ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಒಡೆತನದ ಶಾಲೆಗೆ (School) ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ಆರ್ ಆರ್ ನಗರದಲ್ಲಿರುವ ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಶಾಲೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. ನಿನ್ನೆ ಸಂಜೆ ವೇಳೆ ಇ-ಮೇಲ್ ಬಂದಿದ್ದು, ಇಂದು ಬೆಳಿಗ್ಗೆ ಶಾಲೆಗೆ ಬಂದಾಗ ಸಂಗತಿ ಬಯಲಾಗಿದೆ. ಪೊಲೀಸರು ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆಯಿಂದ ಮಕ್ಕಳನ್ನ ಶಿಫ್ಟ್ ಮಾಡಿ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸುತ್ತಿದೆ. ನ್ಯಾಶನಲ್ ಹಿಲ್ ವ್ಯೂವ್ ಸ್ಕೂಲ್ನ ಯೂನಿಟ್ 3ಗೆ ಮೇಲ್ ಬಂದಿದೆ. ಶಾಲಾ ಸಿಬ್ಬಂದಿ ಯೂನಿಟ್ 1, ಯೂನಿಟ್ 2ಗೆ ಒಂದೂವರೆ ಸಾವಿರ ಮಕ್ಕಳನ್ನ ಶಿಫ್ಟ್ ಮಾಡಿದ್ದಾರೆ.
ಶಾಲೆ ಎಂದಿನಂತೆ ಸಹಜ ಸ್ಥಿತಿಯಲ್ಲಿ ತರಗತಿ ನಡೆಯುತ್ತಿವೆ. ಶಾಲೆಗೆ ರಜೆ ನೀಡಿಲ್ಲ. ಬೆದರಿಕೆ ಬಂದ ಯೂನಿಟ್ ಅಷ್ಟೇ ಬದಲಾವಣೆ ಮಾಡಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಸದ್ಯ ಡಿಕೆಶಿ ಪುತ್ರಿ ಐಶ್ವರ್ಯಾ ಶಿವಕುಮಾರ್ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಇನ್ನು ಮಕ್ಕಳೆಲ್ಲರೂ ಸೇಫ್ ಆಗಿದ್ದಾರೆ. ಭಯ ಪಡಬೇಡಿ. ಒಂದು ಅರ್ಧ ಗಂಟೆ ಟೈಮ್ ಕೊಡಿ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ನೀವು ಈ ರೀತಿ ಭಯ ಪಡುತ್ತಿರುವುದರಿಂದ ಮ್ಯಾನೆಜ್ಮೆಂಟ್ಗೆ ಕಷ್ಟ ಆಗುತ್ತಿದೆ ಎಂದು ಡಿಕೆಶಿ ಪುತ್ರಿ ಪೋಷಕರಿಗೆ ಪರಿಸ್ಥಿತಿಯ ಬಗ್ಗೆ ಹೇಳುತ್ತಿದ್ದಾರೆ.
ಇದನ್ನೂ ಓದಿ: ಮೈಸೂರು ಹೊರವಲಯದ ಹಳ್ಳಿಗಳ ನಿವಾಸಿಗಳಿಗೆ ಕಂಟಕವಾಗಿದ್ದ ಚಿರತೆ ಸೆರೆ, ಬಂಡಿಪುರ ರಾಷ್ಟ್ರೀಯ ಉದ್ಯಾನವನಕ್ಕೆ ರವಾನೆ
ಪೋಷಕರು ಯಾವುದೇ ಆತಂಕಪಡುವುದು ಬೇಡ: ಡಿ.ಕೆ.ಶಿವಕುಮಾರ್
ಈ ಕುರಿತಾಗಿ ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದು, ನಮ್ಮ ಶಾಲೆಯಲ್ಲಿ ಬಾಂಬ್ ಇಟ್ಟಿರುವ ಬಗ್ಗೆ ಸಂದೇಶ ಬಂದಿತ್ತು. ಹುಚ್ಚ ವೆಂಕಟ್ ಎಂಬ ಹೆಸರಿನಲ್ಲಿ ಇ-ಮೇಲ್ ಬಂದಿದೆ. ಸಂದೇಶ ನೋಡಿದ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಪೋಷಕರು ಯಾವುದೇ ಆತಂಕಪಡುವುದು ಬೇಡ. ಸ್ಕೂಲ್ ಕ್ಯಾಂಪಸ್ನಲ್ಲಿ ಇರುವವರನ್ನು ಶಿಫ್ಟ್ ಮಾಡಿದೆವು. 70% ತಪಾಸಣೆ ಮಾಡಿದ್ದಾರೆ ಇನ್ನೂ ತಪಾಸಣೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಕರೆ ಮಾಹಿತಿ ಸಿಕ್ಕಿದೆ. ಅದರ ವಿಚಾರವಾಗಿ ಪೊಲೀಸರು ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಾರೆ ಎಂದು ಹೇಳಿದರು.
ಪೋಷಕ ಮಂಜುನಾಥ್ ಮಾತನಾಡಿ, ಬೆಳಗ್ಗೆ ನಮಗೆ ಮಾಹಿತಿ ಬಂತು. ಎಲ್ಲಾ ಮಕ್ಕಳನ್ನ ಬೇರೆ ಕಡೆ ಶಿಫ್ಟ್ ಮಾಡಿದಾರೆ ಅಂತಾ ಹೇಳಿದ್ದಾರೆ. ಸುಮಾರು 4,000 ಮಕ್ಕಳಿದ್ದಾರೆ. ಎಲ್ಲರೂ ಸೇಫ್ ಇದ್ದಾರೆ ಅಂತಾ ಮ್ಯಾನೇಜ್ಮೆಂಟ್ ಕಡೆಯವರು ಹೇಳಿದ್ದಾರೆ ಎಂದು ತಿಳಿಸಿದರು.
ಡಿಕೆಶಿ ಮಾಲೀಕತ್ವದ ಶಾಲೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ
ಡಿಕೆಶಿ ಮಾಲೀಕತ್ವದ ಶಾಲೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ನ್ಯಾಷನಲ್ ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್ನಲ್ಲಿ ತಪಾಸಣೆ ಅಂತ್ಯವಾಗಿದೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ಶಾಲೆಯಲ್ಲಿ ತಪಾಸಣೆ ಮಾಡಿದ್ದು, ತಪಾಸಣೆ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಟಿವಿ9ಗೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರ್ಗಿ ಹೇಳಿಕೆ ನೀಡಿದ್ದು, ಇಂದು ಬೆಳಗ್ಗೆ ಇ-ಮೇಲ್ ಬಂದಿರುವ ಬಗ್ಗೆ ಮಾಹಿತಿ ಬಂದಿದೆ. ಕೂಡಲೇ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿ ಪರಿಶೀಲಿಸಿದೆ. ಮಕ್ಕಳನ್ನು ಸೇಫ್ ಯೂನಿಟ್ಗಳಿಗೆ ಶಿಫ್ಟ್ ಮಾಡಲಾಗಿದೆ. ಪರಿಶೀಲನೆ ವೇಳೆ ಯಾವುದೇ ಶಂಕಿತ ವಸ್ತುಗಳು ಪತ್ತೆಯಾಗಿಲ್ಲ. ಬಾಂಬ್ ಬೆದರಿಕೆ ಬಗ್ಗೆ ಕೇಸ್ ದಾಖಲು ಮಾಡಿಕೊಳ್ಳಲಾಗುವುದು. ಯಾರು ಮಾಡಿದ್ದಾರೆ, ಕಾರಣ ಏನು ಎಂಬ ಬಗ್ಗೆ ತನಿಖೆ ಮಾಡಲಾಗುವುದು ಎಂದು ಹೇಳಿದರು.
Published On - 10:38 am, Mon, 18 July 22