ಮದುವೆಯಾಗಿ ಒಂದುವರೆ ವರ್ಷಕ್ಕೆ ವಿವಾಹಿತೆ ಸಾವು: ಅಳಿಯನೇ ಕೊಲೆಗೈದದ್ದು ಎಂದ ಮಹಿಳೆ ಪೋಷಕರು

ಬೆಂಗಳೂರಿನ ಯಲಹಂಕ ನ್ಯೂಟೌನ್​​​ನ ಬೃಂದಾವನ ಲೇಔಟ್​​ನಲ್ಲಿ 24 ವರ್ಷದ ವಿವಾಹಿತ ಮಹಿಳೆ ಹೆಣವಾಗಿರುವಂತಹ ಘಟನೆ ನಡೆದಿದೆ. ಮದುವೆಯಾಗಿ ಒಂದುವರೆ ವರ್ಷದಲ್ಲೇ ಮಹಿಳೆ ಸಾವನ್ನಪ್ಪಿರುವುದು ಸದ್ಯ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೃತ ಮಹಿಳೆಯ ಪೋಷಕರು ಇದು ಕೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಪತಿಯನ್ನು ಬಂಧಿಸಿದ್ದಾರೆ.

ಮದುವೆಯಾಗಿ ಒಂದುವರೆ ವರ್ಷಕ್ಕೆ ವಿವಾಹಿತೆ ಸಾವು: ಅಳಿಯನೇ ಕೊಲೆಗೈದದ್ದು ಎಂದ ಮಹಿಳೆ ಪೋಷಕರು
ಪ್ರಾತಿನಿಧಿಕ ಚಿತ್ರ
Image Credit source: google
Edited By:

Updated on: Mar 15, 2026 | 3:42 PM

ಬೆಂಗಳೂರು, ಮಾರ್ಚ್​​ 15: ಅವರದ್ದು ಕರ್ನಾಟಕದ ಗಡಿ ಭಾಗ. ಪಾವಗಡ ಮೂಲದ ಯುವತಿಗೆ ಅದೇ ಊರಿನ ಯುವಕನೊಂದಿಗೆ ಮದುವೆ ಮಾಡಿದ್ದರು. ಇನ್ನೇನು ಚೆನ್ನಾಗಿ ಇರ್ತಾರೆ ಎನ್ನುವಷ್ಟರಲ್ಲೇ ವಿವಾಹಿತ ಮಹಿಳೆ ಹೆಣವಾಗಿದ್ದಾಳೆ (death). ವರಿಸಿದವನೇ ಕೊಂದಿದ್ದಾನೆ ಎನ್ನವು ಆರೋಪ ಕೇಳಿಬರ್ತಿದೆ. ಯಲಹಂಕ ನ್ಯೂಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಬೆಂಗಳೂರಿನ ಯಲಹಂಕ ನ್ಯೂಟೌನ್​​​ನ ಬೃಂದಾವನ ಲೇಔಟ್​​ನಲ್ಲಿ ವಾಸವಿದ್ದ 24 ವರ್ಷದ ಶೃತಿ ಇಂದು ಹೆಣವಾಗಿ ಬಿದ್ದಿದ್ದಾಳೆ. ಕಳೆದ 2024ರ ಡಿಸೆಂಬರ್‌ನಲ್ಲಿ ಪವನ್ ಕಲ್ಯಾಣ್ ಎಂಬಾತನ ಜೊತೆ ಶೃತಿ ವಿವಾಹವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸಂಸಾರದಲ್ಲಿ ಬಿರುಗಾಳಿ ಎದ್ದಿತ್ತು. ಆರೋಪಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರು ವರದಕ್ಷಿಣೆಗಾಗಿ ಶೃತಿಗೆ ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂಬ ಆರೋಪಿಸಲಾಗಿತ್ತು. ಈ ವಿಚಾರಕ್ಕೆ ಜಗಳವೂ ಆಗಿದೆ. ಈ ಹಿಂದೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಲಾಗಿತ್ತು. ಆದರೂ ಕಿರುಕುಳ ನಿಂತಿರಲಿಲ್ಲ. ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಶೃತಿಯ ಶವ ಪತ್ತೆಯಾಗಿದೆ.

ಅಳಿಯನ ವಿರುದ್ಧ ಶೃತಿ ಪೋಷಕರು ಆಕ್ರೋಶ

ಇದು ಆತ್ಮಹತ್ಯೆಯಲ್ಲ, ಪತಿಯೇ ಕುತ್ತಿಗೆ ಬಿಗಿದು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ನೇಣು ಹಾಕಿದ್ದಾನೆ ಅನ್ನೊದು ಶೃತಿ ಪೋಷಕರ ಆಕ್ರೋಶ. ಸದ್ಯ ಯಲಹಂಕ ನ್ಯೂಟೌನ್ ಪೊಲೀಸರು ಮೃತಳ ಕುಟುಂಬ ನೀಡಿದ ದೂರಿನ ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಸದ್ಯ ಪತಿ ಪವನ್ ಕಲ್ಯಾಣ್‌ನನ್ನು ಬಂಧಿಸಿದ್ದಾರೆ.‌

ಇದೆಲ್ಲಾ ನಡೆದ ಬಳಿಕ ಇಂದು ಆಸ್ಪತ್ರೆಯ ಮುಂಭಾಗದಲ್ಲಿ ಶೃತಿ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ರಸ್ತೆಯ ಮೇಲೆ ಬಿದ್ದು ಹೊರಳಾಡುತ್ತಾ, “ನಮ್ಮ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಲಿ, ನಮಗೆ ನ್ಯಾಯ ಬೇಕು” ಎಂದು ಗೋಳಾಡಿದ್ದಾರೆ. ಹೆತ್ತವರ ಆಕ್ರಂದನ ಎಂತವರಿಗೂ ಕಣ್ಣೀರು ತರಿಸುತ್ತದೆ. ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನಷ್ಟು ಸ್ಪಷ್ಟವಾಗಲಿದೆ. ಆದರೆ ವರದಕ್ಷಿಣೆ ಎಂಬ ಪಿಡುಗಿಗೆ ಮತ್ತೊಂದು ಜೀವವನ್ನು ಬಲಿ ಪಡೆದಿರುವುದು ಮಾತ್ರ ದುರದೃಷ್ಟಕರ.‌‌‌

ಇದನ್ನೂ ಓದಿ: ವೈಯರ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಆತ್ಮಹತ್ಯೆ ಎಂದು ನಾಟಕವಾಡಿದ್ದ ಪ್ರಿಯಕರ!

ಮದುವೆ ಮಾಡಿಕೊಂಡಿರುವವರು ಒಟ್ಟಿಗೆ ಬದುಕಿ, ಇಲ್ಲವಾದರೆ ಬೇರೆಯಾಗಿ ಬದುಕಿ. ಇಲ್ಲಿ ಮುಖ್ಯವಾಗಿರುವುದು ಬದುಕುವುದೇ ವಿನಃ ಕೊಲ್ಲುವುದಲ್ಲ. ಜೊತೆಗೆ ಸಾಯುವುದು ಅಲ್ಲ. ಸದ್ಯ ಶೃತಿ ಕೇಸ್​​ನಲ್ಲಿ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು ತನಿಖೆ ಮುಂದುವರೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us