
ಬೆಂಗಳೂರು, (ಜೂನ್ 24): ಬೆಂಗಳೂರಿನಲ್ಲಿ ಹುಡುಕಿದರೆ ನೂರು ಮೀಟರ್ ಕೂಡ ಸರಿಯಾಗಿ ಫುಟ್ ಪಾತ್ ಸಿಗಲ್ಲ. ಕೆಲ ಬೀದಿ ಬದಿ ವ್ಯಾಪಾರಿಗಳು ಸೇರಿ ಪಾದಚಾರಿ ಮಾರ್ಗಗಳನ್ನು ಕಬ್ಜಾ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಫುಟ್ ಪಾತ್ (footpath) ಅತಿಕ್ರಮಣ ತೆರವು ಮಾಡುವ ಸಂಬಂಧ ಬೆಂಗಳೂರು (Bengaluru) ನಗರಾಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) GBA ಅಧಿಕಾರಿಗಳ ಜೊತೆಗೆ ಇಂದು (ಜೂನ್ 24) ಮಹತ್ವದ ಸಭೆ ನಡೆಸಿದ್ದು, ಯಾರ್ಯಾರು ಫುಟ್ ಪಾತ್ ಅತಿಕ್ರಮಣ ಮಾಡಿಕೊಂಡವರು ತೆರವುಗೊಳಿಸಲು ಜುಲೈ 1 ಡೆಡ್ಲೈನ್ ನೀಡಿದ್ದಾರೆ. ಒಂದು ವೇಳೆ ಅಷ್ಟರೊಳಗೆ ಫುಟ್ ಪಾತ್ ತೆರವು ಮಾಡದಿದ್ದಲ್ಲಿ ಬುಲ್ಡೋಜರ್ ಅಸ್ತ್ರ ಪ್ರಯೋಗಿಸುವುದಾಗಿಯೂ ಎಚ್ಚರಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ ಜನ ಉಪಯೋಗಕ್ಕೆ ನೆರವಾಗುವಂತೆ ದುರಸ್ತಿ ಕಾಮಗಾರಿಗಳನ್ನು ನಡೆಸುವ ಕುರಿತ ಜಿಬಿಎ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಸಭೆಯಲ್ಲಿ GBA ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್ ಸೇರಿ ಎಲ್ಲಾ ನಗರ ಪಾಲಿಕೆಗಳ ಆಯುಕ್ತರು, ಟ್ರಾಫಿಕ್ ಕಮಿಷನರ್ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಇನ್ನು ಸಭೆಯಲ್ಲಿ ಒತ್ತುವರಿಯಾದ ಫುಟ್ ಪಾತ್ ತೆರುವುಗೊಳಿಸುವ ಬಗ್ಗೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನಿಡಿದ್ದಾರೆ. ಅಲ್ಲದೇ ಒಂದು ವೇಲೆ ತೊಂದರೆಗಳು ಬಂದರೆ ನಿಮ್ಮ ಬೆನ್ನಿಗೆ ನಿಲ್ಲುವೆ ಎಂದು ಕೃಷ್ಣಭೈರೇಗೌಡ ಅವರಿಗೆ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಫುಟ್ ಪಾತ್ ಅತಿಕ್ರಮಣ ಮಾಡುವವರ ವಿರುದ್ಧ ಸಮರ ಸಾರುವುದಾಗಿ ಕೃಷ್ಣ ಬೈರೇಗೌಡ ಘೋಷಣೆ ಮಾಡಿದ್ದಾರೆ. ಸುಗಮ ಫುಟ್ ಪಾತ್, ಗುಂಡಿಗಳ ಮುಚ್ಚುವಿಕೆ ಸೇರಿ ಮೂಲಭೂತ ಸೌಕರ್ಯ ಸುಧಾರಣೆಗೆ ಇವತ್ತಿನ ಮೀಟಿಂಗ್ ಪೂರಕವಾಗಿತ್ತು. ಜುಲೈ 1 ರಿಂದ GBA ಫುಟ್ ಪಾತ್ ಕಬ್ಜಾ ಮಾಡಿದವರ ವಿರುದ್ಧ ಅಭಿಯಾನ ಕೈಗೆತ್ತಿಕೊಳ್ಳಲಿದ್ದು, ಈ ಮೊದಲೇ ಫುಟ್ ಪಾತ್ ಒತ್ತುವರಿ ಮಾಡಿಕೊಂಡವರು ಬುದ್ಧಿ ಕಲಿಯುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.