ಮೈಸೂರು ವಿವಿಯಲ್ಲಿ ವಿದ್ಯಾರ್ಥಿನಿಯರ ಸಂಚಾರಕ್ಕೆ ನಿರ್ಬಂಧ; ಸುತ್ತೋಲೆ ವಾಪಸ್ ಪಡೆಯಲು ಸಚಿವ ಅಶ್ವತ್ಥನಾರಾಯಣ ಆದೇಶ
ಲಭ್ಯವಿರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಭದ್ರತೆ ಮತ್ತು ನಿಗಾ ಹೆಚ್ಚಿಸುವ ನಿಟ್ಟಿನಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುತ್ತೇನೆ. ಸಂಬಂಧಿತ ಇಲಾಖೆ ಹಾಗೂ ಎಲ್ಲಾ ಕುಲಪತಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಬೆಂಗಳೂರು: ಸಾಮೂಹಿಕ ಅತ್ಯಾಚಾರ ಪ್ರಕರಣ ಮೈಸೂರಿನಲ್ಲಿ ನಡೆದ ಹಿನ್ನೆಲೆಯಲ್ಲಿ ಸಂಜೆ 6.30ರ ನಂತರ ವಿವಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯರ ಓಡಾಟವನ್ನು ನಿಷೇಧಿಸಿ ಮೈಸೂರು ವಿಶ್ವವಿದ್ಯಾಲಯ ಹೊರಡಿಸಿದ್ದ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈಗಾಗಲೇ ಈ ಸುತ್ತೋಲೆಯನ್ನು ವಾಪಸ್ ಪಡೆಯುವಂತೆ ಕುಲಪತಿ ಪ್ರೊ.ಹೇಮಂತ ಕುಮಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳು ಬಹಳ ವಿಶಾಲವಾಗಿರುತ್ತವೆ ಎಂಬುವುದೇನೋ ನಿಜ. ಹಾಗಂತ ವಿದ್ಯಾರ್ಥಿನಿಯರು ಓಡಾದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಅದರ ಬದಲಿಗೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾದ ವಿವಿ ಕ್ಯಾಂಪಸ್ಗಳನ್ನು ರೂಪಿಸಬೇಕೆಂದು ಎಲ್ಲಾ ವಿವಿ ಕುಲಪತಿಗಳಿಗೂ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.
ಅತ್ಯಾಚಾರ ಘಟನೆ ಖಂಡನೀಯ. ಈ ಘಟನೆ ನಡೆಯಿತು ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಬೇಡ. ಅವರ ಸ್ವಾತಂತ್ರ್ಯಕ್ಕೆ ಚ್ಯುತಿಯಾಗದಂತೆ ಅವರಿಗೆ ರಕ್ಷಣೆ ನೀಡುವ ಜವಾಬ್ದಾರಿ ನಮ್ಮದು. ವಿಶ್ವವಿದ್ಯಾಲಯಗಳ ಕ್ಯಾಂಪಸ್ಗಳಲ್ಲಿ ಹೆಚ್ಚು ನಿಗಾ ವಹಿಸುವ ಕೆಲಸ ಆಗಬೇಕು. ಈಗಾಗಲೇ ಆ ಬಗ್ಗೆ ಸರಕಾರದಿಂದ ಕ್ರಮ ವಹಿಸಲಾಗಿದೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ವ್ಯಾಪಕ ನಿಗಾ ಇರಿಸುವುದರ ಜತೆಗೆ, ಭದ್ರತಾ ಸಿಬ್ಬಂದಿಯಿಂದ ಪೆಟ್ರೋಲಿಂಗ್ ಮಾಡಬೇಕು. ಅಗತ್ಯವಾದ ಎಲ್ಲ ಕಡೆಗಳಲ್ಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಕಾನೂನು-ಸುವವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ದಿಕ್ಕಿನಲ್ಲೂ ತೀವ್ರ ನಿಗಾ ಇಟ್ಟಿರಬೇಕು. ಈ ಬಗ್ಗೆ ಎಲ್ಲ ಕುಲಪತಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಕುಲಪತಿಗಳ ಜತೆ ಚರ್ಚೆ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಒಟ್ಟು 32ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿದ್ದು, ಎಲ್ಲಡೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗಾಗಲೇ ಎಲ್ಲಾ ಕಡೆ ಭದ್ರತಾ ವ್ಯವಸ್ಥೆ ಉತ್ತಮವಾಗಿದೆ ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಲಭ್ಯವಿರುವ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಭದ್ರತೆ ಮತ್ತು ನಿಗಾ ಹೆಚ್ಚಿಸುವ ನಿಟ್ಟಿನಲ್ಲಿ ಏನೇನು ಮಾಡಬಹುದು ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯುತ್ತೇನೆ. ಸಂಬಂಧಿತ ಇಲಾಖೆ ಹಾಗೂ ಎಲ್ಲಾ ಕುಲಪತಿಗಳ ಜತೆ ಚರ್ಚೆ ನಡೆಸುತ್ತೇನೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆಗಳು. ಪಾತಕಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.
ಮೈಸೂರು: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ; ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು
Published On - 1:12 pm, Sat, 28 August 21