ಸಾರಿಗೆ ಸಚಿವರ ಆದೇಶಕ್ಕಿಲ್ಲ ಕಿಮ್ಮತ್ತು: ಬಿಎಂಟಿಸಿ ಸಿಬ್ಬಂದಿಗೆ ಇನ್ನೂ ಬಿಡುಗಡೆಯಾಗಿಲ್ಲ ವೇತನ
ಬೆಂಗಳೂರಿನ ಬಿಎಂಟಿಸಿ ಸಿಬ್ಬಂದಿಗೆ ಮಾರ್ಚ್ 3 ಆದರೂ ವೇತನ ಬಿಡುಗಡೆಯಾಗಿಲ್ಲ. ಸಾರಿಗೆ ಸಚಿವರ ಆದೇಶವನ್ನು ಉಲ್ಲಂಘಿಸಿ ಈ ರೀತಿ ವಿಳಂಬ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತಿಂಗಳ ಮೊದಲ ದಿನ ವೇತನ ಪಾವತಿಸುವ ಸಚಿವರ ಆದೇಶದ ಹೊರತಾಗಿಯೂ, ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮಾರ್ಚ್ 3: ಅಧಿಕಾರಿಗಳ ನಿರ್ಲಕ್ಷದಿಂದ ಬಿಎಂಟಿಸಿ ಸಿಬ್ಬಂದಿಗೆ ವೇತನ ವಿಳಂಬವಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಕ್ಕೂ ಕಿಮ್ಮತ್ತು ನೀಡದೆ ಮಾರ್ಚ್ 3 ಆದರೂ ವೇತನ ಬಿಡುಗಡೆ ಮಾಡದ ಅಧಿಕಾರಿಗಳ ಮೊಂಡುತನದ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ತಿಂಗಳ ಮೊದಲ ದಿನವೇ ವೇತನ ನೀಡಬೇಕು ಎಂದು ಫೆಬ್ರವರಿ 2ನೇ ವಾರ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಹೊರಡಿಸಿದ್ದರು. ಅದರಂತೆ ಮಾರ್ಚ್ ಒಂದರಂದು ಬಿಎಂಟಿಸಿ ಸಿಬ್ಬಂದಿ ಹಾಗೂ ನೌಕರರಿಗೆ ವೇತನ ಬಿಡುಗಡೆ ಆಗಬೇಕಿತ್ತು. ಆದರೆ, ಗಡುವು ಕಳೆದು ಎರಡು ದಿನವಾದರೂ ಇನ್ನೂ ವೇತನ ಬಿಡುಗಡೆಯಾಗಿಲ್ಲ.
ವೇತನ ಭಾರತ ಹಿನ್ನೆಲೆಯಲ್ಲಿ ಬಿಎಂಟಿಸಿ ಅಧಿಕಾರಿಗಳ ವಿರುದ್ಧ ನೌಕರರು ಹಾಗೂ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಸಾರಿಗೆ ಸಚಿವರ ಆದೇಶಕ್ಕೂ ಇವರು ಕಿಮ್ಮತ್ತು ಕೊಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಹೇಗಿತ್ತು ಪದ್ಧತಿ?
ಇದಕ್ಕೂ ಮುನ್ನ ಬಿಎಂಟಿಸಿ ನೌಕರರು ಮತ್ತು ಸಿಬ್ಬಂದಿಗೆ ಪ್ರತಿ ತಿಂಗಳ ಮೊದಲ ವಾರ ವೇತನ ನೀಡಲಾಗುತ್ತಿತ್ತು. ಸಾಮಾನ್ಯವಾಗಿ ಏಳನೇ ತಾರೀಕಿನಂದು ವೇತನ ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ನೌಕರರು ಮತ್ತು ಸಿಬ್ಬಂದಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮನೆ ಬಾಡಿಗೆ ಪಾವತಿ, ಮಕ್ಕಳ ಶಿಕ್ಷಣ ವೆಚ್ಚ ಹಾಗೂ ಇತರ ಖರ್ಚುಗಳನ್ನು ನಿಭಾಯಿಸುವುದು ಅವರಿಗೆ ಸವಾಲಾಗಿತ್ತು. ಹೀಗಾಗಿ ನೌಕರರು ಮತ್ತು ಸಿಬ್ಬಂದಿ ಸಾರಿಗೆ ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಚಿವ ರಾಮಲಿಂಗಾರೆಡ್ಡಿ, ಪ್ರತಿ ತಿಂಗಳ ಮೊದಲ ದಿನವೇ ವೇತನ ಬಿಡುಗಡೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದರು. ಆದರೆ ಆದೇಶಕೆ ಇದೀಗ ಬಿಎಂಟಿಸಿ ಅಕೌಂಟ್ ಡಿಪಾರ್ಟ್ಮೆಂಟ್ ಕಿಮ್ಮತ್ತೇ ನೀಡಿಲ್ಲ. ಇದು ನೌಕರರ ಹಾಗೂ ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.
ಸಾರಿಗೆ ಸಚಿವರ ಆದೇಶದಲ್ಲೇನಿತ್ತು?
1 ನೇ ತಾರೀಖಿನಂದು ಎಲ್ಲಾ ವರ್ಗದ ಸಿಬ್ಬಂದಿಗಳ ವೇತನ ಪಾವತಿ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸ್ಥೆಯಲ್ಲಿ ಉಲ್ಲೇಖಿತ ಸುತ್ತೋಲೆಯನ್ವಯ ಪ್ರತಿ ತಿಂಗಳ 1 ನೇ ತಾರೀಖಿನಂದು ವೇತನ ಪಾವತಿ ಮಾಡುವ ಪದ್ಧತಿಯನ್ನು ಫೆಬ್ರವರಿ-2025 ರಿಂದ ಜಾರಿಗೆ ತರಲಾಗಿದ್ದು, 25/02/2025 ರಂದು ಹಾಜರಾತಿಯನ್ನು ವಾಸ್ತವಿಕ ಹಾಜರಾತಿಯನ್ವಯ ಪೂರ್ಣಗೊಳಿಸಿ ಉಳಿದ 3 ದಿನಗಳಲ್ಲಿ ವೇತನ ಬಿಲ್ಲಿನ ತಯಾರಿಕಾ ಕಾರ್ಯವನ್ನು ಮಾಡಬೇಕಾದ ಕಾರಣ ತಮ್ಮ ವಲಯದ ಘಟಕಗಳ ಓಟಿ ಭತ್ಯೆಗಳ ಮಂಜೂರಾತಿ, ರಜೆ ಆದೇಶಗಳನ್ನು ಕೂಡಲೇ ಮಂಜೂರಾತಿ ಮಾಡುವುದು ಹಾಗೂ ಮಂಜೂರಾತಿ ಪಡೆದ ಪಟ್ಟಿಯನ್ನು ದಿ:25.02.2025 ರಂದು ತಪ್ಪದೇ ಘಟಕದ ಲೆಕ್ಕಪತ್ರ ಇಲಾಖೆಗೆ/ವೇತನ ಬಿಲ್ಲು ತಯಾರಿಸುವ ವಿಷಯ ನಿರ್ವಾಹಕರಿಗೆ ನೀಡಲು ಕ್ರಮ ಕೈಗೊಳ್ಳಲು ತಮ್ಮ ಅಧೀಕ್ಷಕರು/ಮೇಲಿಚಾರಕರಿಗೆ ಸೂಚನೆಯನ್ನು ನೀಡಲು ಈ ಮೂಲಕ ತಿಳಿಸಲಾಗಿದೆ ಎಂದು ಸಾರಿಗೆ ಸಚಿವರ ಆದೇಶಲ್ಲಿ ಉಲ್ಲೇಖಿಸಲಾಗಿತ್ತು.