Bengaluru: ಮದುವೆಯಾಗು ಎಂದಿದ್ದಕ್ಕೆ ಮಹಿಳೆಯನ್ನ ಎಂಟು ಬಾರಿ ಚುಚ್ಚಿಕೊಂದ ಪ್ರೇಮಿ
ಮದುವೆ ಆಗುವಂತೆ ಒತ್ತಾಯಿಸಿದ್ದಕ್ಕೆ ಮಹಿಳೆಗೆ 8 ಬಾರಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಇತ್ತ ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.

ಬೆಂಗಳೂರು, ನವೆಂಬರ್ 02: ಮದುವೆ ಆಗು ಎಂದಿದ್ದಕ್ಕೆ ಮಹಿಳೆಗೆ ಎಂಟು ಬಾರಿ ಚಾಕು ಇರಿದು ಕೊಲೆ (Murder) ಮಾಡಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇಣುಕಾ ಮೃತ ಮಹಿಳೆಯಾಗಿದ್ದು, ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಆರೋಪಿ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಏನು?
ರೇಣುಕಾಗೆ ಅದಾಗಲೇ ಮದುವೆಯಾಗಿದ್ದು, ಪತಿಯಿಂದ ದೂರವಾಗಿದ್ದಳು. ಒಂದು ಮಗುವಿನೊಂದಿಗೆ ಬದುಕು ಕಟ್ಟಿಕೊಂಡಿದ್ದ ರೇಣುಕಾಗೆ ಅದೇ ಏರಿಯಾದಲ್ಲಿ ಬ್ಯಾನರ್ ಪ್ರಿಂಟಿಂಗ್ ಮಾಡುವ ಕೆಲಸ ಮಾಡಿಕೊಂಡಿದ್ದ ಕುಟ್ಟಿ ಎಂಬಾತನ ಪರಿಚಯವಾಗಿತ್ತು. ಬಳಿಕ ಸ್ನೇಹ ಪ್ರೀತಿಗೆ ತಿರುಗಿದ್ದು, ಮದುವೆಯಾಗುವಂತೆ ಕುಟ್ಟಿಯನ್ನ ರೇಣುಕಾ ಒತ್ತಾಯಿಸಿದ್ದಳು. ಈ ರೀತಿಯ ಟೈಮ್ಪಾಸ್ ಪ್ರೀತಿ ಬೇಡ ಎಂದಿದ್ದಳು. ಹೀಗಾಗಿ ನಿನ್ನ ಬಳಿ ಮಾತನಾಡಬೇಕು ಬಾ ಎಂದು ರೇಣುಕಾಳನ್ನ ಕರೆದಿದ್ದ ಆರೋಪಿ, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲೆ ಬಳಿ ಆಕೆಗೆ ಎಂಟು ಬಾರಿ ಚಾಕುವಿನಿಂದ ಇರಿದಿದ್ದ. ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು, ಆರೋಪಿ ಕುಟ್ಟಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಇಂಟರ್ವ್ಯೂಗೆಂದು ಹೋದ ಯುವತಿ ಕಾಡಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆ
ರಾಜ್ಯೋತ್ಸವ ಮೆರವಣಿಗೆಯಲ್ಲಿ ಚಾಕು ಇರಿತ
ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಕೆಕೆ ಕೊಪ್ಪ ಗ್ರಾಮದ ಆದಿತ್ಯ ಬೆಂಡಿಗೇರಿ ಎಂಬಾತನಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದು, ಗಾಯಾಳುವನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕನ್ನಡ ರಾಜ್ಯೋತ್ಸವ ಮೆರವಣಿ ವೇಳೆ ಬೆಳಗಾವಿಯ ಸದಾಶಿವನಗರದ ಚೆನ್ನಮ್ಮ ವೃತ್ತದ ಬಳಿಯೂ ದುಷ್ಕರ್ಮಿಗಳು ಐವರಿಗೆ ಚಾಕು ಇರಿದು ಪರಾರಿ ಆಗಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



