ಆನೇಕಲ್: ನಿಗೂಢ ಸ್ಫೋಟಕ್ಕೆ ಛಿದ್ರಗೊಂಡ ಕಾಂಕ್ರೀಟ್ ರಸ್ತೆ, ಬೆಂಕಿ ಕಂಡು ಬೆಚ್ಚಿದ ಬನಹಳ್ಳಿ ನಿವಾಸಿಗಳು

ಆನೇಕಲ್ ತಾಲ್ಲೂಕಿನ ಚಂದಾಪುರ ಸಮೀಪದ ಬನಹಳ್ಳಿ ಬಳಿ ರಸ್ತೆಯಲ್ಲಿ ಇದ್ದಕ್ಕಿದ್ದಂತೆ ನಿಗೂಢವಾಗಿ ಸ್ಫೋಟ ಸಂಭವಿಸಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಸ್ಫೋಟದ ತೀವ್ರತೆಗೆ ಸಿಮೆಂಟ್, ಕಾಂಕ್ರೀಟ್ ಮತ್ತು ಜಲ್ಲಿ ಕಲ್ಲುಗಳು ಮಾರು ದೂರಕ್ಕೆ ಎಸೆಯಲ್ಪಟ್ಟಿದ್ದು, ಸ್ಥಳೀಯ ನಿವಾಸಿಗಳು ಆಘಾತಕ್ಕೆ ಒಳಗಾದರು. ಹಾಗಾದರೆ ಅಲ್ಲಿ ನಿಜಕ್ಕೂ ನಡೆದಿದ್ದೇನು? ತಿಳಿಯಲು ಮುಂದೆ ಓದಿ.

ಆನೇಕಲ್: ನಿಗೂಢ ಸ್ಫೋಟಕ್ಕೆ ಛಿದ್ರಗೊಂಡ ಕಾಂಕ್ರೀಟ್ ರಸ್ತೆ, ಬೆಂಕಿ ಕಂಡು ಬೆಚ್ಚಿದ ಬನಹಳ್ಳಿ ನಿವಾಸಿಗಳು
ಸ್ಫೋಟದ ತೀವ್ರತೆಗೆ ರಸ್ತೆಯ ಜಲ್ಲಿಕಲ್ಲುಗಳು ಕಿತ್ತುಬಂದಿರುವುದು
Updated By: Ganapathi Sharma

Updated on: May 06, 2025 | 9:17 AM

ಆನೇಕಲ್, ಮೇ 6: ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಚಂದಾಪುರ ಸಮೀಪದ ಬನಹಳ್ಳಿ ರಾಘವೇಂದ್ರ ಕಾಲೋನಿ ಗ್ರಾಮದಲ್ಲಿ ಸೋಮವಾರ ಮಟಮಟ ಮಧ್ಯಾಹ್ನ ಕಾಂಕ್ರೀಟ್ ರಸ್ತೆ ಭಾರಿ ಶಬ್ದದೊಂದಿಗೆ ನಿಗೂಢವಾಗಿ ಸ್ಫೋಟಗೊಂಡಿದೆ. ರಸ್ತೆಯ ಸಿಮೆಂಟ್, ಕಾಂಕ್ರೀಟ್ ಮತ್ತು ಜಲ್ಲಿ ಕಲ್ಲುಗಳು ಕಿತ್ತು ಬಂದಿದ್ದು, ಸುಮಾರು ನೂರು ಮೀಟರ್ ಎಸೆಯಲ್ಪಟ್ಟಿವೆ. ಸ್ಫೋಟದ ಜೊತೆ ಬೆಂಕಿ ಕಿಡಿ ಕೂಡ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಮನೆಯ ಹೊರಗಡೆ ಕುಳಿತ್ತಿದ್ದರು ಆತಂಕದಿಂದ ಮನೆಗಳ ಒಳಗೆ ಓಡಿ ಹೋಗಿದ್ದಾರೆ. ಸ್ಫೋಟಕ್ಕೂ ಕೆಲ ಕ್ಷಣದ ಮೊದಲು ವಾಟರ್ ಟ್ಯಾಂಕರ್ ಒಂದು ಆ ರಸ್ತೆಯಲ್ಲಿ ಹಾದು ಹೋಗಿತ್ತು. ಟ್ಯಾಂಕರ್ ಮುಂದಕ್ಕೆ ಸಾಗುತ್ತಿದ್ದಂತೆಯೇ ಭಾರಿ ಶಬ್ದ ಮತ್ತು ಬೆಂಕಿ ಜೊತೆ ರಸ್ತೆ ಸ್ಫೋಟಗೊಂಡಿತು.

ಈ ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಸಂಚರಿಸುತ್ತಾರೆ. ರಸ್ತೆ ಮೇಲೆ ಹಾದುಹೋಗಿರುವ ಹೈವೋಲ್ಟೆಜ್ ವಿದ್ಯುತ್ ತಂತಿ ತೀರಾ ಕೆಳಗೆ ಜೋತು ಬಿದ್ದಿದೆ. ಅದರಿಂದಲೇ ಇಂತಹ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೈವೋಲ್ಟೇಜ್ ವಿದ್ಯುತ್ ತಂತಿ ಕಾರಣವಂತೆ!

ನಿಗೂಢ ಸ್ಫೋಟಕ್ಕೆ ರಸ್ತೆ ಮೇಲೆ ಹಾದು ಹೋಗಿರುವ 220 ಕೆವಿ ಹೈವೋಲ್ಟೆಜ್ ವಿದ್ಯುತ್ ತಂತಿ ಕಾರಣ ಎಂದು ಚಂದಾಪುರ ಕೆಪಿಟಿಸಿಎಲ್ ಜೆಇ ಮಹೇಶ್ ಒಪ್ಪಿಕೊಂಡಿದ್ದಾರೆ. 220 ಕೆವಿ ವಿದ್ಯುತ್ ತಂತಿ ತೀಆ ಕೆಳಗೆ ಜೋತು ಬಿದ್ದಿದ್ದು, ಅದರ ಕೆಳಗೆ ಎತ್ತರದ ವಾಹನ ಹಾದು ಹೋದರೆ ಅರ್ಥಿಂಗ್ ಜೋನ್​​ಗೆ ಫಾಲ್ಟ್ ಕರೆಂಟ್ ನುಗ್ಗಿ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಸ್ಪೋಟ ಸಂಭವಿಸುತ್ತಿದ್ದಂತೆಯೇ ಲೈನ್ ಟ್ರಿಪ್ ಆಗಿದೆ. ಹಾಗಾಗಿ ಸ್ಫೋಟದಿಂದ ಯಾರಿಗೂ ತೊಂದರೆ ಆಗಿಲ್ಲ ಎಂದು ಮಹೇಶ್ ಹೇಳಿದ್ದಾರೆ.

ಇದನ್ನೂ ಓದಿ
ಹುಬ್ಬಳ್ಳಿಯಲ್ಲಿ 19 ಮೈದಾನದ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಕ್ರೀಡಾ ಸಂಕೀರ್ಣ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ಜಿಲೇಬಿಯಲ್ಲಿ ಕೃತಕ ಬಣ್ಣ ಶಂಕೆ: ಮಾದರಿ ಸಂಗ್ರಹಕ್ಕೆ ಮುಂದಾದ ಆಹಾರ ಇಲಾಖೆ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ

ದುರಸ್ತಿ ಮಾಡುವ ಭರವಸೆ ನೀಡಿದ ಕೆಪಿಟಿಸಿಎಲ್

ಯಾರಂಡಹಳ್ಳಿಯಿಂದ ತಮಿಳುನಾಡಿಗೆ ವಿದ್ಯುತ್ ಪೂರೈಕೆ ಮಾಡುವ ಹೈವೋಲ್ಟೇಜ್ ಲೈನ್ ಇದಾಗಿದೆ. ತುಂಬಾ ಹಳೆಯ ಲೈನ್ ಆಗಿದ್ದರಿಂದ ಬಿಸಿಲಿಗೆ ಜೋತು ಬೀಳುತ್ತಿದೆ. ಲೈನ್ ದುರಸ್ತಿ ಬಗ್ಗೆ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೋತು ಬಿದ್ದಿರುವ ಲೈನ್ ಅನ್ನು ಸದ್ಯ ತಾತ್ಕಾಲಿಕವಾಗಿ ಸರಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮನೆ ಆವರಣದಲ್ಲಿ ಗಾಂಜಾ ಗಿಡ: ಬೆಂಗಳೂರಿನ ಹಿರಿಯ ನಾಗರಿಕನಿಗೆ ಹೈಕೋರ್ಟ್ ರಿಲೀಫ್

ಒಟ್ಟಿನಲ್ಲಿ, ಬನಹಳ್ಳಿ ಜನರ ಅದೃಷ್ಟ ಚೆನ್ನಾಗಿತ್ತು. ಜನ ಸದಾ ಸಂಚರಿಸುವ ರಸ್ತೆಯಲ್ಲಿ ಅವಘಡ ಸಂಭವಿಸಿದರೂ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ, ಜನರ ನೆತ್ತಿ ಮೇಲೆ ಯಮದೂತನಂತೆ 220 ಕೆವಿ ಹೈವೋಲ್ಟೆಜ್ ವಿದ್ಯುತ್ ಲೈನ್ ನೇತಾಡುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವ ಕೆಪಿಟಿಸಿಎಲ್ ಅಧಿಕಾರಿಗಳು ಇನ್ನಾದರೂ ಸಮಸ್ಯೆ ಪರಿಹರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ