ನಾಳೆ (ನ. 06) ಬೆಂಗಳೂರಿಗೆ ಮಲ್ಲಿಕಾರ್ಜುನ ಖರ್ಗೆ ಆಗಮನ: ಸರ್ವೋದಯ ಸಮಾವೇಶಕ್ಕೆ ಕಾಂಗ್ರೆಸ್ ಭರ್ಜರಿ ತಯಾರಿ
ನಾಳೆ (ನ. 06) ಬೆಂಗಳೂರಿಗೆ ಮಲ್ಲಿಕಾರ್ಜುನ ಖರ್ಗೆ ಆಗಮನ ಹಿನ್ನೆಲೆ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಆಯೋಜನೆ ಮಾಡಲಾಗಿದೆ.
ಬೆಂಗಳೂರು: ನಾಳೆ (ನ. 06) ಬೆಂಗಳೂರಿಗೆ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಆಗಮನ ಹಿನ್ನೆಲೆ ಅರಮನೆ ಮೈದಾನದಲ್ಲಿ ಸರ್ವೋದಯ ಸಮಾವೇಶ ಆಯೋಜನೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷರಾದ ಬಳಿಕ ರಾಜ್ಯಕ್ಕೆ ಮೊದಲ ಸಲ ಮಲ್ಲಿಕಾರ್ಜುನ ಖರ್ಗೆ ಭೇಟಿ ನೀಡುತ್ತಿದ್ದಾರೆ. ನಾಳೆ ಬೆಳಗ್ಗೆ 10.55ಕ್ಕೆ ಏರ್ಪೋರ್ಟ್ಗೆ ಆಗಮಿಸಲಿದ್ದು, ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತಕ್ಕೆ ‘ಕೈ’ ನಾಯಕರು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಏರ್ಪೋರ್ಟ್ ರಸ್ತೆಯ ಟೋಲ್ಗೇಟ್, ಹೆಬ್ಬಾಳ, ಮೇಖ್ರಿ ಸರ್ಕಲ್ ಬಳಿ ‘ಕೈ’ ನಾಯಕರು ಸ್ವಾಗತ ಕೋರಲಿದ್ದಾರೆ. ನಾಳೆ ಮಧ್ಯಾಹ್ನ 2.30ಕ್ಕೆ ಅರಮನೆ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, 50 ಸಾವಿರ ಜನರು ಭಾಗಿಯಾಗುವ ನಿರೀಕ್ಷೆಯಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಬೆಂಗಳೂರಿನತ್ತ ಹೊರಟ ಸಾವಿರಾರು ಕೈ ಕಾರ್ಯಕರ್ತರು:
ಇನ್ನು ಖರ್ಗೆ ಸ್ವಾಗತಕ್ಕೆ ತವರು ಜಿಲ್ಲೆ ಕಲಬುರಗಿಯಿಂದ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ಅಫಜಲಪುರ ಸೇರಿದಂತೆ ಜಿಲ್ಲೆಯ ಹಲವಡೆಯಿಂದ ಸಾವಿರಾರು ಜನರು ಬೆಂಗಳೂರಿನತ್ತ ಹೊರಟ್ಟಿದ್ದಾರೆನ್ನಲಾಗುತ್ತಿದೆ. ಕೈ ಮುಖಂಡ ಜೆ.ಎಂ ಕೊರಬು ನೇತೃತ್ವದಲ್ಲಿ ಕಾರ್ಯಕರ್ತರು ಬೆಂಗಳೂರಿನತ್ತ ಆಗಮಿಸುತ್ತಿದ್ದಾರೆ. ಖರ್ಗೆ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಾವಿರಕ್ಕೂ ಅಧಿಕ ವಾಹನ ಗಳಲ್ಲಿ ಬೆಂಗಳೂರಿನತ್ತ ಕೈ ಕಾರ್ಯಕರ್ತರ ದಂಡು ಆಗಮಿಸುತ್ತಿದೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅ 17ರಂದು ಮತದಾನ ನಡೆದಿತ್ತು. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ್ದರು. ಸದ್ಯ ಎಐಸಿಸಿ ನೂತನ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಪಟ್ಟಗಿಟ್ಟಿಸಿಕೊಂಡರು. 7,897 ಮತಗಳನ್ನ ಮಲ್ಲಿಕಾರ್ಜುನ ಖರ್ಗೆ ಪಡೆದಿದ್ದು, 1,072 ಮತಗಳನ್ನ ಪಡೆದ ‘ಕೈ’ ನಾಯಕ ಶಶಿ ತರೂರ್ ಪಡೆದುಕೊಂಡಿದ್ದರು.
24 ವರ್ಷದ ಬಳಿಕ ಗಾಂಧಿಯೇತರ ನಾಯಕನಿಗೆ ಅಧ್ಯಕ್ಷ ಪಟ್ಟ ಒದಗಿದೆ. 9,385 ಮತಗಳು ಚಲಾವಣೆಯಾಗಿದ್ದು, 416 ಮತಗಳು ಅಮಾನ್ಯವಾಗಿವೆ. 1975ರಲ್ಲಿ ಎಸ್.ನಿಜಲಿಂಗಪ್ಪ ಎಐಸಿಸಿ ಅಧ್ಯಕ್ಷರಾಗಿದ್ದರು. ಬಳಿಕ ಖರ್ಗೆಗೆ ಅಧ್ಯಕ್ಷ ಪಟ್ಟ ಒಲಿದಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಏರಿದ ಎರಡನೇ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.