ಬಿಎಂಆರ್ಸಿಎಲ್ಗೆ ಸಿಎಂ ಮಹತ್ವದ ಸೂಚನೆ: ಏರಿಕೆಯಾಗಿರುವ ಮೆಟ್ರೋ ದರ ಇಳಿಕೆಯಾಗುತ್ತಾ?
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಅಥವಾ ರಾಜ್ಯ ಕಾಂಗ್ರೆಸ್ ಸರ್ಕಾರ ಏರಿಕೆ ಮಾಡಿದ್ಯಾ ಎನ್ನುವುದೇ ದೊಡ್ಡ ಗೊಂದಲವಾಗಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಇದರ ಮಧ್ಯ ಇದೀಗ ಸಿಎಂ ಸಿದ್ದರಾಮಯ್ಯ ಅವರು ಮೆಟ್ರೋ ದರ ಏರಿಕೆ ಸಂಬಂಧ ಬಿಎಂಆರ್ಸಿಎಲ್ಗೆ ಮಹತ್ವದ ಸೂಚನೆ ನೀಡಿದ್ದಾರೆ.

ಬೆಂಗಳೂರು, (ಫೆಬ್ರವರಿ 13): ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಯಾಗಿದೆ. ಇದರಿಂದ ಪ್ರಯಾಣಿಕರಿಗೆ ಭಾರೀ ಹೊರೆಯಾಗಿದೆ. ಶೇ.45 ರಿಂದ 50% ದರ ಏರಿಕೆ ಮಾಡಿದ್ದೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಆದ್ರೆ, ಏರಿಕೆ ಅಗಿರುವುದ ಒನ್ ಟು ಡಬಲ್ ಆಗಿದ್ದು, ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ದರ ಏರಿಕೆಯಲ್ಲಿ ಗೊಂದಲ ನಿರ್ಮಾಣವಾಗಿದ್ದರಿಂದ ಖುದ್ದು ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದು, ಮೆಟ್ರೋ ಪ್ರಯಾಣ ದರ ಹೆಚ್ಚಳದಲ್ಲಿ ಕೆಲವು ಸ್ಟೇಜ್‌ಗೆ ದುಪ್ಪಟ್ಟು ದರ ಹೆಚ್ಚಳ ಮಾಡಲಾಗಿದೆ. ಪ್ರಯಾಣಿಕರ ಹಿತ ದೃಷ್ಟಿಯಿಂದ ಅದನ್ನು ಕಡಿತ ಮಾಡುವಂತೆ ಬಿಎಂಆರ್ಸಿಎಲ್ಗೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಮೆಟ್ರೋ ಪ್ರಯಾಣ ದರ ಹೆಚ್ಚಳದಲ್ಲಿ ಕೆಲವು ಸ್ಟೇಜ್‌ಗಳಿಗೆ ಯಥೇಚ್ಚ ದರ ಏರಿಕೆಯಾಗಿದೆ. ಆ ದರವನ್ನು ಇಳಿಕೆ ಮಾಡುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಸಿಎಂ ಸಿದ್ದರಾಮಯ್ಯನವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದರ ಏರಿಕೆ ಮಾಡಿದ ಬಿಎಂಆರ್ಸಿಎಲ್ಗೆ ಸೆಡ್ಡು: ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ!
ಸಿಎಂ ಟ್ವೀಟ್ನಲ್ಲೇನಿದೆ?
ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ.
ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ದರ ಇಳಿಕೆಯಾಗುತ್ತಾ?
ಬೆಂಗಳೂರು ಮೆಟ್ರೋ ದರ ಪರಿಷ್ಕರಣೆಯನ್ನು ಜಾರಿಗೆ ತಂದಿರುವ ರೀತಿಯು ವೈಪರೀತ್ಯಗಳಿಗೆ ಕಾರಣವಾಗಿದೆ, ಕೆಲವು ಸ್ಟೇಜ್ಗಳ ದರಗಳು ಯಥೇಚ್ಚವಾಗಿದೆ. ಈ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲು ಮತ್ತು ದರ ಹೆಚ್ಚಳ ಅಸಹಜವಾಗಿರುವಲ್ಲಿ ಕಡಿಮೆ ಮಾಡಲು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಆದ್ರೆ, ದರ ಏರಿಕೆಯನ್ನು ಮರುಪರಿಶೀಲನೆ ಬಗ್ಗೆ ಯಾವುದೇ ಸಲಹೆ ಸೂಚನೆಗಳನ್ನು ನೀಡಿಲ್ಲ. ಹೀಗಾಗಿ ಯಾವೆಲ್ಲಾ ಸ್ಟೇಜ್ಗಳ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎನ್ನುವುದನ್ನು ಮಾತ್ರ ಬಿಎಂಆರ್‌ಸಿಎಲ್ ಪರಿಶೀಲನೆ ಮಾಡಲಿದೆ. ಆದ್ರೆ, ಈಗ ಏರಿಕೆಯಾಗಿರುವ ದರವನ್ನು ಇಳಿಕೆ ಮಾಡುವುದು ಸಾಧ್ಯತೆಗಳು ಕಡಿಮೆ.
ಟಿಕೆಟ್ ದರ ಏರಿಕೆಗೆ ಪ್ರಯಾಣಿಕರಿಂದ ತೀವ್ರ ವಿರೋಧ
ದೇಶದಲ್ಲೇ ದುಬಾರಿ ಅಂದರೆ ನಮ್ಮ ಮೆಟ್ರೋ ಮಾತ್ರ, ಕಾರಣ ನಮ್ಮ ಮೆಟ್ರೋದಲ್ಲಿ 25 ಕಿಮೀ ನಂತರದ ಪ್ರಯಾಣಕ್ಕೆ 90 ರುಪಾಯಿ ನಿಗದಿಪಡಿಸಿದೆ. ಆದರೆ ದೆಹಲಿ ಮೆಟ್ರೋದಲ್ಲಿ 32 ಕಿಮೀ ಅಂತರಕ್ಕೆ ಕೇವಲ 60 ರುಪಾಯಿ ಇದೆ.ಚೆನ್ನೈ ಮೆಟ್ರೋದಲ್ಲಿ 50 ರುಪಾಯಿ, ಕೊಲ್ಕತ್ತಾ ಮೆಟ್ರೋ ದಲ್ಲಿ 25 ರಿಂದ 30 ಕಿಮೀ 25 ರುಪಾಯಿ ಇದೆ.ಕೊಲ್ಕತ್ತಾ ಮೆಟ್ರೋದಲ್ಲಿ ಕನಿಷ್ಠ 5 ರುಪಾಯಿ ಗರಿಷ್ಠ – 50 ರುಪಾಯಿ ಅಷ್ಟೇ.ಆದರೆ ನಮ್ಮ ಮೆಟ್ರೋದಲ್ಲಿ ಕನಿಷ್ಠ 10 ರುಪಾಯಿ ಗರಿಷ್ಠ- 90 ರುಪಾಯಿ ಇದೆ ಹಾಗಾಗಿ ಪ್ರಯಾಣಿಕರು ನಮ್ಮ ಮೆಟ್ರೋ ನಮಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ನಮ್ಮ ಮೆಟ್ರೋ ಹೇಳಿದ್ದು ಒಂದು ಮಾಡಿದ್ದು ಮತ್ತೊಂದು ಎನ್ನುವ ರೀತಿಯಲ್ಲಿ ಸಿಕ್ಕಿದ್ದೆ ಚಾನ್ಸ್ ಎಂದು ಒನ್ ಟು ಡಬಲ್ ದರ ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಹೀಗಾಗಿ ಬಿಎಂಆರ್‌ಸಿಎಲ್ ದರ ಏನಾದರೂ ಕಡಿಮೆ ಮಾಡಲು ಮುಂದಾಗಲಿದ್ಯಾ ಎಂದು ಕಾದು ನೋಡಬೇಕಿದೆ.
Published On - 10:34 am, Thu, 13 February 25