ಇ-ಕಾಮರ್ಸ್ ಬೈಕ್ ಸವಾರರ ವಿರುದ್ಧ ಕಾರ್ಯಾಚರಣೆ: 9 ಲಕ್ಷ ರೂ. ದಂಡ ವಸೂಲಿ
ಬೆಂಗಳೂರು ಸಂಚಾರ ಪೊಲೀಸರು ಶನಿವಾರ ಇ-ಕಾಮರ್ಸ್ ಬೈಕ್ ಸವಾರರ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 1859 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡಿ, 9.65 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ನಂತರ ಇ-ಕಾಮರ್ಸ್ ಬೈಕ್ ಸವಾರರಿಗೆ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿದರು. ವೈರಲ್ ಆದ ವೀಡಿಯೊ ಕುರಿತು ಸ್ಪಷ್ಟನೆ ನೀಡಲಾಗಿದೆ.

ಬೆಂಗಳೂರು, ಮಾರ್ಚ್ 02: ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಬೆಂಗಳೂರು ಟ್ರಾಫಿಕ್ ಪೊಲೀಸರು (Bengaluru Traffic Police) ಪ್ರತಿ ನಿತ್ಯವೂ ಜಾಗೃತಿ ಮೂಡಿಸುತ್ತಾರೆ. ಆದರೆ, ಕೆಲವರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುತ್ತಾರೆ. ಹೀಗಾಗಿ, ಸಂಚಾರಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತಿದ್ದಾರೆ. ಅದರಂತೆ, ಸಂಚಾರ ನಿಯಮ ಉಲ್ಲಂಘನೆ ಮಾಡಿದ ಇ-ಕಾಮರ್ಸ್ ಬೈಕ್ (E-Commerce Bike) ಸವಾರರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಶನಿವಾರ (ಮಾರ್ಚ್ 02) ವಿಶೇಷ ಕಾರ್ಯಾಚರಣೆ ನಡೆಸಿದರು.
ಬೆಂಗಳೂರು ಸಂಚಾರಿ ಪೊಲೀಸರು ಒಂದೇ ದಿನ 1859 ಪ್ರಕರಣ ದಾಖಲಿಸಿಕೊಂಡಿದ್ದು, 9.65 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ಫುಟ್ಪಾತ್ನಲ್ಲಿ ವಾಹನ ಚಾಲನೆ ಮಾಡಿದ 79 ಮಂದಿಗೆ ದಂಡ ವಿಧಿಸಲಾಗಿದೆ. ಹಾಗೇ ನೋ ಎಂಟ್ರಿಯಲ್ಲಿ ವಾಹನ ಚಾಲನೆ ಮಾಡಿದ 389, ಒನ್ ವೇ ಸಂಚಾರ-354, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ 209, ನೋ ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸಿದ 98, ಸಂಚಾರಕ್ಕೆ ಅಡಚಣೆ ಮಾಡಿದ 148 ಜನರಿಗೆ ದಂಡ ವಿಧಿಸಲಾಗಿದೆ. ಮತ್ತು ಹೆಲ್ಮೆಟ್ ರಹಿತ ಚಾಲನೆ ಮಾಡಿದ 582 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಾಗಿ ಎಲೆಕ್ಟ್ರಿಕ್ ಬೈಕ್ಗಳಿಂದಲೇ ಸಂಚಾರ ನಿಯಮ ಉಲ್ಲಂಘನೆ ಮಾಡಲಾಗಿದೆ.
ಟ್ವಿಟರ್ ಪೋಸ್ಟ್
ನಮ್ಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾಮರ್ಸ್ ದ್ವಿಚಕ್ರ ವಾಹನ ಸವಾರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವನ್ನು ಹಾಕಲಾಗಿರುತ್ತದೆ ಮತ್ತು ಅವರಿಗೆ ಸಂಚಾರ ನಿಯಮಗಳ ಪಾಲನೆಯ ಮಹತ್ವದ ಬಗ್ಗೆ ಮತ್ತು ಅವುಗಳ ಉಲ್ಲಂಘನೆಯಿಂದ ಉಂಟಾಗುವ ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. pic.twitter.com/by2wzSVL3u
— BANASAWADI TRAFFIC BTP (@bwaditrafficps) March 1, 2025
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ ಒಂದರಲ್ಲೇ 142 ಇ-ಕಾಮರ್ಸ್ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ. ಬಳಿಕ, ಪೊಲೀಸರು ಅವರುಗಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಸೆಂಚುರಿ ಸ್ಟಾರ್ ಕಳ್ಳ: 1.45 ಕೋಟಿ ಮೌಲ್ಯದ 100 ಬೈಕ್ ವಶಕ್ಕೆ!
ಸಂಚಾರಿ ಪೊಲೀಸರು ವೈಟ್ ಬೋರ್ಡ್ ಇ-ಕಾಮರ್ಸ್ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ ಎಂಬ ವಿಡಿಯೋ ವೈರಲ್ ಆದ ವಿಚಾರವಾಗಿ ಸಂಚಾರ ಜಂಟಿ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. “ಇದು ಸಂಪೂರ್ಣವಾಗಿ ಸುಳ್ಳು. ವಾಹನದ ನಂಬರ್ ಪ್ಲೇಟ್ ಆಧಾರಿತ ಕಾರ್ಯಾಚರಣೆ ನಡೆಸಿಲ್ಲ. ಇ-ಕಾಮರ್ಸ್ ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಮಾಡಲಾಗಿದೆ. ಇ-ಕಾಮರ್ಸ್ ವಿತರಣಾ ಏಜೆಂಟ್‌ಗಳಿಗೆ ದಂಡದ ನಂತರ, ಸಂಚಾರ ನಿಯಮಗಳು ಮತ್ತು ಸುರಕ್ಷತೆಯನ್ನು ಪಾಲಿಸುವ ಬಗ್ಗೆ ತರಗತಿಯನ್ನು ನೀಡಲಾಗಿದೆ” ಎಂದು ತಿಳಿಸಿದರು.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Sun, 2 March 25








