ಅಕ್ರಮ ನೇಮಕಾತಿ ವಿರುದ್ಧ ರೈಲ್ವೆ ಸಚಿವರು-ಸಿಎಂಗೆ ದೂರು: ಆದರೆ ನಮ್ಮ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಹೇಳಿದ್ದೇನು?
ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಅವರು ಸುಮಾರು 500 ಉದ್ಯೋಗಿಗಳನ್ನು ಅಕ್ರಮವಾಗಿ ನೇಮಕ ಮಾಡಿದ್ದಾರೆ. ಸಂದರ್ಶನವಿಲ್ಲದೆ ನೇಮಕಾತಿ ಮಾಡಿದ್ದಾರೆ ಎಂದು ಸೂರ್ಯ ನಾರಾಯಣ ಮೂರ್ತಿ ಆರೋಪಿಸಿದ್ದಾರೆ.
ಬೆಂಗಳೂರು: ಮೆಟ್ರೋ ಎಂಡಿ(Anjum Parvez) ವಿರುದ್ಧ ಬಿಎಂಆರ್ಸಿಎಲ್(BMRCL) ಎಂಪ್ಲಾಯಿಸ್ ಯೂನಿಯನ್ ಕಡೆಯಿಂದ ರೈಲ್ವೆ ಸಚಿವರು, ಕೇಂದ್ರ ಅರ್ಬನ್ ಡೆವಲಪ್ಮೆಂಟ್ ಮಿನಿಸ್ಟರ್ ಹಾಗೂ ಸಿಎಂಗೆ ದೂರು ನೀಡಲಾಗಿದೆ. ಮೆಟ್ರೋ ಎಂಪ್ಲಾಯಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೂರ್ಯ ನಾರಾಯಣ ಮೂರ್ತಿ ಎಂಬುವವರು ಮೆಟ್ರೋ ಎಂಡಿ ಅಂಜುಂ ಪರ್ವೇಜ್ ವಿರುದ್ಧ ಆರೋಪ ಮಾಡಿ ದೂರು ನೀಡಿದ್ದಾರೆ.
ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಅವರು ಸುಮಾರು 500 ಉದ್ಯೋಗಿಗಳನ್ನು ಅಕ್ರಮವಾಗಿ ನೇಮಕ ಮಾಡಿದ್ದಾರೆ. ಯಾವುದೇ ನೋಟಿಫಿಕೇಶನ್ ಇಲ್ಲದೆ, ಸಂದರ್ಶನವಿಲ್ಲದೆ ನೇಮಕಾತಿ ಮಾಡಿದ್ದಾರೆ ಎಂದು ಸೂರ್ಯ ನಾರಾಯಣ ಮೂರ್ತಿ ಆರೋಪಿಸಿದ್ದಾರೆ. ಹಾಗೂ ಈ ಬಗ್ಗೆ ಬಿಎಂಆರ್ಸಿಎಲ್ ಗೆ ಮಾಹಿತಿ ಕೇಳಿದ್ರೆ ಎಂಡಿ ಯಾರನ್ನು ಬೇಕಾದರೂ ನೇಮಕಾತಿ ಮಾಡಿಕೊಳ್ಳಬಹುದು ಎಂದು ಹೇಳುತ್ತಿದೆ. ಸರಿಯಾದ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಾತಿ ಮಾಡಿದ್ದಾರೆ. ಇದರಿಂದ ಮೆರಿಟ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬೇಕ್ ಬೇಕಾದವರಿಗೆ ಉದ್ಯೋಗ ನೀಡಿದ್ದಾರೆ. ಇದರಲ್ಲಿ ದೊಡ್ಡ ಅಕ್ರಮ ನಡೆದಿದೆ ಸರಿಯಾಗಿ ತನಿಖೆ ನಡೆಸಿದ್ರೆ ಅಕ್ರಮ ಬಯಲಾಗುತ್ತದೆ. ನೋಟಿಫಿಕೇಶನ್ ಮಾಡಿದ್ರೆ ಹೆಚ್ಚಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕಾಗುತ್ತದೆ ಎಂದು ನೋಟಿಫಿಕೇಶನ್ ಮಾಡದೆ ಆಯ್ಕೆ ಮಾಡಿದ್ದಾರೆ. ನಿವೃತ್ತ ತಹಶೀಲ್ದಾರ್ಗೆ ಹೆಚ್ಆರ್ ಮ್ಯಾನೇಜರ್ ಹುದ್ದೆ ನೀಡಿದ್ದಾರೆ. 60 ರಿಂದ 75 ವಯಸ್ಸು ಆಗಿರೋರಿಗೆಲ್ಲ ಹುದ್ದೆ ನೀಡಿ ಲಕ್ಷಾಂತರ ರೂಪಾಯಿ ಸಂಬಳ ನೀಡ್ತಿದ್ದಾರೆ ಎಂದು ಮೆಟ್ರೋ ಎಂಪ್ಲಾಯಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಸೂರ್ಯ ನಾರಾಯಣ ಮೂರ್ತಿ ಆರೋಪಿಸಿದ್ದಾರೆ.
ಇದನ್ನೂ ಓದಿ: Namma Metro: ಹೊಸ ವರ್ಷದ ಮೊದಲ ದಿನವೇ ನಮ್ಮ ಮೆಟ್ರೋಗೆ ರೂ. 1 ಕೋಟಿಗೂ ಆದಾಯ
ಜನರಲ್ ಮ್ಯಾನೇಜರ್, ಚೀಫ್ ಜನರಲ್ ಮ್ಯಾನೇಜರ್, ಚೀಫ್ ಇಂಜಿನಿಯರ್, ಅಡ್ವೈಸರ್ ಕನ್ಸಲ್ಟೆಂಟ್, ‘ಡೆಪ್ಯುಟಿ ಜನರಲ್ ಮ್ಯಾನೇಜರ್, ಡೆಪ್ಯೂಟಿ ಚೀಫ್ ಇಂಜಿನಿಯರ್, ಡೆಪ್ಯುಟಿ ಚೀಫ್ ಸೆಕ್ಯುರಿಟಿ ಆಫೀಸರ್, ಎಕ್ಸಿಕ್ಯುಟಿವ್ ಇಂಜಿನಿಯರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್, ಅಸಿಸ್ಟೆಂಟ್ ಮ್ಯಾನೇಜರ್, ಸೂಪರ್ವೈಸರ್ ,ಎಕ್ಸಿಕ್ಯುಟಿವ್ ಅಸಿಸ್ಟೆಂಟ್ , ಟ್ರ್ಯಾಕ್ ಮ್ಯಾನ್ ಡ್ರೈವರ್ ಯಾವುದೇ ಹುದ್ದೆಗೂ ನೋಟಿಫಿಕೇಶನ್ ಮಾಡದೆ ಕೆಲಸ ನೀಡಿದ್ದಾರೆ ಎಂದು ಸೂರ್ಯ ನಾರಾಯಣ ಮೂರ್ತಿ ತಿಳಿಸಿದ್ದಾರೆ.
ನಾವು ಮಾನವೀಯತೆಯ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದೇವೆ
ಇನ್ನು ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮೆಟ್ರೋ ಎಂಡಿ ಅಂಜುಂ ಪರ್ವೇಜ್, ಸೂರ್ಯ ನಾರಾಯಣ ನಮ್ಮ ಯಾವುದೇ ಎಂಪ್ಲಾಯಿಸ್ ಅಸೋಸಿಯೇಷನ್ ನ ಉಪಾಧ್ಯಕ್ಷ ಅಲ್ಲ. ಆತ ಒಬ್ಬ ಬ್ಲಾಕ್ ಮೇಲರ್, ನಮ್ಮಲ್ಲಿ ಬೇರೆ ಸಿಸ್ಟಮ್ ಇದೆ ಅಸೋಸಿಯೇಷನ್ ಗಾಗಿ. ಎಲೆಕ್ಷನ್ ನಲ್ಲಿ ಯಾರು ಆಯ್ಕೆ ಆಗಿ ಬರ್ತಾರೋ ಅವರು ಮಾತ್ರ ಇಲ್ಲಿ ಅಧಿಕೃತ. ಅವರು ಎಲ್ಲರಿಗೂ ಸುಮ್ಮನೆ ಪತ್ರ ಬರೆದಿದ್ದಾರೆ ಅಷ್ಟೇ. ಮೆಟ್ರೋದಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಆರು ವರ್ಷ ಕೆಲಸ ಮಾಡಿದ ನೌಕರರನ್ನು ಮಾತ್ರ ನಾವು ಮೆಟ್ರೋ ಎಂಪ್ಲಾಯಿಸ್ ಆಗಿ ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ಮಾನವೀಯತೆಯ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡಿದ್ದೇವೆ. ಇಲ್ಲಿ ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದ ನೌಕರರಿಗೆ ನ್ಯಾಯ ಒದಗಿಸಿದ್ದೇವೆ ಅಷ್ಟೇ ಎಂದು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:02 pm, Sat, 7 January 23