ಮಧ್ಯಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್​​: ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರದ ಕೊರತೆ

ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಕರ್ನಾಟಕದಲ್ಲಿ 38 ಸಾವಿರ ಟನ್ ರಸಗೊಬ್ಬರ ಕೊರತೆ ಎದುರಾಗಿದ್ದು, ರಾಜ್ಯದಲ್ಲಿ ಇರುವ ಬೇಡಿಕೆಯಷ್ಟು ಗೊಬ್ಬರಕೇಂದ್ರ ಸರ್ಕಾರದಿಂದ ಪೂರೈಕೆಯಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಗಾರು ಬಿತ್ತನೆ ಸಮಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುವ ಆತಂಕ ಎದುರಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯ ವಿಧಾನಗಳನ್ನು ಅನುಸರಿಸುವಂತೆಯೂ ಸೂಚಿಸಿದ್ದಾರೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಎಫೆಕ್ಟ್​​: ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರದ ಕೊರತೆ
ಸಾಂದರ್ಭಿಕ ಚಿತ್ರ

Updated on: May 20, 2026 | 12:36 PM

ಬೆಂಗಳೂರು, ಮೇ 20: ಮಧ್ಯಪ್ರಾಚ್ಯದಲ್ಲಿನ ಯುದ್ಧ ಕೇವಲ ಇಂಧನಗಳ ಅಭಾವದ ಸಮಸ್ಯೆಯನ್ನು ಮಾತ್ರ ಸೃಷ್ಟಿಸಿಲ್ಲ. ಹತ್ತು ಹಲವು ತೊಂದರೆಗಳಿಗೆ ಕಾರಣವಾಗಿದ್ದು, ಅನ್ನದಾತರನ್ನೂ ಸಂಕಷ್ಟಕ್ಕೆ ತಳ್ಳಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಸಂಕಷ್ಟದ ಪರಿಣಾಮ ರಾಜ್ಯದಲ್ಲಿ 38 ಸಾವಿರ ಟನ್ ರಸಗೊಬ್ಬರ ಕೊರತೆ ಎದುರಾಗಿದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

14 ಸಾವಿರ ಟನ್ ಯೂರಿಯಾ ಕೊರತೆಯೂ ಇರುವುದಾಗಿ ತಿಳಿಸಿದ ಸಚಿವರು, ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯ ವಿಧಾನಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ರಸಗೊಬ್ಬರ ವಿತರಣೆಯಲ್ಲಿ ಅಕ್ರಮ, ದಾಸ್ತಾನು ಹಾಗೂ ಬೇರೆಡೆಗೆ ತಿರುಗಿಸುವಿಕೆ ತಪ್ಪಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿಗಾವಹಿಸಲು ಸೂಚಿಸಲಾಗಿದೆ. ಜೂನ್‌ನಲ್ಲಿ ಮುಂಗಾರು ಆರಂಭವಾಗುವ ನಿರೀಕ್ಷೆಯಿದ್ದು, ರಸಗೊಬ್ಬರ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಿದ್ಧತೆಗಳು ನಡೆಯುತ್ತಿವೆ. ನಿಜವಾದ ರೈತರಿಗೆ ಮಾತ್ರ ರಸಗೊಬ್ಬರ ವಿತರಣೆ ಆಗುವಂತೆ FRUITS ಐಡಿ ಆಧಾರಿತ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 3BHK ಫ್ಲ್ಯಾಟ್‌ಗೆ ಬರೋಬ್ಬರಿ 6.5 ಕೋಟಿ ರೂ! ಬೆಲೆ ಕೇಳಿ ಬೆಚ್ಚಿಬಿದ್ದ ನೆಟ್ಟಿಗರು

ಕೇಂದ್ರ ಸರ್ಕಾರ ರಾಜ್ಯಕ್ಕೆ ಒಟ್ಟು 30.05 ಲಕ್ಷ ಮೆಟ್ರಿಕ್ ಟನ್ ವಿವಿಧ ರೀತಿಯ ರಸಗೊಬ್ಬರ ಹಂಚಿಕೆ ಮಾಡಿದೆ. ಇದರಲ್ಲಿ 11.10 ಲಕ್ಷ ಮೆಟ್ರಿಕ್ ಟನ್ ಯೂರಿಯಾ, 4 ಲಕ್ಷ ಮೆಟ್ರಿಕ್ ಟನ್ ಡಿಎಪಿ, 2.12 ಲಕ್ಷ ಮೆಟ್ರಿಕ್ ಟನ್ ಎಂಒಪಿ, 11.88 ಲಕ್ಷ ಮೆಟ್ರಿಕ್ ಟನ್ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ 0.95 ಲಕ್ಷ ಮೆಟ್ರಿಕ್ ಟನ್ ಎಸ್‌ಎಸ್‌ಪಿ ಸೇರಿವೆ. ಆದರೆ ಈ ವರ್ಷ ಯೂರಿಯಾ ಆರಂಭಿಕ ದಾಸ್ತಾನು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹಳ ಕಡಿಮೆಯಾಗಿದೆ. 2023ರಲ್ಲಿ 3.91 ಲಕ್ಷ ಮೆಟ್ರಿಕ್ ಟನ್ ಹಾಗೂ 2024ರಲ್ಲಿ 5.41 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಆರಂಭಿಕ ದಾಸ್ತಾನು ಇದ್ದರೆ, ಈ ವರ್ಷ ಅದು ಕೇವಲ 2.80 ಲಕ್ಷ ಮೆಟ್ರಿಕ್ ಟನ್‌ಗೆ ಇಳಿದಿದೆ ಎಂದವರು ತಿಳಿಸಿದ್ದಾರೆ.

ಏಪ್ರಿಲ್ ತಿಂಗಳಲ್ಲಿರಾಜ್ಯವು 4.02 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇಟ್ಟಿದ್ದರೂ, ಕೇಂದ್ರದಿಂದ ಕೇವಲ 2.54 ಲಕ್ಷ ಮೆಟ್ರಿಕ್ ಟನ್ ಪೂರೈಕೆಯಾಗಿದೆ. ಇದರಿಂದ 1.48 ಲಕ್ಷ ಮೆಟ್ರಿಕ್ ಟನ್ ಕೊರತೆ ಉಂಟಾಗಿದೆ. ಇದರಲ್ಲಿ 0.38 ಲಕ್ಷ ಮೆಟ್ರಿಕ್ ಟನ್ ಡಿಎಪಿ ಹಾಗೂ 0.14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಕೊರತೆ ಸೇರಿದೆ. ಅದೇ ರೀತಿ ಮೇ ತಿಂಗಳಲ್ಲಿ 4.54 ಲಕ್ಷ ಮೆಟ್ರಿಕ್ ಟನ್ ಅಗತ್ಯವಿದ್ದರೂ, ಇದುವರೆಗೆ ಕೇಂದ್ರವು ಕೇವಲ 1.77 ಲಕ್ಷ ಮೆಟ್ರಿಕ್ ಟನ್ ಪೂರೈಕೆ ಮಾಡಿದೆ. ಇನ್ನೂ 2.77 ಲಕ್ಷ ಮೆಟ್ರಿಕ್ ಟನ್ ಬಾಕಿಯಿದೆ. ಇದರಲ್ಲಿ 0.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಹಾಗೂ 0.78 ಲಕ್ಷ ಮೆಟ್ರಿಕ್ ಟನ್ ಡಿಎಪಿ ಪೂರೈಕೆ ಆಗಬೇಕಿದೆ. ಈ ಪರಿಸ್ಥಿತಿ ಶೀಘ್ರದಲ್ಲೇ ಸುಧಾರಿಸದಿದ್ದರೆ ಬಿತ್ತನೆ ಸಮಯದ ಅವಧಿಯಲ್ಲಿ ರೈತರು ಗಂಭೀರ ಸಂಕಷ್ಟ ಎದುರಿಸಬೇಕಾಗಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us