ಮುಡಾ ಹಗರಣದ ನೋಟಿಸ್: ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ವಾಟಾಳ್ ನಾಗರಾಜ್ ಹೇಳಿದ್ದಿಷ್ಟು
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಅದಕ್ಕೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಲಾಗಿದೆ. ಈ ಕುರಿತು ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್, ‘ರಾಜ್ಯಪಾಲರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ನೋಟಿಸ್ ಕೊಟ್ಟಿದ್ದು ಅಕ್ಷಮ್ಯ ಅಪರಾಧ ಎಂದಿದ್ದಾರೆ.
ಬೆಂಗಳೂರು, ಆ.01: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಪಾತ್ರವಿದೆ ಎಂದು ಕೇಳಿಬಂದ ಹಿನ್ನಲೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj), ‘ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜಕೀಯ ಮಾಡಲ್ಲ ಅಂದುಕೊಂಡಿದ್ದೆ. ನಾನು ರಾಜ್ಯಪಾಲರ ಬಗ್ಗೆ ಪ್ರಶಂಸೆ ಮಾಡಿದ್ದೆ. ಅಂದು ರಾಜ್ಯಪಾಲರ ಭಾಷಣ ಕನ್ನಡದಲ್ಲೇ ಇರಲಿ ಎಂದು ಮಾತನಾಡಿದ್ದೆ. ನಮ್ಮ ಮನವಿಯನ್ನು ರಾಜ್ಯಪಾಲರು ಪ್ರೀತಿಯಿಂದ ಸ್ವಾಗತಿಸಿದ್ದರು. ಮಹಾರಾಷ್ಟ್ರ, ತಮಿಳುನಾಡಿನಲ್ಲಿ ರಾಜ್ಯಪಾಲರ ಗಲಾಟೆ ನಡೀತಿತ್ತು. ಆದ್ರೆ, ಕರ್ನಾಟಕದಲ್ಲಿ ಶಾಂತವಾಗಿತ್ತು. ಈಗ ಇದ್ದಕ್ಕಿದ್ದಂತೆ ರಾಜ್ಯಪಾಲರು ಇವತ್ತು ರಾಜಕೀಯ ಪಾಲು ಆಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದು ರಾಜ್ಯಪಾಲರ ಸ್ವಂತ ಅನಿಸಿಕೆ ಅಲ್ಲ, ರಾಜಕೀಯ ಅನಿಸಿಕೆ
ನಮ್ಮಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ. ಮತದಾರನ ಮೂಲಕ ಸರ್ಕಾರದ ಅಳಿವು ಉಳಿವು ಇರುತ್ತದೆ. ನೀವು ನೋಟಿಸ್ ಕೊಟ್ಟಿದ್ದು ಪ್ರಜಾಪ್ರಭುತ್ವದ ಅಪರಾಧ. ಇದು ರಾಜ್ಯಪಾಲರ ಸ್ವಂತ ಅನಿಸಿಕೆ ಅಲ್ಲ, ರಾಜಕೀಯ ಅನಿಸಿಕೆ. ಇದು ನಿಜವಾಗಿಯೂ ದಂಡಿನ ಆಳ್ವಿಕೆ ಆಗುತ್ತದೆ. ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರು. ಸಿದ್ದರಾಮಯ್ಯ ನಂತರ ಯಾರು?. ವಿಶೇಷ ಅಧಿವೇಶನ ಕರೆದು ಮುಡಾ ಹಗರಣದ ಚರ್ಚೆ ಮಾಡಿ ಎಂದು ಹೇಳಬೇಕಿತ್ತು. ಆದ್ರೆ, ಇದು ಒಂದು ರೀತಿ ಪಿತೂರಿ ರಾಜಕಾರಣ, ನೀವು ಸರ್ಕಾರವನ್ನ ಅಲುಗಾಡಿಸಬಾರದು. ಇದ್ರಿಂದ ಆಡಳಿತ ಮಂಕಾಗಲಿದೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಸಂಕಷ್ಟ ತಂದಿಟ್ಟ ಮುಡಾ ಹಗರಣ: ಮತ್ತೆ ವರದಿ ಕೇಳಿದ ರಾಜ್ಯಪಾಲ
ಹೀಗಾಗಿ ರಾಜ್ಯಪಾಲರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ನೋಟಿಸ್ ಕೊಟ್ಟಿದ್ದು ಅಕ್ಷಮ್ಯ ಅಪರಾಧ. ಅವರಿಗೆ ಬೇರೆ ಕಡೆಯಿಂದ ಒತ್ತಡ ಇರಬಹುದು. ಆದರೆ ಇದು ಆಗಬಾರದು. ವಿಧಾನಮಂಡಲ ಅಧಿವೇಶನದ ವೇಳೆ ವಿಪಕ್ಷ ಮಲಗಿದ್ದು, ಪ್ರತಿಭಟಿಸಿದ್ದು ಸರಿಯಲ್ಲ. ಸದನದಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡಿದ್ದರಿಂದ ನೋವಾಗುತ್ತದೆ ಎನ್ನುವ ಮೂಲಕ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ವಾಟಾಳ್ ನಾಗರಾಜ್ ನಿಂತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ