ದರ ಏರಿಕೆ ವಿರುದ್ಧ ಪ್ರಯಾಣಿಕರ ಸೆಡ್ಡು: ನಮ್ಮ ಮೆಟ್ರೋ ಬಾಯ್ಕಾಟ್ ಮಾಡಲು ಚಿಂತನೆ
ಬೆಂಗಳೂರಿನಲ್ಲಿ ಮೆಟ್ರೋ ಟಿಕೆಟ್ ದರ ಏರಿಕೆಯನ್ನು ಖಂಡಿಸಿ, ಪ್ರಯಾಣಿಕರ ವೇದಿಕೆ ಮೆಟ್ರೋ ಬಹಿಷ್ಕಾರಕ್ಕೆ ಮುಂದಾಗಿದೆ. ಭಾನುವಾರದೊಳಗೆ ದರ ಕಡಿಮೆ ಮಾಡದಿದ್ದರೆ ಮೆಟ್ರೋ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ. ಸದ್ಯ ಮೆಟ್ರೋ ಟಿಕೆಟ್ ದರ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸರ್ಕಾರಕ್ಕೆ ದರ ಏರಿಕೆ ತಲೆನೋವಾಗಿದೆ.

ಬೆಂಗಳೂರು, ಫೆಬ್ರವರಿ 17: ಮೆಟ್ರೋ (Metro) ಪ್ರಯಾಣ ದರ ಏರಿಕೆಗೆ ನಗರದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದರು. ಬಳಿಕ ದರ ಪರಿಷ್ಕರಣೆ ಮಾಡಿದ್ದೇವೆ ಅಂತಾ ಹೇಳಿದ್ದ ನಮ್ಮ ಮೆಟ್ರೋಗೆ ಪ್ರಯಾಣಿಕರ ದಿಢೀರ್ ಇಳಿಕೆಯ ಬಿಸಿ ತಟ್ಟಿತ್ತು. ಇದೀಗ ಬಿಎಂಆರ್ಸಿಎಲ್ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಮೆಟ್ರೋ ಬಾಯ್ಕಾಟ್ ಮಾಡಲು ಮೆಟ್ರೋ ಪ್ರಯಾಣಿಕರ ವೇದಿಕೆ ಸಿದ್ದತೆ ನಡೆಸಿದೆ. ದರ ಏರಿಕೆ ಖಂಡಿಸಿ ಒಂದು ದಿನ ಅಥವಾ ಒಂದು ವಾರ ಮೆಟ್ರೋ ಹತ್ತದಿರಲು ಪ್ಲಾನ್ ಮಾಡಲಾಗುತ್ತಿದೆ.
ಟಿಕೆಟ್ ದರ ಕಡಿಮೆ ಮಾಡಲು ಮೆಟ್ರೋ ಪ್ರಯಾಣಿಕರ ವೇದಿಕೆ ಭಾನುವಾರದವರೆಗೆ ಗಡುವು ನೀಡಿದೆ. ಅಷ್ಟರಲ್ಲಿ ಟಿಕೆಟ್ ದರ ಕಡಿಮೆ ಮಾಡಲಿಲ್ಲ ಅಂದರೆ ಮೆಟ್ರೋ ಬಾಯ್ಕಾಟ್ ಮಾಡುವುದಾಗಿ ತಿಳಿಸಲಾಗಿದೆ. ಈ ಕುರಿತಾಗಿ ಬುಧವಾರ ಸುದ್ದಿಗೋಷ್ಠಿ, ಭಾನುವಾರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಮೆಟ್ರೋ ಬಾಯ್ಕಾಟ್ ದಿನಾಂಕ ಘೋಷಣೆ ಆಗಲಿದೆ.
ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ಹೇಳಿದ್ದಿಷ್ಟು
ಮೆಟ್ರೋ ಪ್ರಯಾಣಿಕರ ವೇದಿಕೆಯ ಸದಸ್ಯ ರಾಜೇಶ್ ಭಟ್ ಮಾತನಾಡಿದ್ದು, ಸ್ಕೌಟ್ಸ್ ಆ್ಯಂಡ್ ಗೈಡ್ಸ್ನಲ್ಲಿ “ಮೆಟ್ರೋ ಪ್ರಯಾಣಿಕರ ಸಮಾವೇಶ” ನಡೆಯಲಿದೆ. ಪ್ರತಿದಿನ ಟಿಕೆಟ್ ದರ ಏರಿಕೆ ಖಂಡಿಸಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ನಮ್ಮ ಮೆಟ್ರೋ ಏನು ಮಾಡುತ್ತಿಲ್ಲ. ನಾವು ಈಗಾಗಲೇ ಸಾವಿರಾರು ಸಹಿ ಸಂಗ್ರಹ ಅಭಿಯಾನ ಮಾಡಿದ್ದೇವೆ. ಇಂದು ನಾವು ಬಿಎಂಆರ್ಸಿಎಲ್ ಎಂಡಿ ಅವರನ್ನು ಭೇಟಿ ಮಾಡಿ ದರವನ್ನು ಕಡಿಮೆ ಮಾಡಲು ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಟಿವಿ9’ ರಿಯಾಲಿಟಿ ಚೆಕ್: ಅನೇಕ ಕಡೆಗಳಲ್ಲಿ ಕಡಿಮೆಯೇ ಆಗಿಲ್ಲ ಮೆಟ್ರೋ ಟಿಕೆಟ್ ದರ!
ಅವರು ನಮ್ಮ ಮನವಿಯನ್ನು ಕೇಳಲಿಲ್ಲ ಅಂದರೆ ನಮಗೆ ಬೇರೆ ದಾರಿಯಿಲ್ಲ. ಪಾಸ್ಗಳ ಬೆಲೆ ವಿಪರೀತವಾಗಿ ಏರಿಕೆ ಆಗಿದೆ. ಈ ಭಾನುವಾರ ಇಡೀ ಬೆಂಗಳೂರಿನ ನಾಗರೀಕರನ್ನು ಸೇರಿಸಿ ಸಮಾವೇಶ ಮಾಡುತ್ತೇವೆ. ನಿವಾಸಿಗಳ ಸಂಘಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು, ಯುವಜನ ಸಂಘಟನೆಗಳು, ಮೆಟ್ರೋ ಪ್ರಯಾಣಿಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ದಿನದಿಂದ ದಿನಕ್ಕೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಿದೆ. ನಾಳೆಯಿಂದ ಕರಪತ್ರಗಳನ್ನು ಹಂಚಿಕೆ ಮಾಡುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಶೇ 30 ರ ವರೆಗೆ ಇಳಿಕೆ: ಆದರೆ ಎಲ್ಲೆಡೆಯೂ ಅಲ್ಲ!
ಬಿಎಂಆರ್ಸಿಎಲ್ ಸಾಲ ಇದೆ ಎಂದು ದರ ಏರಿಕೆ ಮಾಡಿದೆಯಂತೆ. ಸಾಲದ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕುವುದು ಎಷ್ಟು ಸರಿ? ನಿರ್ವಹಣೆ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ಮಾತ್ರ ಪಡೆದುಕೊಳ್ಳಬೇಕು. ಇದರ ಮೇಲೆ ದರವನ್ನು ಏರಿಕೆ ಮಾಡಬೇಕು ಅದನ್ನು ಬಿಟ್ಟು ಬಡ್ಡಿ ಹೆಚ್ಚಾಗಿದೆ ಎಂದು ದರ ಹೆಚ್ಚಳ ಮಾಡುವುದು ಸರಿಯಲ್ಲ. ಇದು ಸಾರ್ವಜನಿಕ ಸಂಸ್ಥೆ, ಖಾಸಗಿ ಸಂಸ್ಥೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಯ್ಕಾಟ್ಗೆ ಪ್ರಯಾಣಿಕರ ಬೆಂಬಲ
ಜನರಿಗೆ ಒಳ್ಳೆಯದು ಆಗುತ್ತದೆ ಅಂದರೆ ನಾವು ಇದಕ್ಕೆ ಸಪೋರ್ಟ್ ಮಾಡುತ್ತೇವೆ. ಇಷ್ಟೊಂದು ದರ ಏರಿಕೆ ಮಾಡಿದ್ದು ಸರಿಯಲ್ಲ. ಇದಕ್ಕೆ ಎಲ್ಲರು ಬೆಂಬಲ ಕೊಡಬೇಕು. ಮೆಟ್ರೋ ಟಿಕೆಟ್ ದರ ಏರಿಕೆ ಆದ ಮೇಲೆ ನಾವು ಈಗಾಗಲೇ ಮೆಟ್ರೋದಲ್ಲಿ ಪ್ರಯಾಣ ಮಾಡುವುದನ್ನು ಬಿಟ್ಟಿದ್ದೀವಿ. ಬಸ್ನಲ್ಲೂ ಹೆಚ್ಚಳ, ಮೆಟ್ರೋ ರೈಲಿನಲ್ಲೂ ಅಂದರೆ ಹೇಗೆ? 70 ರೂ ಕೊಟ್ಟರೆ ದಿನವೆಲ್ಲಾ ಸಂಚಾರ ಮಾಡಬಹುದು. ಮೆಟ್ರೋದಲ್ಲಿ ಪಾಸ್ ದರವು ತುಂಬಾ ಆಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:33 pm, Mon, 17 February 25