ಕಬ್ಬು ಬೆಳೆಗಾರರಿಗೆ ಬಾಕಿ ಹಣ ಕೊಡಿಸಲು ಬದ್ಧ: ಸಕ್ಕರೆ ಸಚಿವ ಶಂಕರ ಮುನೇನಕೊಪ್ಪ
ಕಬ್ಬು ಪೂರೈಸಿರುವ ಶೇ 99ರಷ್ಟು ಬೆಳಗಾರರಿಗೆ ಈಗಾಗಲೇ ಸಕ್ಕರೆ ಕಾರ್ಖಾನೆಗಳಿಂದ ಹಣ ಪಾವತಿ ಮಾಡಲಾಗಿದೆ ಎಂದು ಸಕ್ಕರೆ ಸಚಿವ ಶಂಕರ್ ಮುನೇನಕೊಪ್ಪ ಹೇಳಿದರು.
ಬೆಂಗಳೂರು: ಕಬ್ಬು ಬೆಳೆಗಾರರಿಗೆ (Sugarcane Growers) ಬಾಕಿ ಇರುವ ₹ 381 ಕೋಟಿ ಹಣವನ್ನು ಶೀಘ್ರ ಕೊಡಿಸುತ್ತೇನೆ ಎಂದು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಕಬ್ಬು ಪೂರೈಸಿರುವ ಶೇ 99ರಷ್ಟು ಬೆಳೆಗಾರರಿಗೆ ಈಗಾಗಲೇ ಸಕ್ಕರೆ ಕಾರ್ಖಾನೆ ಮಾಲೀಕರು ಹಣ ಪಾವತಿ ಮಾಡಿದ್ದಾರೆ. ಈವರೆಗೆ ಸುಮಾರು 7 ಸಾವಿರ ಕೋಟಿ ಹಣ ಪಾವತಿಯಾಗಿದೆ. ಸರ್ಕಾರವು ರೈತರಿಗೆ ದುಡ್ಡು ಕೊಡಿಸಿಲ್ಲ ಎನ್ನುವ ಕೂಗು ಬಂದಿಲ್ಲ. ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿ ಆಗದೆ ಇದ್ದಾಗ ಮಾಧ್ಯಮಗಳ ಮೂಲಕ ಮಾನ ಹರಾಜು ಆಗಿದೆ. ಅದರಿಂದಾಗಿಯೇ ಸಕ್ಕರೆ ಫ್ಯಾಕ್ಟರಿ ಮಾಲೀಕರು ಬಾಕಿ ಹಣ ಪಾವತಿ ಮಾಡಿದ್ದಾರೆ. ಮೈಶುಗರ್, ಪಾಂಡವುರ ಸಕ್ಕರೆ ಕಾರ್ಖಾನೆಗೂ ಹಣ ನೀಡುತ್ತೇವೆ. ಬಾಗಲಕೋಟೆ ರನ್ನ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪೆಟ್ರೋಲ್ಗೆ ಇಥೆನಾಲ್ ಮಿಶ್ರಣ ಮಾಡಲು ಅವಕಾಶ ಕೊಡುತ್ತೇವೆ ಎಂದಿದ್ದಾರೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಗೆ ಲಾಭವಾಗುವ ನಿರೀಕ್ಷೆಯಿದೆ ಎಂದರು.
ವಿಕಾಸಸೌಧದಲ್ಲಿ ಇತ್ತೀಚೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿದ್ದ ಶಂಕರ ಮುನೇನಕೊಪ್ಪ, ಈ ವರ್ಷ ಇನ್ನೂ ಕಬ್ಬು ಕಟಾವು ನಡೆಯುತ್ತಿದೆ. ರಾಜ್ಯದಲ್ಲಿ ಈವರೆಗೆ 621.93 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ರೈತರಿಗೆ ₹ 19,626 ಕೋಟಿ ಪಾವತಿಸಬೇಕಿದೆ. ಈ ಪೈಕಿ ₹ 18,224 ಪಾವತಿಯಾಗಿದ್ದು, ಬಾಕಿ ಶೇ 7ರಷ್ಟು, ಅಂದರೆ ₹ 1435 ಕೋಟಿ ಬಾಕಿ ಶೀಘ್ರ ಕೊಡಿಸಲಾಗುವುದು ಎಂದಿದ್ದರು. ಇಂದು ಅವರು ಈ ಮೊತ್ತವನ್ನೂ ಪಾವತಿಸಲಾಗಿದೆ ಎಂದು ಹೇಳಿದರು.
ರಾಜ್ಯದ 68 ಘಟಕಗಳಿಗೆ ಕೇಂದ್ರದಿಂದ ಎಥೆನಾಲ್ ಉತ್ಪಾದನೆಗೆ ಅನುಮತಿ ಸಿಕ್ಕಿದೆ. 32 ಸಕ್ಕರೆ ಕಾರ್ಖಾನೆಗಳು ಈಗಾಗಲೇ ಎಥೆನಾಲ್ ಉತ್ಪಾದನೆ ಆರಂಭಿಸಿವೆ. ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಿರ್ವಹಿಸಲಿದೆ. ಇದಕ್ಕಾಗಿ ₹ 50 ಕೋಟಿ ಅನುದಾನ ನೀಡಲಾಗಿದೆ. ಬಾಗಲಕೋಟೆಯ ರನ್ನ ಸಕ್ಕರೆ ಕಾರ್ಖಾನೆ ನಿರ್ವಹಿಸಲು ಖಾಸಗಿಯವರು ಮುಂದೆ ಬಂದಿದ್ದಾರೆ. ಮೈಸೂರಿನ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದರು.
ಎಥೆನಾಲ್ ಉತ್ಪಾದನೆಯಿಂದ ಸಿಗುವ ಹಣದಲ್ಲಿ ರೈತರಿಗೂ ಪಾಲು ನೀಡುವ ಬಗ್ಗೆ ಸಕ್ಕರೆ ಮಂಡಳಿ ಸಭೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದ್ದರು. ಜಿಎಸ್ಟಿಯಿಂದಾಗಿ ಸಕ್ಕರೆ ಇಲಾಖೆಗೆ ಹೆಚ್ಚಿನ ಆದಾಯ ಬರುತ್ತಿಲ್ಲ ಎಂದು ಹೇಳಿದರು.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Thu, 9 June 22