
ಬೆಂಗಳೂರು, ಮೇ 10: ಸರ್ಕಾರಿ ಕಚೇರಿಗಳಲ್ಲಿನ ಕಡತಗಳ ಸಂರಕ್ಷಣೆ ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದರೂ, ಬೆಂಗಳೂರಿನ (Bengaluru) ಕೆ.ಆರ್. ಸರ್ಕಲ್‌ನಲ್ಲಿರುವ ಲೋಕೋಪಯೋಗಿ ಇಲಾಖೆ (PWD) ಕಚೇರಿಯಲ್ಲಿ ಅಧಿಕಾರಿಗಳ ಭಾರೀ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ. ಮಳೆ ನೀರಿನಿಂದಾಗಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ವ್ಯವಹಾರಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ನೀರು ಪಾಲಾಗಿವೆ.
ಕಳೆದ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ನೆಲಮಹಡಿಯಲ್ಲಿರುವ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಗೆ ನೀರು ನುಗ್ಗಿತ್ತು. ಈ ಸಂದರ್ಭದಲ್ಲಿ ಭೂಸ್ವಾಧೀನ ಮತ್ತು ಪರಿಹಾರಕ್ಕೆ ಸಂಬಂಧಿಸಿದ ಪ್ರಮುಖ ಕಡತಗಳು ಸಂಪೂರ್ಣವಾಗಿ ಒದ್ದೆಯಾಗಿವೆ. ದಾಖಲೆಗಳ ಮಹತ್ವ ಅರಿತೂ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸದ ಅಧಿಕಾರಿಗಳ ಬೇಜವಾಬ್ದಾರಿತನವೇ ಈ ಎಡವಟ್ಟಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ D. Sudhakar Passes Away: ಸಚಿವ ಡಿ. ಸುಧಾಕರ್ ನಿಧನ, ಅನಾರೋಗ್ಯದಿಂದ ಬಳಲುತ್ತಿದ್ದ ನಾಯಕ ಇನ್ನಿಲ್ಲ
ಪ್ರಸ್ತುತ ಹಾನಿಗೊಳಗಾದ ಫೈಲ್‌ಗಳನ್ನು ಕಚೇರಿಯ ಮುಂಭಾಗದಲ್ಲಿ ಹಪ್ಪಳ ಒಣಗಿಸುವ ರೀತಿಯಲ್ಲಿ ಬಿಸಿಲಿಗೆ ಹಾಕಲಾಗಿದೆ. ದಾಖಲೆಗಳಲ್ಲಿನ ಬರಹಗಳು ಮತ್ತು ಟಿಪ್ಪಣಿಗಳು ಅಳಿಸಿ ಹೋಗಿರುವ ಆತಂಕವಿದ್ದು, ಆಡಳಿತ ವ್ಯವಸ್ಥೆಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೊತ್ತದ ವ್ಯವಹಾರಗಳ ಮಾಹಿತಿಯುಳ್ಳ ಈ ದಾಖಲೆಗಳ ನಾಶದ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ