
ಬೆಂಗಳೂರು, ಆಗಸ್ಟ್ 31: ಸಿಲಿಕಾನ್ ಸಿಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಲೈಂಗಿಕ ಕಿರುಕುಳ (sexual harassment), ದೌರ್ಜನ್ಯ ಪ್ರಕರಣಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಈ ಬಾರಿ ಮಹಿಳೆಯರಿಗೆ ಇದ್ದುದರಲ್ಲಿ ಸುರಕ್ಷಿತ ಎನಿಸುವ ಪಿಜಿಯಲ್ಲಿ ಈ ಲೈಂಗಿಕ ಕಿರುಕುಳ ಘಟನೆ ನಡೆದಿದೆ. ಸುದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯ ಲೇಡೀಸ್ ಪಿಜಿಗೆ ನುಗ್ಗಿದ ಕಾಮುಕನೊಬ್ಬ, ಅಲ್ಲಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದ ಬೆಳಕಿಗೆ ಬಂದಿದೆ. ಇತ್ತೀಚೆಗೆ ಇದೇ ಸುದ್ದಗುಂಟೆಪಾಳ್ಯದಲ್ಲಿ ನಡುರಸ್ತೆಯಲ್ಲೇ ಮಧ್ಯರಾತ್ರಿ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ. ಈಗ ಪಿಜಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿ ಪರಾರಿಯಾಗಿದ್ದಾನೆ.
ಒಂಟಿಯಾಗಿ ರೂಮ್ ಮಾಡಿಕೊಂಡು ಇದ್ರೆ ಸೇಫ್ ಇರಲ್ಲಾ ಅನ್ನೊ ಕಾರಣಕ್ಕೆ ಹೆಣ್ಮಕ್ಕಳು ಲೇಡೀಸ್ ಪಿಜಿ ಸೇರುತ್ತಾರೆ. ಇಲ್ಲಿಯೂ ಅವರಿಗೆ ಸುರಕ್ಷಿತ ವಾತಾವರಣ ಇಲ್ಲವೆಂದರೆ? ಬಿಟಿಎಂ ಲೇಔಟ್ ಹಾಗು ಸುತ್ತಮುತ್ತ ಸಾಕಷ್ಟು ಲೇಡೀಸ್ ಪಿಜಿಗಳಿವೆ. ಇಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇರುತ್ತದೆ ಎಂಬುದು ಗಾಬರಿ ಮೂಡಿಸುವ ಸಂಗತಿ.
ಇದನ್ನೂ ಓದಿ: ಡಿಕೆಶಿಯ ತ್ಯಾಗ, ತಂತ್ರ, ದಾಳ ಲೆಕ್ಕಾಚಾರ! ಅರಸು ಕಾರ್ಯಕ್ರಮದಲ್ಲಿ ಹೊಸ ಮೆಸೇಜ್ ನೀಡಿದರಾ ಡಿಸಿಎಂ?
ಸುದ್ದಗುಂಟೆಪಾಳ್ಯದಲ್ಲಿ ಇರುವ ಲೇಡೀಸ್ ಪಿಜಿಯಲ್ಲಿ ಆಗಸ್ಟ್ 29, ಶುಕ್ರವಾರ ಮುಂಜಾನೆ 3 ಗಂಟೆಗೆ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವುದು ಗೊತ್ತಾಗಿದೆ. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿ ಕ್ಯಾಮರಾದಲ್ಲಿ ಕಾಮಾಂಧನ ನಡೆ ಸೆರೆಯಾಗಿದೆ.
ಮುಂಜಾನೆ ಮೂರು ಗಂಟೆಗೆ ಮಾಸ್ಕ್ ಧರಿಸಿದ್ದ ಆರೋಪಿಯು ಪಿಜಿಗೆ ಬಂದು ಯುವತಿ ಇದ್ದ ರೂಮಿನೊಳಗೆ ನುಗ್ಗಿದ್ದಾನೆ. ಯಾರೋ ವ್ಯಕ್ತಿ ಬಂದಿರುವುದು ಯುವತಿಗೆ ಗೊತ್ತಾದರೂ, ಅದು ತನ್ನ ರೂಮ್ಮೇಟ್ ಇರಬಹುದು ಎಂದು ಭಾವಿಸಿ ಯುವತಿ ಮಲಗೇ ಇದ್ದಾಳೆ. ಆದರೆ, ಆ ವ್ಯಕ್ತಿಯು ರೂಮಿನ ಎಲ್ಲಾ ಬಾಗಿಲುಗಳನ್ನು ಮುಚ್ಚಿ ಡೋರ್ಲಾಕ್ ಮಾಡಿದ್ದಾನೆ. ನಂತರ ಆತ ಯುವತಿ ಬಳಿ ಹೋಗಿ ಕೈ ಕಾಲು ಸವರಿದ್ದಾನೆ.
ಯುವತಿಗೆ ಎಚ್ಚರವಾಗಿ, ಈತನ ವರ್ತನೆಯನ್ನು ಪ್ರತಿರೋಧಿಸಿದ್ದಾಳೆ. ಚೀರಾಡುತ್ತಾ, ಆ ಅಪರಚಿತ ವ್ಯಕ್ತಿಗೆ ಯುವತಿ ಒದ್ದಿದ್ದಾಳೆ. ಇದಕ್ಕೆ ಬಗ್ಗದ ಆ ವ್ಯಕ್ತಿ ಮತ್ತಷ್ಟು ಕಿರುಕುಳ ಕೊಟ್ಟಿದ್ದಾನೆ, ಹಲ್ಲೆ ಎಸಗಿದ್ದಾನೆ. ನಂತರ, ಕಪ್ಬೋರ್ಡ್ನಲ್ಲಿದ್ದ 2,500 ರೂ ಹಣ ಎತ್ತುಕೊಂಡು ಅಲ್ಲಿಂದ ಹೋಗಿದ್ದಾನೆ.
ಇದನ್ನೂ ಓದಿ: ಶಿವಮೊಗ್ಗ: 9ನೇ ಕ್ಲಾಸ್ ವಿದ್ಯಾರ್ಥಿನಿಗೆ ಹೆರಿಗೆ! ಫೋಕ್ಸೋ ಕೇಸ್ ದಾಖಲು
ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾಳೆ. ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಅಲ್ಲದೆ ಅಪರಿಚಿತ ಆಸಾಮಿಯು ಸೆಕ್ಯೂರಿಟಿ ದಾಟಿ ಪಿಜಿ ಒಳಗೆ ಬಂದಿದ್ದು ಹೇಗೆ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಪ್ರಕರಣ ನಡೆದು ಎರಡು ದಿನವಾದರೂ ಆರೋಪಿ ಪತ್ತೆಯಾಗಿಲ್ಲ. ಪೊಲೀಸರು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಮಾಡಲು ಯತ್ನಿಸುತ್ತಿದ್ದಾರೆ.
ವರದಿ: ಪ್ರಜ್ವಲ್, ಟಿವಿ9 ಕನ್ನಡ, ಬೆಂಗಳೂರು
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ