ಬಾಕಿ ಫೀಸ್ಗೆ ಬಡ್ಡಿ ವಿಧಿಸುತ್ತಿರುವ ಆರೋಪ: ವಿಬ್‌ಗಯಾರ್ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ
ಯಲಹಂಕದ ವಿಬ್‌ಗಯಾರ್ ಗ್ರೂಪ್ ಆಫ್ ಶಾಲೆ ಬಾಕಿ ಉಳಿಸಿಕೊಂಡಿರುವ ಶುಲ್ಕಕ್ಕೆ ಇಂಟ್ರೆಸ್ಟ್ ಹಾಕುವ ಮೂಲಕ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಟಾರ್ಚರ್ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಶಾಲೆಯ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಆರೋಪಕ್ಕೆವಿಬ್‌ಗಯಾರ್ ಗ್ರೂಪ್ ಆಫ್ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಬೆಂಗಳೂರು, (ಫೆಬ್ರವರಿ 13): ಮಕ್ಕಳ ಶಾಲಾ ಶುಲ್ಕ ಉಳಿಸಿಕೊಂಡಿದ್ದಕ್ಕೆ ಇಂಟ್ರೆಸ್ಟ್ ಹಾಕಲಾಗುತ್ತಿದೆ ಎಂಬ ಪೋಷಕರ ಆರೋಪವನ್ನು ಯಲಹಂಕ ಸಿಂಗನಾಯಕನಹಳ್ಳಿಯಲ್ಲಿರುವ ಪ್ರತಿಷ್ಠಿತ ವಿಬ್‌ಗಯಾರ್ ಶಾಲಾ ಆಡಳಿತ ಮಂಡಳಿ ಅಲ್ಲಗಳೆದಿದೆ. ಎರಡು ಕಂತಿನ ಶಾಲಾ ಫೀಸ್ ಉಳಿಸಿಕೊಂಡಿರುವ ಪೋಷಕರಿಗೆ ಶೇಕಡಾ 3ರಷ್ಟು ಬಡ್ಡಿ ಹಾಕುವ ಮೂಲಕ ಶಾಕ್ ನೀಡಿದ್ದು, ಶಾಲಾ ಫೀಸ್ ಕಟ್ಟದ್ದಕ್ಕೆ ತಿಂಗಳಿಗೆ 3% ಬಡ್ಡಿ ಸಹಿತ ಫೀಸ್ ಕಟ್ಟುವಂತೆ ಶಾಲಾ ಆಡಳಿತ ಮಂಡಳಿ ಇ ಮೇಲ್ ಮಾಡಿದೆ ಎಂದು ಪೋಷಕರು ಆರೋಪ ಮಾಡಿದ್ದರು. 25450 ರೂ ಫೀಸ್ ಗೆ 5344 ರೂ ಬಡ್ಡಿ, 25450 ರೂ ಫೀಸ್ ಗೆ 3054 ರೂ ಬಡ್ಡಿ, 25450 ರೂ ಫೀಸ್ ಗೆ 763 ರೂ ಬಡ್ಡಿ ಹಾಕಲಾಗಿದೆ ಎಂದು ಪೋಕಷರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕರ್ನಾಟದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ
ಇನ್ನು ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ತಡವಾಗಿದ್ದಕ್ಕೆ ಶೈಕ್ಷಣಿಕ ವರ್ಷದ ಹೋಮ್ ವರ್ಕ್ ಮೆಸೇಜ್ಗಳನ್ನು ಕೂಡ ಆಡಳಿತ ಮಂಡಳಿ ಬ್ಲಾಕ್ ಮಾಡಿದ್ಯಂತೆ. ಎಸ್ಎಸ್ಎಲ್ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಎಕ್ಸಾಂ ಹಾಲ್ ಟಿಕೆಟ್ ನೀಡುವುದಿಲ್ಲ ಎಂದು ಆಡಳಿತ ಮಂಡಳಿ ಬೆದರಿಕೆ ಹಾಕಿದೆ ಎಂದು ಪೋಷಕರು ಹೇಳಿದ್ದರು. ಹೀಗಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲ ಮುಂದಿನ ಶೈಕ್ಷಣಿಕ ವರ್ಷದ ಫೀಸ್ ಏಪ್ರಿಲ್ ತಿಂಗಳಲ್ಲಿ ಪಾವತಿಸಬೇಕು. ಆದ್ರೆ ಫೀಸ್ ಫೆಬ್ರವರಿ ತಿಂಗಳಲ್ಲೆ ಕಟ್ಟುವಂತೆ ಪೋಷಕರಿಗೆ ಟಾರ್ಚರ್ ನೀಡುತ್ತಿದೆ ಎಂದು ಆರೋಪಿಸಲಾಗಿದೆ.
ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ
ಪೋಷಕರ ಆರೋಪಕ್ಕೆ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗೆ ಅತ್ಯುತ್ತಮ, ಒಳಗೊಳ್ಳುವಿಕೆಯ ಮತ್ತು ಸಮರ್ಥ ಕಲಿಕಾ ವಾತಾವರಣವನ್ನು ಒದಗಿಸಲು ವಿಬ್‌ಗಯಾರ್ ಗ್ರೂಪ್ ಆಫ್ ಶಾಲೆ ಬದ್ಧವಾಗಿದೆ. ಶಿಕ್ಷಣ ಅನ್ನುವುದು ಶಾಲೆಗಳು ಮತ್ತು ಪೋಷಕರ ಜಂಟಿ ಪ್ರಯಾಣವಾಗಿದೆ ಎಂಬುದು ನಮ್ಮ ನಂಬಿಕೆ. ನಂಬಿಕೆ, ಜವಾಬ್ದಾರಿ ಮತ್ತು ಮುಕ್ತ ಸಂವಹನದ ಆಧಾರದ ಮೂಲಕ ಈ ಪ್ರಯಾಣ ನಡೆಯುತ್ತದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಮೂರು ತ್ರೈಮಾಸಿಕದಲ್ಲಿ ಶುಲ್ಕ ಕಟ್ಟದ ಹೊರತಾಗಿಯೂ ಮುಕ್ಕಾಲು ಭಾಗದಷ್ಟು ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಿದ್ದಾರೆ. ವರ್ಷವಿಡೀ ಶೈಕ್ಷಣಿಕ, ಪಠ್ಯೇತರ ಚಟುವಟಿಕೆಗಳು ಮತ್ತು ಶಾಲಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಪ್ರತೀ ಹಂತದಲ್ಲಿಯೂ ನಾವು ಅರ್ಥೈಸಿಕೊಂಡು ಮತ್ತು ಹೊಂದಾಣಿಕೆಯನ್ನು ಮಾಡಿಕೊಂಡು ಹಲವು ಬಾರಿ ಶುಲ್ಕ ಕಟ್ಟದ ಪೋಷಕರನ್ನು ಭೇಟಿಯಾಗಲು ಕರೆದಿದ್ದೆವು. ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವ ಉದ್ದೇಶ ಹೊಂದಿದ್ದೆವು. ದುರದೃಷ್ಟವಶಾತ್ ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಪೋಷಕರು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಿಲ್ಲ ಎಂದು ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಪ್ರತೀ ಶಿಕ್ಷಣ ಸಂಸ್ಥೆಗಳು ಪಾಲಿಸುವ ನಿಯಮಗಳ ಪ್ರಕಾರವೇ ತಡವಾಗಿ ಶುಲ್ಕ ಪಾವತಿಸಿದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ. ಆದಾಗ್ಯೂ ಅಂಥಾ ನಿಯಮಗಳಿದ್ದರೂ ನಾವು ಸಹಾನುಭೂತಿ, ನ್ಯಾಯಸಮ್ಮತತೆ ಪರವಾಗಿರುವುದರಿಂದ ನಿಜವಾದ ಸಮಸ್ಯೆ ಹೊಂದಿರುವ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದೆವು. ಸಮಸ್ಯೆ ಪರಿಹರಿಸಲು ಏನು ಮಾಡಬಹುದು ಎಂಬುದನ್ನು ಮುಕ್ತವಾಗಿ ಚರ್ಚಿಸಲು ಬಯಸಿದ್ದೆವು ಎಂದು ಹೇಳಿದೆ.
ಈಗಲೂ ಅರ್ಥಪೂರ್ಣ ಚರ್ಚೆಗಳಿಗೆ ನಮ್ಮ ಬಾಗಿಲು ತೆರೆದಿರುತ್ತದೆ. ನಮ್ಮ ಸಂಸ್ಥೆಯ ಮೌಲ್ಯಗಳು ಮತ್ತು ನಮ್ಮ ವಿದ್ಯಾರ್ಥಿಗಳ ಹಿತಾಸಕ್ತಿ ಎರಡನ್ನೂ ಎತ್ತಿಹಿಡಿಯುವ ರೀತಿಯಲ್ಲಿ ಈ ವಿಷಯವನ್ನು ಪರಿಹರಿಸಲು ನಾವು ಆಶಿಸುತ್ತೇವೆ. ವಿಬ್‌ಗಯಾರ್ ಸಂಸ್ಥೆಯು ಸಹಯೋಗ, ಪಾರದರ್ಶಕತೆ ಮತ್ತು ಸಂವಹನದ ಮೇಲೆ ನಂಬಿಕೆ ಇಟ್ಟು ಪ್ರತೀ ಮಗುವಿಗೂ ಉತ್ತಮ ಭವಿಷ್ಯವನ್ನು ರೂಪಿಸಲು ಬದ್ಧವಾಗಿದೆ” ಎಂದು ಸ್ಪಷ್ಟನೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Thu, 13 February 25