸುಮಾರು 23 ವಿಚಾರಗಳ ವಿಷಯಗಳ ಬಗ್ಗೆ ಪ್ರೋತ್ಸಾಹ ಕೊಡಬೇಡಿ ಅಂತ ಬರೆಯಲಾಗಿದೆ. ಹಣ್ಣಿನ ವ್ಯಾಪಾರ, ಹೋಟೆಲ್ ,ಹಾರ್ಡ್ ವೇರ್, ಟ್ರಾವೆಲ್, ಕಿರಾಣಿ ಶಾಪುಗಳಿಗೆ ಹೋಗಬೇಡಿ. ಟ್ರಾವಲ್ ಬುಕಿಂಗ್, ಕಿರಾಣಿ ಅಂಗಡಿ, ಮುಸ್ಲಿಂ ವೈದ್ಯರ ಬಳಿ‌ ಹೋಗಬೇಡಿ ಎಂದು ಜನರಿಗೆ ತಲೆ ಕೆಡಿಸುವ ಕೆಲಸ ಆಗುತ್ತಿದೆ. ಹಿಂದುಗಳ ಅಂಗಡಿಗಳಿಗೆ ಮಾತ್ರ ಹೋಗಿ ಅಂತ ಸಂದೇಶ ಹರಡುತ್ತಿದ್ದಾರೆ.‌ ಇವರು ನಮ್ಮ ದೇಶವನ್ನು ಎಲ್ಲಿಗೆ ಒಯ್ಯುತ್ತಿದ್ದಾರೆ? ಸರ್ವ ಜನಾಂಗದ ತೋಟವನ್ನು ಸರ್ವನಾಶ ಮಾಡುತ್ತಿದ್ದಾರೆ. ಇಂತವರನ್ನು ಸುಮ್ಮನೆ ಬಿಡಬಾರದು. ಹಿಂದೂಗಳ ಅಂಗಡಿಗಳಲ್ಲಿ ಮಾತ್ರ ವ್ಯಾಪಾರ ಮಾಡಿ ಎಂದರೆ ಅರ್ಥವೇನು? ಎಂದು ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.

ಕರ್ನಾಟಕದಲ್ಲಿ ಈ ರೀತಿಯ ಪರಿಸ್ಥಿತಿ ಬರಲಿಕ್ಕೆ ಜೆಡಿಎಸ್ ಆಗಲಿ ಅಥವಾ ಕುಮಾರಸ್ವಾಮಿ ಕಾರಣ ಅಲ್ಲ. ಕಾಂಗ್ರೆಸ್ ನೇರ ಕಾರಣ. ಅವರಿಂದಲೇ ಇಂಥ ಸರಕಾರ ಬಂದಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ನೇರ ವಾಗ್ದಾಳಿ ನಡೆಸಿದರು.

ಈ ಕಾಂಗ್ರೆಸ್ ನಾಯಕರ ತೀರ್ಮಾನಗಳು ಮತ್ತು ನಮಗೆ ಕಾಂಗ್ರೆಸ್​ನವರು ಜೆಡಿಎಸ್​ಗೆ ಕೊಟ್ಟ ಕಿರುಕುಳ ಇಂಥ ಪರಿಸ್ಥಿತಿಗೆ ಕಾರಣ. ಈ ನಾಡಿನ ಜನರು ಈ ಪರಿಸ್ಥಿತಿ ಅನುಭವಿಸಲಿಕ್ಕೆ ಒಂದು ಕಡೆ ಕಾಂಗ್ರೆಸ್, ಮತ್ತೊಂದು ಕಡೆ ಬಿಜೆಪಿಯವರೆ ಕಾರಣ. ಈ ಕಾರಣಕ್ಕೆ ನಾನು ಹಿಂದು ಸಮುದಾಯದ ಕೆಲ ಯುವಕರಿಗೆ ಕೈ ಮುಗಿದು ಹೇಳುತ್ತೇನೆ, ರಾಜ್ಯ ಹಾಳು ಮಾಡಿಕೊಳ್ಳಬೇಡಿ. ರಾಜಕೀಯಕ್ಕಾಗಿ ಮನಸುಗಳನ್ನು ಕೆಡಿಸುವ ಕಿಡಿಗೇಡಿಗಳ ಮಾತು ಕೇಳಬೇಡಿ. ಯಾರು ಕೂಡ ಇಲ್ಲಿ ಶಾಶ್ವತ ಅಲ್ಲ. ಕರ್ನಾಟಕ ಶಾಂತಿಯ ತೋಟ, ಇದನ್ನು ಹಾಳು ಮಾಡಬೇಡಿ ಎಂದು ಹೆಚ್​.ಡಿ. ಕುಮಾರಸ್ವಾಮಿ ಮನವಿ ಮಾಡಿದರು.

ಈದ್ಗಾ ಮೈದಾನ ಉದಾಹರಣೆ

ಈದ್ಗಾ ಮೈದಾನದ ಹೆಸರಲ್ಲಿ ಹಲವಾರು ಅಮಾಯಕರ ಮಕ್ಕಳನ್ನು ಬಲಿ ತಗೊಂಡರು. ದೇವೇಗೌಡರು ಸಿಎಂ ಆಗುವ ತನಕ ಪ್ರತಿವರ್ಷ ಒಬ್ಬರು, ಇಬ್ಬರನ್ನಾದರೂ ಬಲಿ ಪಡೆಯುತ್ತಾ ಇದ್ದರು. ಅಂತಹ ಸಂದರ್ಭದಲ್ಲಿ ಈದ್ಗಾ ವಿವಾದವನ್ನು ದೇವೇಗೌಡರು ಬಗೆಹರಿಸಿದರು. ಇವತ್ತು ಏನಾಗಿದೆ? ಬಿಜೆಪಿಯವರು ಹೀಗೆಲ್ಲಾ ಮಾಡಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಅವರು ದೂರಿದರು.

ಇದು ಅನೈತಿಕ ಸರಕಾರ ಎಂದು ಟೀಕೆ ಮಾಡುವ ಇವರು, ಈ ಸರ್ಕಾರ ಬರಲು ಮೂಲ ಕಾರಣರು ಎಂದು ಕಾಂಗ್ರೆಸ್ ಮೇಲೆ ಟೀಕಾಪ್ರಹಾರ

ಸಿಎಂ ಬಗ್ಗೆ ಮಾತನಾಡಿದರೆ ಅರೆಸ್ಟ್ ಮಾಡುತ್ತಾರೆ!

ರಾಜ್ಯವನ್ನು ಕೆಟ್ಟ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಬಿಜೆಪಿಯವರು. ಈ ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯಾ? ಏನು ಮಾಡುತ್ತಿದೆ ಸರ್ಕಾರ? ಸಿಎಂ ವಿರುದ್ಧ ಮಾತಾಡಿದ್ದಕ್ಕೆ ಒಬ್ಬನನ್ನು ಅರೆಸ್ಟ್ ಮಾಡಿದ್ದಾರೆ. ಇಂಥ ವಿಚಾರಗಳ ಬಗ್ಗೆ ಪ್ರಚೋದನೆ ಮಾಡುವವರನ್ನು ಕೂಡ ಅರೆಸ್ಟ್ ಮಾಡಿ. ಈ ರೀತಿಯಲ್ಲಿ ಪ್ರಚೋದನೆ ಮಾಡಿದರೆ ಶಾಸಕನೇ ಆಗಿರಲಿ, ಸಚಿವನೇ ಆಗಿರಲಿ ಅವರನ್ನು ಕೂಡ ಅರೆಸ್ಟ್ ಮಾಡಿ ಎಂದು ಅವರು ಆಗ್ರಹಿಸಿದರು.

ಸಮಾಜವನ್ನು ಒಡೆಯುವ ಇವರು ದೇಶ ಉಳಿಸುವವರಲ್ಲ. ದೇಶ ಉಳಿಸುವವರು ಜನರು, ಮುಗ್ಧ ಪ್ರಜೆಗಳು. ನಾನು ಯುವಕರಿಗೆ ಹೇಳುತ್ತೇನೆ, ಯುವಕರು ಇದಕ್ಕೆ ಬಲಿಯಾಗಬಾರದು. ಇದರಿಂದ ನಿಮ್ಮ ಭವಿಷ್ಯ ರೂಪಿಸಲು ಆಗಲ್ಲ. ಹಿಂದು ಯುವಕರಿಗೆ ಕೈ ಮುಗಿದು ಹೇಳುತ್ತೇನೆ. ರಾಜ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಹೆಚ್​ಡಿಕೆ ಕಿವಿಮಾತು ಹೇಳಿದರು.

ಎಲ್ಲರೂ ಒಂದಲ್ಲ ಒಂದು ದಿನ ಮಣ್ಣಿಗೆ ಹೋಗುತ್ತಾರೆ. ಕಿಡಿಗೇಡಿಗಳು ಕೂಡ ಮಣ್ಣಿಗೆ ಹೋಗುತ್ತಾರೆ. ಕರ್ನಾಟಕ ರಾಜ್ಯ ಶಾಂತಿಯ ತೋಟ, ಹಾಳು ಮಾಡಬೇಡಿ. ಇಂತಹ ವ್ಯಕ್ತಿಗಳನ್ನು ಕರ್ನಾಟಕದ ಜನರು ಬಹಿಷ್ಕಾರ ಮಾಡಬೇಕು. ಸಮಾಜದಿಂದ ಹೊರ ಹಾಕಬೇಕು. ಇಲ್ಲದಿದ್ದರೆ ಮುಂದೆ ಕರ್ನಾಟಕಕ್ಕೆ ಒಳ್ಳೆಯ ದಿನಗಳು ಬರಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಇಂಥ ಕೃತ್ಯಗಳು ನಡೆಯುತ್ತಿದ್ದರೆ ಸದನದಲ್ಲಿ ಸಭಾಧ್ಯಕ್ಷರು ಚುನಾವಣೆ ಸುಧಾರಣೆ ಬಗ್ಗೆ ಚರ್ಚೆ ಇಟ್ಟುಕೊಂಡಿದ್ದಾರೆ. ಯಾವ ಪುರುಷಾರ್ಥಕ್ಕೆ ಈ ಚರ್ಚೆ? ನನಗೆ ಈ ಕಲಾಪದಲ್ಲಿ ಭಾಗಿಯಾಗುವ ಉದ್ದೇಶ ಇರಲಿಲ್ಲ. ಆದರೆ ಇಂಥ ಸಮಾಜಘಾತುಕ ಸಂದೇಶಗಳ ಬಗ್ಗೆ, ಇವುಗಳ ಹಿಂದೆ ಇರುವವರನ್ನು ಹೊರಗೆ ಎಳೆಯಬೇಕು ಎನ್ನುವ ಬಗ್ಗೆ ಮಾತನಾಡಲು ಕಲಾಪಕ್ಕೆ ಬಂದೆ. ಸದನದಲ್ಲಿ ಇಂಥ ವಿಚಾರ ಚರ್ಚೆ ಆಗಬೇಕು ಎಂದು ಪ್ರತಿಪಾದಿಸಿದರು.

ಉತ್ತರ ಭಾರತದಲ್ಲಿ ಮತಕ್ಕಾಗಿ ಮಾಡಿದ್ದನ್ನೇ ಇಲ್ಲಿಯೂ ಮಾಡಲು ಹೊರಟಿದ್ದಾರೆ. ಉತ್ತರವೇ ಬೇರೆ, ದಕ್ಷಿಣವೇ ಬೇರೆ. ಉತ್ತರದಲ್ಲಿ ಮೊಘಲರ ಆಡಳಿತ ಇತ್ತು. ಅನೇಕ ದಾಳಿಗಳು ನಡೆದವು. ಆದರೆ ಇಲ್ಲಿನ ಪರಿಸ್ಥಿತಿ ಬೇರೆ. ನಮ್ಮ ರಾಜ್ಯ ನೆಮ್ಮದಿಯ ನಾಡು. ಆದರೂ ಅಶಾಂತಿಯನ್ನು ಹುಟ್ಟು ಹಾಕುವ ಕೃತ್ಯ ನಡೆಯುತ್ತಿದೆ. ಇದು ಖಂಡಿತಾ ಸರಿಯಲ್ಲ ಎಂದು ಅವರು ಒತ್ತಿ ಹೇಳಿದರು.

ಸಮಾಜವನ್ನು ಒಡೆಯುವ ಸಂದೇಶ ಮುಖ್ಯವಲ್ಲ. ಹೊಟ್ಟೆಗೆ ತಿನ್ನಲು ಏನು ಕೊಟ್ಟಿದ್ದಾರೆ, ಹೊಟ್ಟೆಗೆ ತಣ್ಣಿರ್ ಬಟ್ಟೆ ಅಷ್ಟೇ. ಈ ಸಮಾಜವನ್ನು ವಿಘಟನೆ ಮಾಡುತ್ತಿರುವವರು ಹಿಂದು ದೇವಸ್ಥಾನಕ್ಕೆ ದಲಿತರನ್ನು ಪೂಜೆ ಮಾಡಲು ಬಿಡುತ್ತಾರಾ? ದೇವಸ್ಥಾನ ಕಟ್ಟುವರು ಓಬಿಸಿ, ದಲಿರು. ದೇವಸ್ಥಾನದ ಒಳಗೆ ಕೂತುಕೊಂಡು ಆಸ್ತಿ ಹೊಡೆಯುವವರು ಇಂಥ ವಿದ್ರೋಹದ ಕೆಲಸ ಮಾಡುವವರು ಎಂದ ಅವರು, ನಾನೆಂದೂ ಇಷ್ಟು ಕಠಿಣವಾಗಿ ಮಾತಾಡಿಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇದನ್ನೂ ಓದಿ: ವಿಧಾನಸಭೆ: ಶಾಂತಿಯ ತೋಟವನ್ನು ಹಾಳು ಮಾಡಬೇಡಿ, ಕನ್ನಡಿಗರೇ ದಾರಿ ತಪ್ಪಬೇಡಿ: ಹೆಚ್​ಡಿ ಕುಮಾರಸ್ವಾಮಿ ಮನವಿ

ಕುಮಾರಸ್ವಾಮಿ ಹೋಟೆಲ್​ನಲ್ಲಿ ರಾಸಲೀಲೆ ಮಾಡಿಕೊಂಡಿದ್ದ, ಇನ್ಮುಂದೆ ಹೆಚ್​ಡಿಕೆ ಬಗ್ಗೆ ಏಕವಚನದಲ್ಲಿ ಮಾತಾಡುವೆ -ಯೋಗೇಶ್ವರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada