ದಾಂಪತ್ಯ ಹೊಂದಾಣಿಕೆ ಕೊರತೆ: ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಕೇಸ್​​ ಬಗ್ಗೆ ಹೈಕೋರ್ಟ್​​ ಮಹತ್ವದ ಆದೇಶ

ದಾಂಪತ್ಯ ಹೊಂದಾಣಿಕೆ ಕೊರತೆ ಹಾಗೂ ವೈವಾಹಿಕ ಮನಸ್ತಾಪಗಳನ್ನು 'ಕ್ರೌರ್ಯ'ದ ಆರೋಪದಡಿ ಕ್ರಿಮಿನಲ್ ಪ್ರಕರಣವನ್ನಾಗಿ ಪರಿವರ್ತಿಸಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೈಸೂರಿನ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಅವರ ಪತ್ನಿ ಹೂಡಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ದಾಂಪತ್ಯ ಹೊಂದಾಣಿಕೆ ಕೊರತೆ: ಪತಿ ವಿರುದ್ಧ ಪತ್ನಿ ದಾಖಲಿಸಿದ್ದ ಕೇಸ್​​ ಬಗ್ಗೆ ಹೈಕೋರ್ಟ್​​ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್​
Image Credit source: Getty Images

Updated on: Aug 09, 2026 | 7:20 AM

ಮುಖ್ಯಾಂಶಗಳು

  • ವೈವಾಹಿಕ ವೈಮನಸ್ಸನ್ನು ಕ್ರೌರ್ಯವೆಂದು ಪರಿಗಣಿಸಲಾಗದು
  • ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್​
  • ದಾಂಪತ್ಯ ಹೊಂದಾಣಿಕೆ ಕೊರತೆ ಕೇಸ್​​ ಸಂಬಂಧ ಆದೇಶ

ಬೆಂಗಳೂರು, ಆಗಸ್ಟ್​​ 09: ದಾಂಪತ್ಯ ಹೊಂದಾಣಿಕೆಯ ಕೊರತೆ, ವೈವಾಹಿಕ ವೈಮನಸ್ಸು ಅಥವಾ ವಿವಾಹದ ಅನ್ಯೋನ್ಯತೆ ಇಲ್ಲದಿರುವುದನ್ನು ಕ್ರೌರ್ಯದ ಆರೋಪದಡಿ ಕ್ರಿಮಿನಲ್‌ ಪ್ರಕರಣವನ್ನಾಗಿ ಪರಿವರ್ತಿಸಲು ಕಾನೂನನ್ನು ಬಳಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ತಿಳಿಸಿದೆ. ಮೈಸೂರಿನ ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿ, ಅವರ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.

ಪ್ರಕರಣ ಏನು?

ಅರ್ಜಿದಾರ ಹಾಗೂ ದೂರುದಾರರು ಇಬ್ಬರೂ ಪೊಲೀಸ್‌ ಅಧಿಕಾರಿಗಳಾಗಿದ್ದು, 2023ರಲ್ಲಿ ವಿವಾಹವಾಗಿದ್ದರು. ಆದರೆ ವಿವಾಹವಾದ ನಾಲ್ಕು ತಿಂಗಳಲ್ಲೇ ಪತ್ನಿ ದೂರು ದಾಖಲಿಸಿದ್ದರು. ಅಲ್ಪಾವಧಿಯ ದಾಂಪತ್ಯ ಜೀವನದಲ್ಲಿ ಪತಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿಲ್ಲ, ವಿವಾಹವನ್ನು ಪೂರ್ಣಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್‌ 498A, 504 ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಇದನ್ನೂ ಓದಿ: ಹೆಚ್‌ಎಂಟಿ ಜಮೀನು ತೆರವುಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಡೆ: ಮರ ಕತ್ತರಿಸದಂತೆ ಹೆಚ್‌ಎಂಟಿಗೂ ಸೂಚನೆ

ಆರೋಪ-ಪ್ರತ್ಯಾರೋಪ

ವಿವಾಹ ಪೂರ್ಣಗೊಳ್ಳದಿರುವುದು ಮಾತ್ರ IPC ಸೆಕ್ಷನ್‌ 498A ಅಡಿಯಲ್ಲಿ ‘ಕ್ರೌರ್ಯ’ದ ಅಂಶವಾಗಲು ಸಾಧ್ಯವಿಲ್ಲ. ಇತರ ಆರೋಪಗಳಿಗೆ ಸಂಬಂಧಿಸಿದಂತೆ ದೂರುದಾರರು ಹಲ್ಲೆಯ ಬಗ್ಗೆ ಕೆಲವು ಅಸ್ಪಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅಜರ್ಜದಾರರು ವಾದಿಸಿದ್ದರು. ಇದಕ್ಕೆ ಪ್ರತಿಯಾಗಿ, ಆರೋಪಪಟ್ಟಿಯ ಸಾರಾಂಶದಲ್ಲೇ ತಮ್ಮ ವಿರುದ್ಧದ ಆರೋಪಗಳು ಸಾಬೀತಾಗುತ್ತವೆ ಎಂದು ಪತ್ನಿ ವಾದಿಸಿದ್ದರು. ಪತಿಯಾಗಿರುವ ವ್ಯಕ್ತಿ ತನ್ನೊಂದಿಗೆ ವಿವಾಹವಾಗಿದ್ದರೂ ವಿವಾಹವನ್ನು ಪೂರ್ಣಗೊಳಿಸದೆ, ನಾವು ಕೇವಲ ಸ್ನೇಹಿತರಾಗಿರೋಣ ಎಂದು ಹೇಳುತ್ತಿದ್ದರು. ಹೀಗಾಗಿ, ತನ್ನನ್ನು ಮದುವೆಯಾಗಿದ್ದೇ ಕ್ರೌರ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ಕೋರ್ಟ್​​ಗೆ ತಿಳಿಸಿದ್ದರು. ಅರ್ಜಿದಾರರಿಗೆ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧವಿದೆ ಎಂದೂ ಆರೋಪಿಸಿದ್ದರು.

ದಾಖಲೆಯಲ್ಲಿದ್ದ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, ಆಧಾರರಹಿತವಾದ ಈ ಕ್ರಿಮಿನಲ್‌ ಪ್ರಕರಣದ ಪರಿಣಾಮಗಳು ಕ್ರಿಮಿನಲ್‌ ನ್ಯಾಯಾಲಯದ ವ್ಯಾಪ್ತಿಯನ್ನು ಮೀರಿ ಹೋಗುತ್ತವೆ. ಇದರಿಂದ ಅರ್ಜಿದಾರರು ಕ್ರಿಮಿನಲ್‌ ಪ್ರಕ್ರಿಯೆಯ ದುರುಪಯೋಗ ಮತ್ತು ಕ್ರಿಮಿನಲ್‌ ಪ್ರಕರಣ ಬಾಕಿ ಇರುವುದರಿಂದ ಉಂಟಾಗುವ ಕಳಂಕ ಮತ್ತು ಸೇವಾ ವೃತ್ತಿಜೀವನದ ಮೇಲಿನ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗಲಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಅಂತಿಮವಾಗಿ, ಪೊಲೀಸ್‌ ಅಧಿಕಾರಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣದ ಮುಂದಿನ ಪ್ರಕ್ರಿಯೆಗಳನ್ನು ಹೈಕೋರ್ಟ್‌ ರದ್ದುಗೊಳಿಸಿತು ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us