ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಹಾವು ಕಚ್ಚಿ ವ್ಯಕ್ತಿ ದುರಂತ ಸಾವು

ಬೇರೆ ಋತುಮಾನಗಳಿಗೆ ಹೋಲಿಸಿದರೆ ಮಳೆಗಾಲದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹುಳು-ಹುಪ್ಪಟೆ, ಹಾವಿನಂತಹ ಸರೀಸೃಪಗಳು ಮನೆಯೊಳಗೆ ಬರುವುದನ್ನು ನೀವು ನೋಡಿರಬಹುದು. ಅವುಗಳು ಬಂದು ಬೆಚ್ಚನೆ ಸ್ಥಳದಲ್ಲಿ ಅವಿತುಕೊಳ್ಳುತ್ತವೆ. ಚಪ್ಪಲಿ, ಶೂ, ವಾಹನಗಳಲ್ಲಿ ಸಹ ಸೇರಿಕೊಂಡುಬಿಡುತ್ತವೆ. ಮುಖ್ಯವಾಗಿ ಚಪ್ಪಲಿ, ಶೂ ಹಾಕಿಕೊಳ್ಳುವಾಗ ಕೊಂಚ ಎಚ್ಚರದಿಂದ ಇರಬೇಕು. ಯಾಕಂದ್ರೆ ಶೂನಂತೆ ಇರುವ ಕ್ರಾಕ್ಸ್​​ ಚಪ್ಪಲಿಯಲ್ಲಿ ಸೇರಿಕೊಂಡಿದ್ದ ಹಾವು ವ್ಯಕ್ತಿಗೆ ಕಚ್ಚಿದೆ. ಪರಿಣಾಮ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಕ್ರಾಕ್ಸ್ ಚಪ್ಪಲಿಯಲ್ಲಿ ಅಡಗಿದ್ದ ಹಾವು ಕಚ್ಚಿ ವ್ಯಕ್ತಿ ದುರಂತ ಸಾವು
Prakash
Updated By: ರಮೇಶ್ ಬಿ. ಜವಳಗೇರಾ

Updated on: Aug 30, 2025 | 8:21 PM

ಬೆಂಗಳೂರು, (ಆಗಸ್ಟ್ 30): ಮನೆಯಿಂದ ಹೊರಹೋಗುವಾಗ ಚಪ್ಪಲಿ (slipper), ಶೂ ಹಾಕುವ ಮುನ್ನ ಅವುಗಳನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಯಾಕಂದ್ರೆ ಕ್ರಾಕ್ಸ್​​ ಚಪ್ಪಲಿಯೊಳಗೆ ಸೇರಿಕೊಂಡಿದ್ದ ಕೊಳಕು ಮಂಡಲ ಹಾವು (snake )ಕಚ್ಚಿ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಬೆಂಗಳೂರು ಹೊರವಲಯದ ಬನ್ನೇರುಘಟ್ಟದ ರಂಗನಾಥ ಬಡಾವಣೆಯಲ್ಲಿ ಈ ದುರ್ಘಟನೆ ನಡೆದಿದೆ. ಮಂಜು ಪ್ರಕಾಶ್(41) ಮೃತ ದುರ್ವೈವಿ. ಪ್ರಕಾಶ್ ಅಪಘಾತದಲ್ಲಿ ಕಾಲಿನ ಸ್ಪರ್ಶಶಕ್ತಿ ಕಳೆದುಕೊಂಡಿದ್ದರಿಂದ ಹಾವು ಕಚ್ಚಿದ್ದನ್ನು ಗಮನಿಸಲಾಗದೆ ದುರಂತ ಸಂಭವಿಸಿದೆ.

ಮಂಜು ಪ್ರಕಾಶ್ ಅವರು ಇಂದು (ಆಗಸ್ಟ್ 30) ಬೆಳಗ್ಗೆ ಮನೆಯ ಹೊರಗೆ ಹೋಗಲು ಸಿದ್ಧವಾಗುತ್ತಿದ್ದರು. ಸಾಮಾನ್ಯವಾಗಿ ಬಳಸುವ ಕ್ರಾಕ್ಸ್ ಚಪ್ಪಲಿ ಮನೆಯ ಅಂಗಳದಲ್ಲೇ ಇಟ್ಟುಕೊಂಡಿದ್ದರು. ಅಲ್ಲಿ ಯಾರಿಗೂ ಗಮನಿಸದಂತೆ ಕೊಳಕು ಮಂಡಲ ಹಾವು ಒಳನುಗ್ಗಿ ಚಪ್ಪಲಿಯೊಳಗೆ ಅಡಗಿಕೊಂಡಿತ್ತು. ಅದನ್ನು ಗಮನಿಸದ ಮಂಜು ಪ್ರಕಾಶ್, ಚಪ್ಪಲಿಯನ್ನು ಧರಿಸಿ ಹೊರಗೆ ಹೋಗಿದ್ದಾರೆ. ಕೆಲವು ಸಮಯದ ನಂತರ ಅವರು ವಾಪಸ್ ಮನೆಗೆ ಮರಳಿ ಬಂದು ಮಲಗಿದ್ದರು. ಆಗಲೇ ಚಪ್ಪಲಿಯೊಳಗೆ ಅಡಗಿದ್ದ ಹಾವು ಕಚ್ಚಿದ ಪರಿಣಾಮ ಅವರ ದೇಹದಲ್ಲಿ ವಿಷ ಏರಿದ್ದು, ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ಇನ್ನು ನೆರೆಮನೆಯ ನಿವಾಸಿಯೊಬ್ಬರು ಚಪ್ಪಲಿಯನ್ನು ಗಮನಿಸಿದಾಗ, ಅದರೊಳಗೆ ಹಾವು ಸತ್ತಿರುವುದು ಕಂಡು ಬೆಚ್ಚಿಬಿದ್ದಿದ್ದು, ಕೂಡಲೇ ಅವರು ಮಂಜು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಆ ವೇಳೆಗೆ ಮಂಜು ಪ್ರಕಾಶ್ ಮಲಗಿದ್ದ ಹಾಸಿಗೆಯ ಮೇಲೆಯೇ ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದರು. ಮನೆಯವರು ಬಂದು ನೋಡಿದಾಗ ಅದಾಗಲೇ ಅವರ ಮಂಜು ಅವರ ಸಾವನ್ನಪ್ಪಿದ್ದರು.

ಮೃತ ಮಂಜು ಪ್ರಕಾಶ್ ಅವರು ಕಳೆದ ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ತಮ್ಮ ಕಾಲಿನ ಸ್ಪರ್ಶಶಕ್ತಿಯನ್ನು ಕಳೆದುಕೊಂಡಿದ್ದರು. ಹಾವು ಸಹ ಅದೇ ಕಾಲಿಗೆ ಕಚ್ಚಿರುವುದರಿಂದ ಅವರಿಗೆ ಯಾವುದೇ ಗೊತ್ತಾಗಿಲ್ಲ. ಕೊನೆಗೆ ಮನೆಗೆ ಬಂದು ಮಲಗಿದ್ದಾಗ ದೇಹದಲ್ಲಿ ವಿಷ ಹರಡಿದೆ.