ನಮ್ಮ ಮೆಟ್ರೋಗೆ ಆದಾಯ ಕೊರತೆ: ಜಾಹೀರಾತು ಮೊರೆ ಹೋದ ಬಿಎಂಆರ್​ಸಿಎಲ್

ಬೆಂಗಳೂರಿನ ನಮ್ಮ ಮೆಟ್ರೋದ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದರಿಂದ ಆದಾಯದಲ್ಲಿ ನಷ್ಟ ಉಂಟಾಗುತ್ತಿದೆ. ನಷ್ಟವನ್ನು ಸರಿದೂಗಿಸಲು, ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳ ಒಳ ಮತ್ತು ಹೊರಭಾಗದಲ್ಲಿ ಜಾಹೀರಾತು ಅಳವಡಿಸಲು ಯೋಜಿಸಿದೆ. ಇದರಿಂದ ವಾರ್ಷಿಕವಾಗಿ 27 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಆದರೆ, ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ನಮ್ಮ ಮೆಟ್ರೋಗೆ ಆದಾಯ ಕೊರತೆ: ಜಾಹೀರಾತು ಮೊರೆ ಹೋದ ಬಿಎಂಆರ್​ಸಿಎಲ್
ನಮ್ಮ ಮೆಟ್ರೋ
Updated By: ವಿವೇಕ ಬಿರಾದಾರ

Updated on: Mar 14, 2025 | 7:30 AM

ಬೆಂಗಳೂರು, ಮಾರ್ಚ್​ 14: ನಮ್ಮ ಮೆಟ್ರೋ ಟಿಕೆಟ್ ದರ (Namma Metro Ticket Price) ಏರಿಕೆ ಆಗುತ್ತಿದ್ದಂತೆ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದರಿಂದ ಆದಾಯದಲ್ಲಿ ನಷ್ಟ ಉಂಟಾಗುತಿದೆಯಂತೆ. ಇದನ್ನು ಸರಿದೂಗಿಸಲು ನಮ್ಮ ಮೆಟ್ರೋ ರೈಲಿನ ಒಳ ಮತ್ತು ಹೊರಭಾಗದಲ್ಲಿ ಜಾಹೀರಾತು ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮುಂದಾಗಿದೆ.

ಮೆಟ್ರೋ ಟಿಕೆಟ್ ದರ ಏರಿಕೆಯಾದ ಮೇಲೆ ರೈಲಿನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಇದರಿಂದ ಮೆಟ್ರೋಗೆ ನಷ್ಟ ಉಂಟಾಗಿದೆಯಂತೆ. ಇದರಿಂದ ತಪ್ಪಿಸಿಕೊಳ್ಳಲು ಬಿಎಂಆರ್​​ಸಿಎಲ್​ ಜಾಹೀರಾತುಗಳ ಮೊರೆ ಹೋಗಿದ್ದು, ರೈಲಿನ ಮೇಲೆ ಜಾಹೀರಾತು ಹಾಕಲು ಟೆಂಡರ್ ಕರೆದಿದ್ದು ಖಾಸಗಿ ಕಂಪನಿಗೆ ಟೆಂಡರ್ ಫೈನಲ್ ಆಗಿದ್ದು, ಏಳು ವರ್ಷಗಳ ಕಾಲ ಹಸಿರು ಮಾರ್ಗದ 10 ರೈಲು ಮತ್ತು ನೇರಳೆ ಮಾರ್ಗದ 10 ರೈಲಿನ ಮೇಲೆ ಜಾಹೀರಾತು ಹಾಕಲು ಅವಕಾಶ ನೀಡಲಾಗಿದೆ. ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಸಂಚಾರ ಮಾಡುವ 57 ರೈಲುಗಳ ಒಳಭಾಗದಲ್ಲೂ ಜಾಹೀರಾತು ಹಾಕಲು ಅನುಮತಿ ನೀಡಲಾಗಿದೆ ಎಂದು ಬಿಎಂಆರ್​ಸಿಎಲ್​ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

20 ರೈಲಿನ ಹೊರಭಾಗದಲ್ಲಿ ಮತ್ತು 57 ರೈಲಿನ ಒಳಭಾಗದಲ್ಲಿ ಜಾಹೀರಾತು ಅಳವಡಿಸುವುದರಿಂದ ಬಿಎಂಆರ್​ಸಿಎಲ್​ಗೆ ವರ್ಷಕ್ಕೆ 27 ಕೋಟಿ ರೂಪಾಯಿ ಆದಾಯ ಹರಿದು ಬರಲಿದೆಯಂತೆ.

ಇದನ್ನೂ ಓದಿ
ಟಿಕೆಟ್ ದರ ಏರಿಕೆ ಪರಿಣಾಮ: 5 ಲಕ್ಷಕ್ಕಿಳಿದ ಮೆಟ್ರೋ ಪ್ರಯಾಣಿಕರ ಸಂಖ್ಯೆ
ವಿದ್ಯಾರ್ಥಿಗಳಿಗೆ ಅನುಕೂಲವಾಗದ ನಮ್ಮ ಮೆಟ್ರೊ ಟಿಕೆಟ್ ದರ ಪರಿಷ್ಕರಣೆ
ಮೆಟ್ರೋ ದರ ಏರಿಕೆ ಬಿಸಿ: BMRCL ಎಂಡಿ ಮಹತ್ವದ ಸುದ್ದಿಗೋಷ್ಠಿ
ಬಿಎಂಆರ್​ಸಿಎಲ್ ನಮ್ಮ ಮೆಟ್ರೋ ಪ್ರಯಾಣ ದರವನ್ನು ಏರಿಕೆ ಮಾಡಿದ್ಯಾಕೆ?

ಜಾಹಿರಾತು ಹಾಕಲು ಮುಂದಾಗಿರುವ ಬಿಎಂಆರ್​ಸಿಎಲ್​ ನಿರ್ಧಾರಕ್ಕೆ ಮೆಟ್ರೋ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದರ ಏರಿಕೆ ಮಾಡಿರುವುದರಿಂದ ಶೇ 50 ರಷ್ಟು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಟಿಕೆಟ್ ದರ ಕಡಿಮೆ ಮಾಡಿದರೆ, ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ. ಮೆಟ್ರೋಗೂ ಆದಾಯ ಬರುತ್ತದೆ ಎಂದರು.

ವಾಯುಮಾಲಿನ್ಯವೂ ಹೆಚ್ಚಳ

ಕರ್ನಾಟಕ ವಾಯುಮಾಲಿನ್ಯ ಮಂಡಳಿ ನೀಡಿದ ವರದಿಯ ಪ್ರಕಾರ, ನಗರದಲ್ಲಿ ಮಾಲಿನ್ಯ ಮಟ್ಟ ಹೆಚ್ಚಳವಾಗಿದೆ. ಮಂಡಳಿಯ ಏರ್ ಕ್ವಾಲಿಟಿ ಮಾನಿಟರಿಂಗ್ ಅಧ್ಯಯನದ ಪ್ರಕಾರ, ಮೆಟ್ರೋ ಟಿಕೆಟ್‌ ಶುಲ್ಕ ಹೆಚ್ಚಳಕ್ಕೆ ಮುಂಚೆ ಬೆಳಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಇರುವ ಸಮಯದಲ್ಲಿ ಸರಾಸರಿ ಪಿಎಂ 2.5 ಕಣ ಪ್ರತಿ ಘನ ಮೀಟರ್‌ಗೆ 43 ರಿಂದ 54 ಮೈಕ್ರೊಗ್ರಾಮ್ ಇತ್ತು.ಅದೇ ಫೆಬ್ರವರಿ 10 ರಂದು 112-114 ಮೈಕ್ರೊ ಗ್ರಾಂಗೆ ಏರಿಕೆಯಾಗಿದೆ. ಇನ್ನು ಫೆಬ್ರವರಿ 17 ಮತ್ತು 24ರ ಸೋಮವಾರ ಈ ಮಟ್ಟ ಸರಾಸರಿ 68 ರಿಂದ 105 ಮೈಕ್ರೋಗ್ರಾಂಗೆ ತಲುಪಿದೆ. ಹೀಗೆ ವಾಯುಮಾಲಿನ್ಯ ಏರಿಕೆಯಾದರೆ, ಆಸ್ತಮಾದಿಂದ ಕ್ಯಾನ್ಸರ್‌ ತನಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಟಿಕೆಟ್ ದರ ಏರಿಕೆಯಿಂದ ನಮ್ಮ ಮೆಟ್ರೋಗೆ ಮರಳದ ಪ್ರಯಾಣಿಕರು: ಬೆಂಗಳೂರು ಟ್ರಾಫಿಕ್, ವಾಯುಮಾಲಿನ್ಯ ಹೆಚ್ಚಳ

ಒಟ್ಟಿನಲ್ಲಿ ಬರುತ್ತಿರುವ ಆದಾಯ ಸಾಲುತ್ತಿಲ್ಲ, ಮಾಡಿರುವ ಸಾಲಕ್ಕೆ ಬಡ್ಡಿಕಟ್ಟಲು ಆಗುತ್ತಿಲ್ಲ. ಅದಕ್ಕೆ ಜಾಹೀರಾತು ಮೊರೆ ಹೋಗಿದ್ದೀವೆ ಎಂದು ಬಿಎಂಆರ್​ಸಿಎಲ್​ ಹೇಳುತ್ತಿದ್ದರೇ, ಇತ್ತ ಪ್ರಯಾಣಿಕರು ಮಾತ್ರ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತದೆ ಆದಾಯೂ ಬರುತ್ತದೆ ಎಂದಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:29 am, Fri, 14 March 25