ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಟ್ರಾವೆಲ್ಸ್ ಉದ್ಯಮದಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೊಬ್ಬ ಕಳ್ಳತನಕ್ಕಿಳಿದು ಕೆಜಿಗಟ್ಟಲೇ ಚಿನ್ನ ಕಳವು ಮಾಡಿ ಈಗ ಪೊಲೀಸರ ಅತಿಥಯಾಗಿದ್ದಾನೆ. ಅಂದಹಾಗೆ, ಬಂಧಿತನಿಂದ ಬರೋಬ್ಬರಿ 1.25 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ. ಇದಲ್ಲದೆ, ರಾಜ್ಯದ ವಿವಿಧೆಡೆ ಕಳ್ಳತನ ಪ್ರಕರಣಗಳಲ್ಲಿ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೊರೊನಾದಲ್ಲಿ ಟ್ರಾವೆಲ್ಸ್ ಲಾಸ್ ಆಗಿದ್ದಕ್ಕೆ ಕಳ್ಳತನಕ್ಕಿಳಿತ ವ್ಯಕ್ತಿ! ಕೆಜಿಗಟ್ಟಲೇ ಚಿನ್ನ ದೋಚಿದ್ದ ಮಾಸ್ಕ್​ಮ್ಯಾನ್ ಅರೆಸ್ಟ್
ಸಾಂದರ್ಭಿಕ ಚಿತ್ರ

Updated on: Feb 09, 2026 | 1:11 PM

ಬೆಂಗಳೂರು, ಫೆಬ್ರವರಿ 9: ಕೊರೋನಾ ಸಮಯದಲ್ಲಿ ಟ್ರಾವೆಲ್ಸ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ವ್ಯಕ್ತಿಯೊಬ್ಬ ಬಳಿಕ ಕಳ್ಳತನಕ್ಕೆ ಇಳಿದು ‘ಮಾಸ್ಕ್ ಮ್ಯಾನ್’ ಆಗಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ (Bangalore) ಬೈಯಪ್ಪನಹಳ್ಳಿ ಪೊಲೀಸರು ರಾಜಾ ಎಂಬ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಸುಮಾರು 1.84 ಕೋಟಿ ರೂ. ಮೌಲ್ಯದ 1.25 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಭಾಗದಲ್ಲಿ ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದ ರಾಜಾ, ಕೊರೋನಾ ಸಮಯದಲ್ಲಿ ಭಾರೀ ನಷ್ಟ ಅನುಭವಿಸಿದ್ದ. ಜೀವನ ಸಾಗಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆ ಮಾಸ್ಕ್ ಧರಿಸಿ ಕಳ್ಳತನ ಮಾಡಲು ಆರಂಭಿಸಿದ್ದ.

ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಈತನ ವಿರುದ್ಧ ಈಗಾಗಲೇ 18 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಬಂಧನದ ಬಳಿಕ ಬೆಂಗಳೂರಿನ ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೈಯಪ್ಪನಹಳ್ಳಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಸಂಬಂಧಿಕರ ಮನೆಗೆ ಸ್ನೇಹಿತರನ್ನು ಕಳುಹಿಸಿ ದರೋಡೆ!

ಬೆಂಗಳೂರು ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂಧಿಕರ ಮನೆಗೆ ಸ್ನೇಹಿತರನ್ನು ಕಳುಹಿಸಿ ದರೋಡೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ. ಮೊಹಮ್ಮದ್ ಶಬಾಜ್ ಖಾನ್ ಹಾಗೂ ಸೂರಜ್ ಬಿ.ಎನ್ ಅಕ್ಬರ್ ಬಂಧಿತರಾಗಿದ್ದು, ಅಫ್ರೀದ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸಮೀರ್ ಎಂಬ ಸಂಬಂಧಿಕನಿಗೆ ಆಸ್ತಿ ಸಂಬಂಧ ಹಣ ಬಂದಿರುವ ಮಾಹಿತಿ ತಿಳಿದಿದ್ದ ಅಫ್ರೀದ್, ತನ್ನ ಸ್ನೇಹಿತರನ್ನು ಕಳುಹಿಸಿ ಮನೆಗೆ ನುಗ್ಗಿಸಿ ರಾಬರಿ ಮಾಡಿಸಿದ್ದಾನೆ. ಸಮೀರ್ ಪತ್ನಿ ಒಬ್ಬರೇ ಇದ್ದ ವೇಳೆ ಮಚ್ಚು ತೋರಿಸಿ ಬೆದರಿಸಿ ಚಿನ್ನ ಹಾಗೂ 4 ಲಕ್ಷ ನಗದು ಕದ್ದಿದ್ದಾರೆ. ಬಂಧಿತರಿಂದ 2.96 ಲಕ್ಷ ನಗದು ಮತ್ತು ಬಂಗಾರ ಸೇರಿ 7.4 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯಪುರದಲ್ಲಿ ಸರ ಕಳ್ಳರ ಹಾವಳಿ ಮುಂದುವರಿಕೆ

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಸರ ಕಳವು ಪ್ರಕರಣಗಳು ಹೆಚ್ಚಾಗಿವೆ. ಇಂಡಿ ಹಾಗೂ ಆಲಮೇಲ ಬಸ್ ನಿಲ್ದಾಣಗಳಲ್ಲಿ ಬೈಕ್‌ನಲ್ಲಿ ಬಂದ ಕಳ್ಳರು ಮಹಿಳೆಯರ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಬಸ್ ಏರುವ ವೇಳೆ ಟಾರ್ಗೆಟ್ ಮಾಡಿ ಹಾಡಹಗಲೇ ಕೃತ್ಯ ಎಸಗಿರುವುದು ಆತಂಕಕ್ಕೆ ಕಾರಣವಾಗಿದೆ. ಘಟನೆ ಇಂಡಿ ನಗರ ಮತ್ತು ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ವೃದ್ಧನನ್ನು ಅಡ್ಡಗಟ್ಟಿ ದರೋಡೆ

ಬೆಂಗಳೂರು ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧನೊಬ್ಬನನ್ನು ಅಡ್ಡಗಟ್ಟಿ ದರೋಡೆ ಮಾಡಿದ ಘಟನೆ ನಡೆದಿದೆ. ಅಗ್ರಹಾರ ದಾಸರಹಳ್ಳಿಯಿಂದ ಕೆ.ಆರ್.ಮಾರ್ಕೆಟ್‌ಗೆ ಹೂವು ಖರೀದಿಸಲು ನಡೆದುಕೊಂಡು ಹೋಗುತ್ತಿದ್ದ ಸಿದ್ದಮಾದು ಎಂಬವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಚಾಕು ತೋರಿಸಿ ಬೆದರಿಸಿದ್ದಾರೆ.

ಇದನ್ನೂ ಓದಿ: ಅಮ್ಮನ ಖಾಸಗಿ ಅಂಗ, ದೊಡ್ಡಮ್ಮನ ಬೆತ್ತಲೆ ಫೋಟೊ ತೆಗೆದು ಪ್ರಿಯಕರನಿಗೆ ಕಳುಹಿಸಿದ ಯುವತಿ!

ಹಣ ನೀಡಲು ಒಪ್ಪದಿದ್ದಾಗ ವೃದ್ಧನನ್ನು ಥಳಿಸಿ 10 ಸಾವಿರ ರೂ. ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಬೈಕ್ ಹಾಗೂ ದೃಶ್ಯಗಳ ಆಧಾರದಲ್ಲಿ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ