ಟಿಕೆಟ್ ದರ ಏರಿಕೆ ಪರಿಣಾಮ: 5 ಲಕ್ಷಕ್ಕಿಳಿದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ತೀವ್ರ ಇಳಿಕೆಯಾಗಿದೆ. ಮಹಿಳಾ ಐಪಿಎಲ್ ಪಂದ್ಯಗಳ ಹೊರತಾಗಿಯೂ, ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ವಾರದ ದಿನಗಳ ಸರಾಸರಿ 8.5 ಲಕ್ಷದಿಂದ 5 ಲಕ್ಷಕ್ಕೆ ಇಳಿಕೆಯಾಗಿದೆ. ಪ್ರಯಾಣಿಕರು ಪರ್ಯಾಯ ಸಾರಿಗೆಯನ್ನು ಬಳಸುತ್ತಿದ್ದು, ಬಿಎಂಆರ್ಸಿಎಲ್ ದರ ಕಡಿಮೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಬೆಂಗಳೂರು, ಮಾರ್ಚ್ 3: ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಸಂಗಾತಿ.ಯಾವಾಗ ಇದು ದುಬಾರಿಯಾಯಿತೋ ನಗರವಾಸಿಗಳು ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಾರೆ. ಪರಿಣಾಮವಾಗಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹಿಳಾ ಐಪಿಎಲ್ ಕ್ರಿಕೆಟ್ ಮ್ಯಾಚ್ ಇದ್ದರೂ ಮೆಟ್ರೋ ತನ್ನ ಹಳೆಯ ಖದರನ್ನು ಕಳೆದುಕೊಂಡಿದೆ. ನಿತ್ಯವೂ ಎಂಟೂವರೆ ಲಕ್ಷ ಜನರನ್ನ ಹೊತ್ತು ಸಾಗುತ್ತಿದ್ದ ಮೆಟ್ರೋದ ಒಡಲು ಈಗ ಬರಿದಾಗಲು ಆರಂಭವಾಗಿದೆ.
ಮೆಟ್ರೋದಲ್ಲಿ ಈಗ ಹಿಂದೆ ಇದ್ದಷ್ಟು ಇಕ್ಕಟ್ಟಿಲ್ಲ.ದರ ಏರಿಕೆಯ ಪರಿಣಾಮದಿಂದ ಜನರು ಇದೀಗ ಮೆಟ್ರೋದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವುಮೆನ್ ಪ್ರೀಮಿಯರ್ ಲೀಗ್ ಮ್ಯಾಚ್ ಹೊರತಾಗಿಯೂ, ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರ ಸಂಖ್ಯೆ ಇಲ್ಲ.ಗುರುವಾರದಂದು ಆರ್ಸಿಬಿ ಹಾಗೂ ಗುಜರಾತ್ ನಡುವೆ ಪಂದ್ಯ ಇತ್ತು. ಆದರೂ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಮಹಾ ಶಿವರಾತ್ರಿಯ ದಿನ ಬುಧುವಾರದಂದು 5.20 ಲಕ್ಷ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಸಂಚರಿಸಿದ್ದಾರೆ.
ವಾರದ ದಿನಗಳಲ್ಲಿ 8 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ
ಟಿಕೆಟ್ ದರ ಏರಿಕೆಗಿಂತ ಮೊದಲು ಒಂದು ತಿಂಗಳು ವಾರದ ದಿನಗಳಲ್ಲಿ ಸರಾಸರಿ 8.5 ಲಕ್ಷ ಪ್ರಯಾಣಿಕರ ಓಡಾಟವಿತ್ತು.ದರ ಏರಿಕೆ ಮಾಡಿದ ಬಳಿಕ ಪ್ರತಿದಿನ ಸರಾಸರಿ 2.50 ರಿಂದ 3 ಲಕ್ಷದಷ್ಟು ಕಡಿಮೆಯಾಗಿದೆ. ದಿನೇ ದಿನೇ ಮೆಟ್ರೋ ಪ್ರಯಾಣ ಮಾಡುವವರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗುತ್ತಿದೆ.
ಒಟ್ಟಿನಲ್ಲಿ ಈ ಸಮಯದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಮಾಮೂಲಿಯಾಗಿ ಹೆಚ್ಚಾಗುತ್ತಿತ್ತು. ಆದರೆ, ಬೇಸಿಗೆಯ ಕಾರಣಕ್ಕೆ ಜನರು ಎಸಿಯೆಂದು ಮೆಟ್ರೋ ಮೊರೆ ಹೋಗುತ್ತಿದ್ದರು. ಆದರೆ, ಇದೀಗ ಸರಾಸರಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ದರ ಏರಿಕೆಯ ವಿರುದ್ಧ ಪ್ರಯಾಣಿಕರ ಆಕ್ರೋಶ ಎದ್ದು ಕಾಣುತ್ತಿದೆ. ಇನ್ನಾದರೂ ಬಿಎಂಆರ್ಸಿಎಲ್ ದರ ಕಡಿಮೆ ಮಾಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಜನಾಕ್ರೋಶ ಹಿನ್ನೆಲೆ ಪ್ರಯಾಣ ದರ ಸರಿಪಡಿಸಿದ ಮೆಟ್ರೋ: ಎಲ್ಲಿಂದ ಎಲ್ಲಿಗೆ ಎಷ್ಟು ಕಡಿಮೆಯಾಯ್ತು? ಇಲ್ಲಿದೆ ವಿವರ
ನಮ್ಮ ಮೆಟ್ರೋ ದರ ಏರಿಕೆಗೆ ಪ್ರಯಾಣಿಕರಿಂದ ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ನಂತರ ಎಚ್ಚೆತ್ತುಕೊಂಡಿದ್ದ ಬಿ ಎಂ ಆರ್ಸಿಎಲ್, ಎಲ್ಲೆಲ್ಲಿ ಟಿಕೆಟ್ ದರ ದುಪ್ಪಟ್ಟು ಹೆಚ್ಚಾಗಿದೆಯೋ ಅಲ್ಲೆಲ್ಲ ಕಡಿಮೆ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಟಿಕೆಟ್ ದರ ಕಡಿಮೆ ಮಾಡಿಲ್ಲ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದರು. ನೂರಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿಯೂ ಅಸಮಾಧಾನದ ಸಂದೇಶಗಳನ್ನು ಪ್ರಕಟಿಸಿ ಬಿಎಂಆರ್‌ಸಿಎಲ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಮೆಟ್ರೋ ಬದಲಿಗೆ ಪರ್ಯಾಯ ಸಾರಿಗೆ, ಸ್ವಂತ ವಾಹನಗಳನ್ನು ಬಳಸುವ ಮೂಲಕ ಮೆಟ್ರೋ ಪ್ರಯಾಣ ಕಡಿಮೆ ಮಾಡಿದ್ದಾರೆ. ಇದು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಗೆ ಕಾರಣವಾಗಿದೆ.